Advertisement

ನೀರು ಹಂಚಿಕೆ ಯಥಾಸ್ಥಿತಿ ಇರಲಿ

08:41 PM Oct 12, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ನಗರಗಳಿಗೆ ಕುಡಿವ ನೀರಿನ ಆಶ್ರಯವಾಗಿರುವ ಜಕ್ಕಲಮಡಗು ಜಲಾಶಯದಿಂದ ಎರಡು ನಗರಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡಲಾಗುವುದು ಎಂಬ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡರ ಹೇಳಿಕೆಗೆ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದು, ಜಿಲ್ಲಾಡಳಿತ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸಂಸದರು, ಜಕ್ಕಲಮಡಗು ಜಲಾಶಯದಿಂದ ಎರಡು ನಗರಗಳಿಗೆ 50ಃ50 ಅನುಪಾತದಲ್ಲಿ ನೀರು ಹಂಚಿಕೆಗೆ ಕ್ರಮ ವಹಿಸುವುದಾಗಿ ಹೇಳಿದ್ದರು. ಇದನ್ನು ಖಂಡಿಸಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕವಾಗಿ ಪ್ರತಿಭಟನೆ ದಾಖಲಿಸಿ ಡೀಸಿ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು.

ಉಗ್ರ ಹೋರಾಟ ಎಚ್ಚರಿಕೆ: ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌, ಚಿಕ್ಕಬಳ್ಳಾಪುರದ ಜಕ್ಕಲಮಡುಗು ನೀರಿನ ವಿಚಾರದಲ್ಲಿ ಸಂಸದರು ನೀಡಿರುವ ಹೇಳಿಕೆ ಅವೈಜ್ಞಾನಿಕವಾಗಿದೆ. ಚಿಕ್ಕಬಳ್ಳಾಪುರ ನಗರ ಜಿಲ್ಲಾ ಕೇಂದ್ರ ಸ್ಥಾನವಾಗಿದ್ದು, ಅತಿ ಹೆಚ್ಚು ನೀರಿನ ಅವಶ್ಯಕತೆ ಇದೆ.

ದೊಡ್ಡಬಳ್ಳಾಪುರ ನಗರ ತಾಲೂಕು ಕೇಂದ್ರವಾಗಿದೆ. ಆದರೆ ಸಂಸದರು ಎರಡು ನಗರಗಳಿಗೆ ಸರಿ ಸಮಾನವಾಗಿ ನೀರು ಹಂಚಿಕೆ ಮಾಡಲಾಗುವುದು ಎಂದು ಹೇಳಿರುವುದು ಸರಿಯಲ್ಲ. ಸಂಸದರು ಜಕ್ಕಲಮಡಗು ನೀರಿನ ವಿಚಾರವನ್ನು ಕೈಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ, ಇನ್ನಿತರ ಸಂಘಟನೆಗಳು ಮತ್ತು ಚಿಕ್ಕಬಳ್ಳಾಪುರ ಜನತೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾವೇರಿ ನೀರು ತರಲಿ: ಚಿಕ್ಕಬಳ್ಳಾಪುರ ನಗರದ ಜನತೆ ಬರಗಾಲದಿಂದ ತತ್ತರಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದರು ಶೇ.50ಃ50 ರ ಅನುಪಾತದಲ್ಲಿ ನೀರನ್ನು ದೊಡ್ಡಬಳ್ಳಾಪುರ ನಗರಕ್ಕೆ ಬಿಡಬೇಕೆಂದು ಹೇಳಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಈಗಾಗಲೇ ಬೆಂಗಳೂರು ನಗರಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ನೀರನ್ನು ತರುವ ನಿಟ್ಟಿನಲ್ಲಿ ಸಂಸದರು ಪ್ರಯತ್ನ ಮಾಡಲಿ ಎಂದರು.

Advertisement

ನೀರಿನ ವಿಚಾರದಲ್ಲಿ ರಾಜಕಾರಣ: ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸುನೀಲ್‌ ಕುಮಾರ್‌ ಮಾತನಾಡಿ, ಜಕ್ಕಲಮಡಗು ಜಲಾಶಯದಿಂದ ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಕ್ಕೆ ಹಂಚಿಕೊಂಡಿರುವಂತೆ ಶೇ.68ಃ32 ರ ಅನುಪಾತದ ನೀರು ಮುಂದುವರಿಯಲಿ. ಸಮಪಾಲು ನೀಡಲು ಬಿಜೆಪಿ ನಾಯಕರು ಮುಂದಾದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಳೆದು ನಾಲ್ಕೈದು ತಿಂಗಳಿಂದ ಮಳೆ ಇಲ್ಲದೇ ಜಕ್ಕಲಮಡಗು ಜಲಾಶಯದಲ್ಲಿ ನೀರು ಖಾಲಿಯಾಗಿ ಚಿಕ್ಕಬಳ್ಳಾಪುರ ಜನತೆ ಪರದಾಡುತ್ತಿದ್ದಾರೆ. ಈಗಷ್ಟೇ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಲ್ಪಸ್ವಲ್ಪ ನೀರು ಬಂದಿದೆ. ಆದರೆ ಬರಪೀಡಿತ ಬಯಲು ಸೀಮೆಗೆ ಶಾಶ್ವತ ನೀರಾವರಿ ತರುವ ಪ್ರಯತ್ನ ಮಾಡದ ಸಂಸದರು, ನೀರಿನ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟ್ಟಿದ್ದಾರೆಂದು ಟೀಕಿಸಿದರು.

ಡೀಸಿ ಆಪ್ತ ಸಹಾಯಕರಿಗೆ ಮನವಿ: ಜಕ್ಕಲಮಡಗು ಜಲಾಶಯದಿಂದ ಈಗಿರುವ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ನೀರಿನ ಹಂಚಿಕೆಯನ್ನು ಮುಂದುವರಿಸಬೇಕು. ಯಾವುದೇ ರೀತಿಯಲ್ಲಿ ಬದಲಾವಣೆ ಆಗಬಾರದೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಲತಾ ರವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ ಕೃಷ್ಣಪ್ಪಗೆ ಕಾಂಗ್ರೆಸ್‌ ನಾಯಕರು, ಮುಖಂಡರು ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮುಖಂಡರಾದ ಜಾವೀದ್‌, ನಾರಾಯಣಸ್ವಾಮಿ, ಸುರೇಶ್‌, ಷಾಹಿದ್‌, ಪಾಪಣ್ಣ, ಹಮೀಮ್, ಮಂಜುನಾಥ್‌, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next