Advertisement

Lok Sabha Election ಬಳಿಕ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆ: ಪ್ರೊ| ಬೆಟ್ಟಕೋಟೆ

12:33 AM Apr 04, 2024 | Team Udayavani |

ಮಂಗಳೂರು: ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಶಿಕ್ಷಕರ ನೋಂದಣಿಯ ಪರಿಶೀಲನೆ ಸಾಗುತ್ತಿದ್ದು, ಇದರಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿದೆ. ಲೋಕಸಭಾ ಚುನಾವಣೆ ನೀತಿಸಂಹಿತೆ ಮುಕ್ತಾಯಗೊಂಡ ಕೂಡಲೇ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ| ನಾಗೇಶ್‌ ಬೆಟ್ಟಕೋಟೆ ತಿಳಿಸಿದರು.

Advertisement

ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಶಿಕ್ಷಕರ ನೋಂದಣಿ ಪರಿಶೀಲನೆ ಬಳಿಕ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ, ನೃತ್ಯ, ತಾಳವಾದ್ಯಗಳ ಪರೀಕ್ಷೆ ಗಂಗೂಬಾಯಿ ಹಾನಗಲ್‌ ವಿ.ವಿ.ಗೆ ಈ ವರ್ಷ ಹಸ್ತಾಂತರಗೊಂಡಿದೆ.

ಪ್ರಸಕ್ತ ರಾಜ್ಯದ ಎಲ್ಲ ಜಿಲ್ಲೆಗಳಿಂದ 3,560 ಶಿಕ್ಷಕರು ನೋಂದಣಿಯಾಗಿದ್ದು, 17,670 ಮಂದಿ ವಿದ್ಯಾರ್ಥಿಗಳು ಸಂಗೀತ, ನೃತ್ಯ ಪರೀಕ್ಷೆ ಬರೆಯಲಿದ್ದಾರೆ ಎಂದರು.

439 ಮಂದಿ ನೋಂದಣಿ
ಮೊದಲ ಹಂತದಲ್ಲಿ ಶಿಕ್ಷಕರ ನೋಂದಾವಣಿಯನ್ನು ಆನ್‌ಲೈನ್‌ನಲ್ಲಿ ಪೂರೈಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದ.ಕ., ಉಡುಪಿ, ಪುತ್ತೂರಿನ 439 ಮಂದಿ ಶಿಕ್ಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ ಕೊಡಗು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಬೆಂಗಳೂರು, ಧಾರವಾಡ, ಗದಗ, ಹುಬ್ಬಳ್ಳಿ, ದಾವಣಗೆರೆ, ಹರಿಹರ, ಚಿತ್ರದುರ್ಗ, ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬಾಕಿ ಇದೆ ಎಂದರು.

Advertisement

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಡಿ ಕಳೆದ ಸಾಲಿನಲ್ಲಿ ಸಂಗೀತ, ನೃತ್ಯ ಪರೀಕ್ಷೆ ಬರೆದು ಅನುತ್ತೀರ್ಣ ಆದವರು ಅಥವಾ ತಪ್ಪು ಫಲಿತಾಂಶ ಬಂದರೆ, ಅಂಥವರು ಈಗ ವಿ.ವಿ. ಅಡಿಯಲ್ಲಿ ಮರು ಪರೀಕ್ಷೆ ಬರೆಯುವುದು ಅನಿವಾರ್ಯವಾಗಿದೆ. ಆದರೆ ಅವರ ಪರೀಕ್ಷಾ ಫಲಿತಾಂಶವನ್ನು ಮಂಡಳಿಯ ಹಿಂದಿನ ದಾಖಲೆಗಳು ಪೂರ್ತಿಯಾಗಿ ವಿ.ವಿ.ಗೆ ಹಸ್ತಾಂತರಗೊಂಡ ಬಳಿಕವೇ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next