ಮಲ್ಪೆ: ಕಳೆದ 7-8 ವರ್ಷಗಳಿಂದ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರಿನ ಆವರಣ ಗೋಡೆಯ ಬದಿಯ ತೋಡಿನಲ್ಲಿ ಹರಿಯುತ್ತಿದ್ದ ಕೊಳಚೆ ನೀರಿಗೆ ಕೊನೆಗೂ ಮುಕ್ತಿ ದೊರಕಿದೆ.
ಈ ವಿದ್ಯಾಸಂಸ್ಥೆಯಲ್ಲಿ 1ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಳಚೆ ನೀರಿನಿಂದ ಶಾಲಾ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಿದ್ದು, ಈ ಗಲೀಜು ನೀರನ್ನು ಮೆಟ್ಟಿಕೊಂಡು ಕಾಲೇಜು ಪ್ರವೇಶಿಸ ಬೇಕಾಗಿತ್ತು. ಪರಿಸರದ ಸುತ್ತಲೂ ಸೊಳ್ಳೆ ಕಾಟ ಹೆಚ್ಚಾಗುತ್ತಿದ್ದು ಸಾಂಕ್ರಮಿಕ ರೋಗ ಭೀತಿಯೂ ಎದುರಾಗಿತ್ತು. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಪಾಠ ಕೇಳಬೇಕಾದ ಸ್ಥಿತಿಯಲ್ಲಿದ್ದು ಈ ಸಮಸ್ಯೆಯ ಬಗ್ಗೆ ಶಾಲಾ ಆಡಳಿತ ವರ್ಗ ಈ ಹಿಂದೆ ಬಹಳಷ್ಟು ಬಾರಿ ದೂರು ಕೊಟ್ಟಿದ್ದರು.
ಈ ಬಗ್ಗೆ ಉದಯವಾಣಿ ಸುದಿನ ನ. 5ರಂದು ಅವರಣಗೋಡೆ ಬದಿಯಲ್ಲಿ ಹರಿಯುತ್ತಿದೆ ನಗರದ ಕೊಳಚೆ ನೀರು..ಮಲ್ಪೆ ಫಿಶರೀಸ್ ಕಾಲೇಜು ದುರ್ವಾಸನೆಯಲ್ಲೇ ಪಾಠ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ನಗರಸಭೆ ಅದೇ ದಿನದಂದು ತೋಡಿಗೆ ಪೈಪಿನ ಮೂಲಕ ಹರಿದು ಬರುತ್ತಿದ್ದ ಕೊಳಚೆ ನೀರಿನ ಪೈಪನ್ನು ತೆರವುಗೊಳಿಸಿದರು. ಇಲ್ಲಿನ ತೋಡಿಗೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿದ್ದಾರೆ. ಇದೀಗ ತೋಡಿನಲ್ಲಿ ಯಾವುದೇ ಗಲೀಜು ನೀರು ನಿಲ್ಲದಿರುವುದರಿಂದ ಯಾವುದೇ ದುರ್ವಾಸನೆ ಇಲ್ಲದೆ ಇಲ್ಲಿನ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳುವಂತಾಗಿದೆ. ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ನಗರಸಭಾ ಆಡಳಿತ ಮತ್ತು ಉದಯವಾಣಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಗಮನಕ್ಕೆ ಬಂದ ತತ್‌ಕ್ಷಣದಲ್ಲಿ ನಗರಸಭೆಯ ಆರೋಗ್ಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಯ ಕುರಿತು ಪರಿಶೀಲನೆ ನಡೆಸಿ, ಮಳೆ ನೀರು ಹರಿಯುವ ತೋಡಿಗೆ ಕೊಳಚೆ ನೀರು ಹರಿಯದಂತೆ ಬಹುತೇಕ ಎಲ್ಲ ಪೈಪ್‌ಗ್ಳನ್ನು ತೆರೆವುಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು. ಸಾರ್ವಜನಿಕರು ಪರಿಸರ ಕಾಪಾಡುವ ದೃಷ್ಟಿಯಿಂದ ನಗರಸಭೆಯ ಅಭಿವೃದ್ಧಿ ಕೆಲಸಗಳಲ್ಲಿ ಸಹಕಾರವನ್ನು ನೀಡಬೇಕಾಗಿದೆ.
– ಪ್ರಭಾಕರ ಪೂಜಾರಿ, ಅಧ್ಯಕ್ಷರು, ಉಡುಪಿ ನಗರಸಭೆ