Advertisement

ಫ‌ಲಿತಾಂಶ ಏನೇ ಆದರೂ ಸರ್ಕಾರ ಸುಭದ್ರ

11:31 PM Apr 28, 2019 | Lakshmi GovindaRaju |

ಬೆಂಗಳೂರು: ಲೋಕಸಭೆ ಚುನಾವಣಾ ಫ‌ಲಿತಾಂಶ ಏನೇ ಆದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಭದ್ರವಾಗಿರಲಿದೆ. ಯಾರೂ ಆಮಿಷಗಳಿಗೆ ಬಲಿಯಾಗುವುದು ಬೇಡ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಮ್ಮ ಪಕ್ಷದ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿ, ಲೋಕಸಭೆ ಚುನಾವಣಾ ಫ‌ಲಿತಾಂಶದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದು ಬೇಡ. ಆಂತರಿಕ ಸಮೀಕ್ಷೆ, ಬಹಿರಂಗ ಸಮೀಕ್ಷೆ ಎಂದು ದಿನಕ್ಕೊಂದು ರೀತಿಯ ವ್ಯಾಖ್ಯಾನಗಳು ಬರುತ್ತಿವೆ. ಮೇ 23ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.

ಅಲ್ಲಿಯವರೆಗೂ ಮೌನ ವಹಿಸಿ. ಚುನಾವಣಾ ಫ‌ಲಿತಾಂಶ ಬಂದ ತಕ್ಷಣ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದು ಭ್ರಮೆ. ಕಾಂಗ್ರೆಸ್‌ ಹೈಕಮಾಂಡ್‌ ಫ‌ಲಿತಾಂಶ ಏನೇ ಆದರೂ ಬೆಂಬಲದ ಭರವಸೆ ನೀಡಿದೆ. ಹೀಗಾಗಿ, ಯಾರೂ ವಿಚಲಿತರಾಗುವುದು ಬೇಡ ಎಂದು ಹೇಳಿದರು ಎನ್ನಲಾಗಿದೆ.

ರೈತರ ಸಾಲಮನ್ನಾ ವಿಚಾರದಲ್ಲೂ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಆದಷ್ಟು ಬೇಗ ರೈತರಿಗೆ ಋಣಮುಕ್ತ ಪತ್ರ ದೊರೆಯಲಿದೆ. ನಾವು ಹೇಳಿದ್ದನ್ನು ಸಾಧಿಸಿಯೇ ತೀರುತ್ತೇವೆ.

ರೈತರಲ್ಲೂ ಯಾವುದೇ ಆತಂಕ ಮೂಡದಂತೆ ನೋಡಿಕೊಳ್ಳಿ. ಪಕ್ಷ ಸಂಘಟನೆಯಲ್ಲಿ ನಾವು ಎಡವಿದ್ದೇವೆ. ನಮ್ಮದೇ ಸರ್ಕಾರವಿದ್ದರೂ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹೀಗಾಗಿ, ಸಚಿವರು -ಶಾಸಕರು ಆ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

Advertisement

ಸಂಪುಟ ಪುನಾರಚನೆ ಸುಳಿವು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆ ನಂತರ ಕೆಲವೊಂದು ಬದಲಾವಣೆಯಾಗಲಿದೆ. ಸಂಪುಟ ಪುನಾರಚನೆಯೂ ಆಗಬಹುದು. ಆಗ, ಅವಕಾಶ ಸಿಗದವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ನನ್ನ ಮೇಲೆ ನಂಬಿಕೆ ಇಟ್ಟು ಒಗ್ಗಟ್ಟಾಗಿರಿ ಎಂದು ಹೇಳಿದರು ಎನ್ನಲಾಗಿದೆ.

ಪರಾಮರ್ಶೆ: ಜೆಡಿಎಸ್‌ ಸ್ಪರ್ಧೆ ಮಾಡಿದ್ದ ಕ್ಷೇತ್ರಗಳು ಹಾಗೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಕ್ಷೇತ್ರಗಳಲ್ಲಿ ನಡೆದ ಮತದಾನದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಾಸಕರು ತಮ್ಮ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಚುನಾವಣೆ ಎದುರಿಸಿರುವುದರಿಂದ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ತಿಳಿಸಿದರು ಎಂದು ಹೇಳಲಾಗಿದೆ.

ನಿಖಿಲ್‌ ಹಾಜರ್‌: ಇದೇ ಮೊದಲ ಬಾರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಮಂಡ್ಯ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್‌, ಚುನಾವಣೆ ನಂತರ ನಡೆದ ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು. ಅನಿವಾರ್ಯ ಕಾರಣಗಳಿಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸಭೆಗೆ ಹಾಜರಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next