Advertisement

ವೆಲ್ಲಿನೇಜಿ ಗಾಯನ: ಜಾರು ದಾರಿಯಲ್ಲಿ ಮೇರುಗಿರಿಯತ್ತ ಒಂದು ಯಾನ

06:00 AM Mar 16, 2018 | |

ಆಲಂಪಾಡಿ ವೆಂಕಟೇಶ ಶಾನುಭೋಗ ಸ್ಮಾರಕ 33ನೇ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿ ನೀಡಿದ ವೆಲ್ಲಿನೇಜಿ ಸುಬ್ರಹ್ಮಣ್ಯನ್‌ ಅವರಿಗೆ ಶಾರೀರ ಕೈಕೊಟ್ಟಿತು. ಆದರೂ ಪ್ರಯತ್ನದಿಂದ ಕಛೇರಿಯನ್ನು ಎತ್ತರಕ್ಕೇರಿಸಲು ಸಾಧ್ಯವಾದುದು ಅವರ ಪುತ್ರ ಹದಿನೈದರ ಬಾಲಕ ಭಾರದ್ವಾಜರ ಪಾಂಡಿತ್ಯ. ತನ್ನ ಕಲಾ ಪರಂಪರೆಯನ್ನು ಅವರು ಯಶಸ್ವಿಯಾಗಿ ಮುಂದಿನ ಪೀಳಿಗೆಗೆ ದಾಟಿಸಿದ್ದಾರೆ ಎಂಬುದಕ್ಕೆ ಈ ಕಛೇರಿ ಸಾಕ್ಷಿಯಾಯಿತು. ಈ ಬಾಲ ಪ್ರತಿಭೆ ಸಹ ಗಾಯಕನಾಗಿ ಹಾಡಿ ಕಿಕ್ಕಿರಿದು ನೆರೆದಿದ್ದ ಸಭಿಕರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದುದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಕಾರಣವಾಯಿತು. ಅಟತಾಳ ವರ್ಣ ವಿರಿಬೋಣಿಯಿಂದ ಕಛೇರಿ ಆರಂಭಿಸಿದ ಸುಬ್ರಹ್ಮಣ್ಯನ್‌ ಬಳಿಕ ಸುಮುಖಸ್ಯ ಏಕದಂತಸ್ಯ… ಶ್ಲೋಕದೊಡನೆ ಮಯೂರಂ ಅವರ ಜಯ ಜಯ ಗಣಪತಿ…ಯಲ್ಲಿ ಹಂಸಧ್ವನಿಯನ್ನು ವಿಸ್ತಾರವಾಗಿ ಪೋಷಿಸಿದರು. ದೀಕ್ಷಿತರ ಸಂರಕ್ಷಿತೋಹಂ… ಬಳಿಕ ಅವರದ್ದೇ ಕೃತಿ ಅಖೀಲಾಂಡೇಶ್ವರಿ… (ದ್ವಿಜಾವಂತಿ, ಆದಿ) ವಿಸ್ತಾರವಾದ ರಾಗಾಲಾಪನೆ ಕಲ್ಪನಾ ಸ್ವರಗಳೊಂದಿಗೆ ಹೃದ್ಯವಾಗಿ ಮೂಡಿಬಂತು. ಕರ್ಣರಂಜಿನಿ, ಶೋಭಿಲ್ಲು ಸಪ್ತಸ್ವರಗಳ (ಜಗನ್ಮೋಹಿನಿ, ರೂಪಕ) ಪ್ರಸ್ತುತಿಯ ಬಳಿಕ ಪ್ರಧಾನ ಕೃತಿಯಾಗಿ ತೋಡಿಯ ಕರಣಚೂಡ ಮೂಡಿಬಂತು. ಆಲಾಪನೆ, ಕಲ್ಪನಾ ಸ್ವರಗಳ ಪರಿಪೂರ್ಣ ಆರೈಕೆ ಪಡೆದ ಈ ಕೃತಿಯಲ್ಲಿ ಪರಾಶಕ್ತಿ ನಾಯುಗ ಚಿತ್ತ… ಎಂಬಲ್ಲಿ ನೆರವಲ್‌ ಹಾಡಿದರು. ಇಲ್ಲಿ ಸಹ ಗಾಯಕ ಭಾರದ್ವಾಜರ ಸ್ಪರ್ಧಾತ್ಮಕ ಹಾಡುಗಾರಿಕೆ ಜನಮೆಚ್ಚುಗೆ ಪಡೆಯಿತು. ಮುಂದೆ ಭಜನ್‌, ರಾಗಮಾಲಿಕೆಯಲ್ಲಿ ವಂದೇ ಮಾತರಂನ್ನು ಸುರುಟ, ಕಲ್ಯಾಣಿ, ಮನೋರಂಜಿನಿ, ಮಾಧ್ಯಮಾವತಿಗಳಲ್ಲಿ ಹಾಡಿ ಸುಬ್ರಹ್ಮಣ್ಯನ್‌ ಎರಡೂ ಮುಕ್ಕಾಲು ತಾಸುಗಳ ಕಛೇರಿಗೆ ಮಂಗಳ ಹಾಡಿದರು. ವಯಲಿನ್‌ನಲ್ಲಿ ಸಹಕರಿಸಿದ ಮಾಂಜೂರ್‌ ರಂಜಿತ್‌ ಬೆರಳುಗಾರಿಕೆಯಲ್ಲಿ ಅನುಸರಣಿಯಲ್ಲಿ ಪಕ್ವತೆಯನ್ನು ಮೆರೆದರು. ಮೃದಂಗದಲ್ಲಿ ಡಾ| ಶಂಕರ್‌ ರಾಜ್‌, ಘಟದಲ್ಲಿ ಎಲಾಂಕುಲಮ್‌ ದೀಪು ಒಂದು ಉತ್ತಮ ತನಿ ಆವರ್ತನವಿತ್ತು ಮಿದುಳಿಗೆ ಕಸರತ್ತು ಒದಗಿಸಿದರು.

Advertisement

ಕೆ.ಜಿ. ಶಾನುಭೋಗ್‌ ಉದ್ಘಾಟಿ ಸಿದರು. ಮಣಿಕೃಷ್ಣ ಸ್ವಾಮಿ ಎಕಾಡೆ ಮಿಯ ಪಿ. ನಿತ್ಯಾನಂದ ರಾವ್‌ ಅತಿಥಿಗಳಾಗಿದ್ದರು. ತಿರುಪತಿ ಸಂಸತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದ ಡಾ| ಬಳ್ಳಪದವು ಮಾಧವ ಉಪಾಧ್ಯಾಯರನ್ನು “ಎ.ವಿ.ಎಸ್‌. ಪ್ರಶಸ್ತಿ 2018′ ನೀಡಿ ಗೌರವಿಸಲಾಯಿತು.ಇದರ ಅಂಗವಾಗಿ ನಡೆದ ಸಂಗೀತಾರಾಧನಾ ಕಾರ್ಯ ಕ್ರಮದಲ್ಲಿ ರಾಧಾ ಮುರಳೀಧರ್‌, ಗೋವಿಂದನ್‌ ನಂಬ್ಯಾರ್‌, ಡಾ| ಶೋಭಿತಾ ಸತೀಶ್‌, ವೇಣುಗೋಪಾಲ ಶಾನುಭೋಗ್‌, ನಯನಾರಾಜ್‌, ಪ್ರಭಾಕರ ಕುಂಜಾರು, ಪುರುಷೋತ್ತಮ ಪುಣಚಿತ್ತಾಯ, ಬರ್ಡಕ್ಕೆರೆ ಶ್ರೀಧರ ಭಟ್‌ ಮೊದಲಾದವರು ಭಾಗವಹಿಸಿದ್ದರು.                                      

ಸುಕುಮಾರ ಆಲಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next