Advertisement

ಮುಂದೇನು? ಸಂದಿಗ್ಧದಲ್ಲಿ ಇಡೀ ಶೈಕ್ಷಣಿಕ ವ್ಯವಸ್ಥೆ

01:34 PM Apr 22, 2020 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯವರೆಗೆ ಶಿಕ್ಷಣ ಸಂಸ್ಥೆಗಳು ರಜೆಯಲ್ಲಿವೆ. ಜತೆಗೆ ಪ್ರಸಕ್ತ ಶೈಕ್ಷಣಿಕ ವರ್ಷ ಕೊನೆಗೊಳಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷವನ್ನು ಯಾವತ್ತಿನಂತೆ ಆರಂಭಿಸಲೂ ಆಗದೆ ಸಂದಿಗ್ಧಕ್ಕೆ ಸಿಲುಕಿವೆ.

Advertisement

ಮಾರ್ಚ್‌ನಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 1ರಿಂದ 9ನೇ ತರಗತಿವರೆಗೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ. ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಬಾಕಿಯಿದೆ. ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಇನ್ನು ನಡೆಯಬೇಕು. ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ, ಸ್ನಾತಕೋತ್ತರ ಕೋರ್ಸ್‌ಗಳ ಅಂತಿಮ ಪರೀಕ್ಷೆ ನಡೆದಿಲ್ಲ. ಐಐಎಂ, ಐಐಎಸ್ಸಿಗೂ ರಜೆ ಘೋಷಣೆ ಮಾಡಲಾಗಿದೆ. ನೀಟ್‌, ಸಿಇಟಿ, ಜೆಇಇ ಸಹಿತವಾಗಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಬೇಕಿವೆ. ಶೈಕ್ಷಣಿಕ ಚಟುವಟಿಕೆ ಸ್ತಬ್ಧವಾಗಿರುವುದರಿಂದ ಕೊರೊನಾ ಪರಿಸ್ಥಿತಿ ಸುಧಾರಣೆಯಾಗಿ ಕನಿಷ್ಠ ಮೂರರಿಂದ ಐದು ತಿಂಗಳು ಈ ಎಲ್ಲ ಕಾರ್ಯಗಳನ್ನು ಸರಿದೂಗಿಸಲು ಬೇಕಿದೆ ಎಂಬುದು ಶೈಕ್ಷಣಿಕ ತಜ್ಞರ ಅಭಿಪ್ರಾಯವಾಗಿದೆ.

ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಮತ್ತು ಪುನರ್‌ ಮನನ ತರಗತಿ ಇತ್ಯಾದಿ ಕುರಿತು ಸರಕಾರ ಲಾಕ್‌ಡೌನ್‌ ಅವಧಿ ಮುಗಿದ ಅನಂತರ ಸೂಕ್ತ ನಿರ್ಧಾರ ಪ್ರಕಟಿಸಲಿದೆ. ಆದರೆ ಸಾಮಾಜಿಕ ಅಂತರ ಇನ್ನೂ ಕೆಲವು ತಿಂಗಳು ಅಗತ್ಯವಾಗಿ ಅನುಸರಿಸಬೇಕಾಗಬಹುದು. ಶೈಕ್ಷಣಿಕ ವರ್ಷ ವಿಳಂಬವಾದರೂ ಅದನ್ನು ಸರಿದೂಗಿಸಲು ಅಗತ್ಯವಾದ ಪಠ್ಯಕ್ರಮವೂ ಎನ್‌ಸಿಇಆರ್‌ಟಿ ಮೂಲಕ ಬರಬಹುದು. ಇವೆಲ್ಲದಕ್ಕೂ ಶಿಕ್ಷಕರು, ಪಾಲಕ, ಪೋಷಕರು ಸಿದ್ಧರಾಗಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಅದನ್ನು ಹೊರೆಯಾಗದಂತೆ ನೋಡಿ ಕೊಳ್ಳಬೇಕು ಎನ್ನಲಾಗಿದೆ. ಯಾವುದೇ ವಿಶ್ವವಿದ್ಯಾಲಯವು ಸಮರ್ಪಕವಾಗಿ ಕಾರ್ಯನಿರ್ವಹಿಸಲೂ ಸಾಧ್ಯವಾಗುತ್ತಿಲ್ಲ. ಅನೇಕ ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಿವೆ.

ವಿಧಾನ ಬದಲು
ಎಸೆಸೆಲ್ಸಿ ವಾರ್ಸಿಕ ಪರೀಕ್ಷೆ ವಿಧಾನ ಬದಲಿಸಿಕೊಂಡು ಶಾಲಾ ಹಂತದಲ್ಲೇ ನಡೆಸಿ, ಅಲ್ಲಿನ ಶಿಕ್ಷಕರೇ ಮೌಲ್ಯಮಾಪನ ಮುಗಿಸಿ ಮಂಡಳಿಗೆ ಕಳುಹಿಸಬಹುದು. ಜೂನ್‌ ಒಳಗೆ ಮಾಡಿ ಮುಗಿಸಬೇಕು. ಪೂರಕ ಪರೀಕ್ಷೆ ಕಷ್ಟವಾಗಬಹುದು. ಎನ್‌ ಸಿಇಆರ್‌ಟಿ ಕೆಲವೊಂದು ರೂಪುರೇಷೆ ಸಿದ್ಧಪಡಿಸುತ್ತಿದೆ. ಸಾಮಾಜಿಕ ಅಂತರ ಕೊರೊನಾಗೆ ಔಷಧ ಕಂಡುಹಿಡಿಯುವ ವರೆಗೂ ಬೇಕಾಗಬಹುದು. ಮಾಧ್ಯಮಗಳ ಬಳಕೆ ಈ ಸಮಯದಲ್ಲಿ ಅತಿ ಹೆಚ್ಚು ಮಾಸಬೇಕು. ಡಿಎಸ್‌ಆರ್‌ಟಿ ಇದಕ್ಕೆ ಬೇಕಾದ ಸಿದ್ಧತೆ ಮಾಡಬೇಕು.
-ಡಾ| ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next