Advertisement

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

02:43 PM Apr 19, 2024 | Team Udayavani |

“ನಾನು ರಾಜಮಾರ್ಗದಲ್ಲಿ ಬಂದವ. ನನಗೆ ಕೈ ಕಟ್ಟಿ ನಿಂತು ಕೆಲಸ ಕೇಳಿ ಅಭ್ಯಾಸವಿಲ್ಲ…’ – ಹೀಗೆ ಹೇಳಿ ನಕ್ಕರು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ. ನಗುವಿನ ಹಿಂದೆ ಒಂದಷ್ಟು ವಿಷಯಗಳು ಅಡಗಿದ್ದವು. ತಮ್ಮ ಸಾಹಿತ್ಯ, ಸಂಗೀತದ ಮೂಲಕ ಪರಭಾಷಾ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ ಹಂಸಲೇಖ. ಹಂಸಲೇಖ ಹಿಟ್ಸ್‌ ಎಂದು ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂತಹ ಖ್ಯಾತಿಯ ಹಂಸಲೇಖ ಇತ್ತೀಚಿನ ವರ್ಷಗಳಲ್ಲಿ ಸಂಗೀತದಿಂದ ದೂರ ಉಳಿದಿದ್ದಾರೆ. ಯಾರೇ ಹೋಗಿ ತಮ್ಮ ಸಿನಿಮಾಗಳಿಗೆ ಸಂಗೀತ ನೀಡಿ ಎಂದರೆ, ಅವರನ್ನು “ಆಗಲ್ಲ’ ಎಂದು ವಾಪಾಸ್‌ ಕಳಿಸುತ್ತಿದ್ದಾರೆ. ಅಷ್ಟಕ್ಕೂ ಯಾಕಾಗಿ ಹಂಸಲೇಖ ಯಾಕಾಗಿ ಸಂಗೀತ ನಿರ್ದೇಶನದಿಂದ ದೂರವಿದ್ದಾರೆ, ಸಂಗೀತದ ಬಗ್ಗೆ ಬೇಸರವಾಗಿದೆಯಾ ಅಥವಾ ಇವತ್ತಿನ ಚಿತ್ರರಂಗದ ವ್ಯವಸ್ಥೆಗೆ ಅವರು ಒಗ್ಗಿಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆ ಸಹಜ. ಇತ್ತೀಚೆಗೆ “ಕಲ್ಜಿಗ’ ಸಿನಿಮಾ ಪತ್ರಿಕಾಗೋಷ್ಠಿಗೆ ಬಂದ ಹಂಸಲೇಖ ಅವರ ಮುಂದೆ ಈ ಪ್ರಶ್ನೆಗಳನ್ನು ಇಟ್ಟಾಗ ಹಂಸಲೇಖ ಮನಸ್ಸು ಬಿಚ್ಚಿ ಮಾತನಾಡಿದರು. ಅವರ ಮಾತಲ್ಲಿ ಇವತ್ತಿನ ಕೆಲವು ವ್ಯವಸ್ಥೆಯ ಬಗ್ಗೆ ಬೇಸರವಿತ್ತು, ಒಗ್ಗಿಕೊಳ್ಳಲು ಕಷ್ಟ ಎಂಬ ಮಾತೂ ಇತ್ತು.

Advertisement

ಈ ಕುರಿತು ಮಾತನಾಡುವ ಹಂಸಲೇಖ, “ಅದೊಂದು ಒಂದು ದಿನ ಎನ್‌.ಎಸ್‌.ರಾವ್‌ ಅವರು ನನಗೆ ರವಿಚಂದ್ರನ್‌ ಅವರನ್ನು ಪರಿಚಯ ಮಾಡಿಸಿದರು. ಅಲ್ಲಿಂದ ನನಗೆ ಎಲ್ಲಿ ಹೋಗಬೇಕು, ಯಾರನ್ನೋ ಅವಕಾಶ ಕೇಳಬೇಕು ಇದ್ಯಾವ ಸಂದರ್ಭವೂ ಬರಲಿಲ್ಲ. ಯಜಮಾನರು ಸೀದಾ ರಾಜಮಾರ್ಗದಲ್ಲಿ ನನ್ನನ್ನ ಕರೆದುಕೊಂಡು ಹೋದರು. ಅದಾದ ಮೇಲೆ ದೊಡ್ಡದೊಡ್ಡ ನಟರ ಸಿನಿಮಾಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕ್ರಮೇಣ ಕಾಲ ಬದಲಾಗುತ್ತಾ ಹೋಯಿತು. ಹೀರೋಗಳು ಮನೆಗೆ ಕರೆಯೋದಕ್ಕೆ ಶುರು ಮಾಡಿದರು. ಕೆಲಸ ಬೇಕು ಅಂದರೆ ಮನೆಗೆ ಹೋಗಿ ಮಾತನಾಡಬೇಕು, ಅವರು ಹೇಳಿದ್ದನ್ನು ಕೇಳಬೇಕು ಎಂಬ ಪರಿಸ್ಥಿತಿ ಬಂತು. ಅದೆಲ್ಲಾ ನನಗೆ ಬಹಳ ಕಷ್ಟದ ವಿಷಯ. ಹಾಗಾಗಿ, ಬೇರೆ ಏನೋ ಮಾಡೋಣ ಅಂತ ನಾನು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡೋದನ್ನ ಕಡಿಮೆ ಮಾಡಿದೆ. ಆದರೂ ಕೆಲವರು ಬಿಡುತ್ತಿರಲಿಲ್ಲ. ನೀವೇ ಬೇಕು ಎಂದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾನು ಕಮಾಂಡ್‌ ನ‌ಲ್ಲಿದ್ದರೆ ಅವರು ಒದ್ದಾಡುತ್ತಾರೆ. ಬಗ್ಗಿದರೆ ಗುಣಮಟ್ಟ, ಕೆಲಸ ಹಾಳಾಗುತ್ತದೆ. ಹಾಗಾಗಿ, ನಾನು ಸಿನಿಮಾದಿಂದ ದೂರ ಉಳಿಯಲು ಶುರು ಮಾಡಿದೆ. ಈಗ ಅದರ ವಿರುದ್ಧ ತರ್ಕ, ಮಾತು ಯಾವುದೂ ಇಷ್ಟವಿಲ್ಲ. Music is honey, music is money, music is many.. ಅಷ್ಟು ಹೇಳಬಲ್ಲೆ…’ಎಂದು ತಾವು ಸಂಗೀತದಿಂದ ಯಾಕೆ ದೂರವಾಗುತ್ತಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ಕೊಟ್ಟರು ಹಂಸಲೇಖ.

ಒದ್ದಾಡಿ ಮಾಡಿದರೇನೇ ಗ್ರೇಟ್‌!

ಕನ್ನಡ ಚಿತ್ರರಂಗದ ಹಾಡುಗಳ ಟ್ರೆಂಡ್‌ ಬದಲಾದ ಹಾಗೂ ಹೊಸ ಸಿನಿಮಾ ನಿರ್ದೇಶಕರ ಮನಸ್ಥಿತಿ ಬಗ್ಗೆಯೂ ಹಂಸಲೇಖ ಮಾತನಾಡಿದರು. “ಕೆಲವರು ಬಂದ ತಕ್ಷಣ ನಾನು ಹಾಡುಗಳನ್ನು ಕೊಡುತ್ತಿದ್ದೆ. ಹಾಗೆ ಒಮ್ಮೆಲೇ ಕೊಟ್ಟರೆ ಅದು ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಅವರು ತುಂಬಾ ತಲೆ ಕೆಡಿಸ್ಕೋಬೇಕು ಅಂತ ನಿರೀಕ್ಷೆ ಮಾಡುತ್ತಿದ್ದರು. ಹುಡುಗರು ಯಾವ ಟ್ರೆಂಡಿ ಹಾಡುಗಳನ್ನು ಕೇಳಿರುತ್ತಾರೋ, ಅದನ್ನು ನಾನು ಮೊದಲೇ ಕೇಳಿರುತ್ತಿದ್ದೆ. ಅವರು ಇಂತದ್ದು ಬೇಕು ಎಂದ ಹೇಳ್ಳೋದಕ್ಕೆ ಒದ್ದಾಡುವಾಗ, ಅವರಿಗೆ ಏನು ಬೇಕು ಅಂತ ನನಗೆ ಗೊತ್ತಾಗೋದು. ಅವರು ಹೇಳಿದ್ದನ್ನೇ ಸ್ವಲ್ಪ ಬದಲಾಯಿಸಿ ಕೊಟ್ಟರೂ ಆಗೋದು. ಅವರಲ್ಲಿ ಸರಿಯಾದ ಹೋಮ್‌ ವರ್ಕ್‌ ಇರುತ್ತಿರಲಿಲ್ಲ. ಬೇಗ ಕೆಲಸ ಮಾಡಿಕೊಟ್ಟರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಇದೆಲ್ಲ ನನಗೆ ಸರಿ ಬರುತ್ತಿರಲಿಲ್ಲ. ಇಷ್ಟು ದಿನ ಸಂಗೀತವನ್ನು ಸಖತ್‌ ಎಂಜಾಯ್‌ ಮಾಡಿದ್ದೇನೆ. ಇದೆಲ್ಲದರ ಜೊತೆಗೆ ಸಿನಿಮಾ ಸಂಗೀತ ಕ್ರಮೇಣ ಲೈವ್‌ ಆರ್ಕೆಸ್ಟ್ರಾದಿಂದ ಡಿಜಿಟಲ್‌ಗೆ ಬಂತು. ಮುಂಚೆ 60 ಜನ ಮಾಡೋ ಕೆಲಸ, ಈಗ ಒಬ್ಬ ಮಾಡುವ ಹಾಗಾಗಿದೆ. ಎಲ್ಲವೂ ಕೀಬೋರ್ಡ್‌ನಲ್ಲಿ ಪ್ಲಾನ್‌ ಆಗೋಕೆ ಶುರುವಾಯಿತು. ನಾವು ಲೈವ್‌ ಮ್ಯೂಸಿಕ್‌ ಮಾಡುವಾಗ, ಅಲ್ಲಿ ಏನೇನು ಪರಿಕರಗಳು ಇರುತ್ತವೆ ಎಂದು ಚೆನ್ನಾಗಿ ಗೊತ್ತಿರೋದು. ಅದನ್ನೆಲ್ಲಾ ಬಳಸಿಕೊಂಡು ಒಂದು ಹಾಡನ್ನು ಪ್ಲಾನ್‌ ಮಾಡುತ್ತಿದ್ದೆವು. ಏನು ಬೇಕು, ಏನು ಬೇಡ ಎಂದು ಮಾತಾಡಿಕೊಂಡು ಕೆಲಸ ಸಹ ಬೇಗ ಆಗುತ್ತಿತ್ತು. ಎರಡು ಗಂಟೆಯಲ್ಲಿ ಒಂದು ಹಾಡು ಮೂಡಿಬರೋದು. ಈಗ ಕೀಬೋರ್ಡ್‌ ನಲ್ಲಿ ಕಂಪೋಸ್‌ ಮಾಡುವುದರಿಂದ ನಾವು ಬರೆಯೋದೇ ಬೇರೆ, ಅದು ಆಗೋದೇ ಬೇರೆ.. ಇದರಿಂದ ಬಜೆಟ್‌ ಸಹ ಜಾಸ್ತಿ ಆಗುತ್ತಿದೆ. ಇದಲ್ಲಾ ನೋಡಿ ಸಾಕಾಯ್ತು. ಕೀಬೋರ್ಡ್‌ ಪ್ರೋಗ್ರಾಂನಿಂದ ಕಂಟ್ರೋಲ್‌ ತಪ್ಪಿ ಹೋಗುತ್ತದೆ ಮತ್ತು ಎಲ್ಲಾ ಹಾಡುಗಳು ಒಂದೇ ತರಹ ಕೇಳಿಸೋಕೆ ಶುರುವಾಯ್ತು. ಇದೆಲ್ಲದರಿಂದ ತಪ್ಪಿಸಿಕೊಳ್ಳೋಕೆ ಸಂಗೀತ ನೀಡಿ ಎಂದು ಬಂದವರಲ್ಲಿ ಜಾಸ್ತಿ ದುಡ್ಡು ಹೇಳ್ಳೋಕೆ ಶುರು ಮಾಡಿದೆ’ ಎನ್ನುತ್ತಾ ನಕ್ಕರು ಹಂಸಲೇಖ.

Advertisement

ಲೈವ್‌ ಮಾಡೋದು ಕಷ್ಟ..

ಹಂಸಲೇಖ ಲೈವ್‌ ಆರ್ಕೆಸ್ಟ್ರಾದಲ್ಲಿ ಖುಷಿ ಕಂಡವರು. ದೊಡ್ಡ ತಂಡದೊಂದಿಗೆ ಲೈವ್‌ ಮಾಡಿ, ಅದ್ಭುತವಾದ ಹಾಡುಗಳನ್ನು ನೀಡಿದವರು. ಆದರೆ, ಇವತ್ತಿನ ಸಮಯದಲ್ಲಿ ಲೈವ್‌ ಮಾಡೋದು ಕಷ್ಟ ಎನ್ನುವುದು ಅವರ ಮಾತು.

“ಇವತ್ತಿನ ಸಮಯದಲ್ಲಿ ಲೈವ್‌ ಮಾಡೋದು ಬಹಳ ಕಷ್ಟ. ಈಗ ಒಂದು ಹಾಡು ಮಾಡುವುದಕ್ಕೆ ಕಡಿಮೆ ಎಂದರೂ ಮೂರು ಲಕ್ಷ ಬೇಕಾಗುತ್ತದೆ. ನಾವು ಮೊದಲು ಆ ಹಾಡನ್ನು 25 ಸಾವಿರಕ್ಕೆ ಮಾಡುತ್ತಿದ್ದೆವು. ಇನ್ನು, ಕಮ್ಯುನಿಕೇಶನ್‌ ಬಹಳ ಕಷ್ಟ. ನಾವೇನೋ ಹೇಳಿರುತ್ತೇವೆ. ಅವನು ಅರ್ಧ ಮಾಡಿ ಹೊರಟು ಹೋಗುತ್ತಾನೆ. ಬಿಡುವಿದ್ದಾಗ ಏನೋ ಮಾಡಿ ಕಳಿಸುತ್ತಾನೆ. ಅದು ಎಲ್ಲೆಲ್ಲೋ ರೌಂಡ್‌ ಹೊಡೆದು ಬರುವಷ್ಟರಲ್ಲಿ ಇನ್ನೇನೋ ಆಗಿರುತ್ತದೆ ಎನ್ನುತ್ತಾರೆ.

ನಾನು ಯಾರಿಗೆ ಬರೆಯಲಿ ಸಾಹಿತ್ಯ?

ನೀವ್ಯಾಕೆ ಈಗ ಸಾಹಿತ್ಯ ಬರೆಯಲ್ಲ… ಹೀಗೊಂದು ಪ್ರಶ್ನೆ ಹಂಸಲೇಖ ಅವರಿಗೆ ಎದುರಾಗುತ್ತಲೇ ಇರುತ್ತದೆ. ಈ ಪ್ರಶ್ನೆಯನ್ನು ಹಂಸಲೇಖ ಅವರ ಮುಂದಿಟ್ಟರೆ, “ಯಾರಿಗೆ ಬರೆಯಲಿ ಸಾಹಿತ್ಯ?’ ಎಂದು ಮರುಪ್ರಶ್ನೆ ಹಾಕುತ್ತಾರೆ. “ಸಂಗೀತ ಮಾಡುವುದೇ ಕಷ್ಟದ ಕೆಲಸ. ಇನ್ನು, ಅವರನ್ನು ಕೂರಿಸಿಕೊಂಡು, ಬರೆಯೋದು, ತೆಗೆದು ಹಾಕೋದು… ಇವೆಲ್ಲಾ ಸರಿ ಹೋಗಲ್ಲ’ ಎನ್ನುತ್ತಾರೆ.

ಕೈ ಹಿಡಿದ ರಿಯಾಲಿಟಿ ಶೋ

ಹಂಸಲೇಖ ಅವರು ಈಗ ಕಿರುತೆರೆ ವಾಹಿನಿಯ ರಿಯಾಲಿಟಿ ಶೋನಲ್ಲೂ ಬಿಝಿ. ಇದು ಅವರಿಗೆ ಖುಷಿ ನೀಡಿದ್ದು ಸುಳ್ಳಲ್ಲ. ಈ ಕುರಿತು ಮಾತನಾಡುವ ಅವರು, “ನಿಜ ಹೇಳಬೇಕೆಂದರೆ, ಇವತ್ತು ರಿಯಾಲಿಟಿ ಶೋಗಳಿಂದಲೇ ಊಟ ಮಾಡುತ್ತಿರುವುದು. ಚಿತ್ರರಂಗದಲ್ಲಿ ನಮ್ಮನ್ನು ಯಾರು ಕೇಳುತ್ತಾರೆ? ಒಂದು ಸಾರಿ ಆಚೆ ಹೋದರೆ ಮುಗಿದು ಹೋಯ್ತು. ಚಿತ್ರರಂಗಕ್ಕಿಂತ ಹೆಚ್ಚು ಗೌರವ, ಸ್ವಾತಂತ್ರ್ಯ, ದುಡ್ಡು ನನಗೆ ಅಲ್ಲಿ ಸಿಕ್ಕಿದೆ. ದೊಡ್ಡ ಮೈಲೇಜ್‌ ಸಿಗುತ್ತಿದೆ. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ, ಗೌರವ ಸಿಗುತ್ತಿದೆ. ನನ್ನ ಹಾಡುಗಳ ಬಗ್ಗೆ ಎಲ್ಲರೂ ಮಾತಾಡುತ್ತಿರುತ್ತಾರೆ’ ಎಂದು ರಿಯಾಲಿಟಿ ಶೋ ಬಗ್ಗೆ ಹೇಳುತ್ತಾರೆ

ಈ ವರ್ಷ ನಿರ್ದೇಶನ ಗ್ಯಾರಂಟಿ…

ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ಹಂಸಲೇಖ ಅವರ ಕನಸು. ಆ ಕುರಿತು ಆಗಾಗ ಸುದ್ದಿಗಳು ಬರುತ್ತಿದ್ದರೂ, ಸಿನಿಮಾ ಇನ್ನಷ್ಟೇ ಆರಂಭ ಆಗಬೇಕು. ಆದರೆ, ಈ ವರ್ಷ ಸಿನಿಮಾ ಮಾಡೋದು ಗ್ಯಾರಂಟಿ ಎನ್ನುತ್ತಾರೆ ಹಂಸಲೇಖ. ” ಈ ವರ್ಷ ಸಿನಿಮಾ ಮಾಡೋದು ಪಕ್ಕಾ. ಈಗ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದೇನೆ. ಸದ್ಯದಲ್ಲೇ ಘೋಷಿಸುತ್ತೇನೆ’ ಎನ್ನುತ್ತಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next