Advertisement

ಮುಂದಿನ ಅವಧಿಗೂ ಸಾ.ರಾ.ಗೋವಿಂದು ಇರಲಿ

11:28 AM Jun 17, 2017 | Team Udayavani |

ಅಂತೂ ಇಂತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸಾ.ರಾ.ಗೋವಿಂದು ಅವರೇ ಮುಂದಿನ ಒಂದು ವರ್ಷದ ಅವಧಿಯವರೆಗೂ ಮುಂದುವರೆಯಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಬೇಡ ಎಂದು ಸರ್ವಸದಸ್ಯರ ಸಭೆಯಲ್ಲಿ ಒಮ್ಮತ ಸೂಚಿಸಲಾಗಿದೆ.

Advertisement

ಮಂಡಳಿಗೆ ಚುನಾವಣೆ ನಡೆಸಬೇಕೋ, ಬೇಡವೋ ಎಂಬ ತೀರ್ಮಾನ ಕುರಿತು ಶುಕ್ರವಾರ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 61 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಸುಮಾರು 250 ಕ್ಕೂ ಹೆಚ್ಚು ಮಂದಿ ಸಾ.ರಾ.ಗೋವಿಂದು ಪರ ಸಹಮತ ಸೂಚಿಸಿದ್ದಾರೆ.

ಈಗಾಗಲೇ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದ ಆಡಳಿತ ಮಂಡಳಿ ಅವಧಿ ಮುಗಿದಿದ್ದು, ಮುಂದಿನ ಒಂದು ವರ್ಷದ ಕಾಲ ಪುನಃ ಸಾ.ರಾ.ಗೋವಿಂದು ನೇತೃತ್ವದ ಮಂಡಳಿಯೇ ಮುಂದುವರೆಯಬೇಕು ಎಂದು ಈ ಹಿಂದೆ ಮಂಡಳಿ ಎದುರು ಧರಣಿ ನಡೆಸಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಭಾ.ಮ.ಹರೀಶ್‌ ಮತ್ತಿತರರ ವಿರೋಧವಿತ್ತು. ಚುನಾವಣೆ ಬೇಕೋ, ಬೇಡವೋ ಎಂಬ ಕುರಿತು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬಹುತೇಕರು ಸಾ.ರಾ.ಗೋವಿಂದು ಅವರು ಮುಂದಿನ ಒಂದು ವರ್ಷದವರೆಗೂ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಒತ್ತಾಯಿಸಿದ್ದಲ್ಲದೆ, ಚುನಾವಣೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಹಾಲಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ತಂಡ ಇನ್ನೂ ಒಂದು ಅವಧಿಗೆ ಮುಂದುವರೆಯುವ ಕುರಿತು ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, “ಸಾ.ರಾ.ಗೋವಿಂದು ಅವಧಿಯಲ್ಲಿ ಉತ್ತಮ ಕೆಲಸ ನಡೆದಿವೆ. ನಮ್ಮ ಸರ್ಕಾರದಿಂದ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಗೋವಿಂದು ಯಶಸ್ವಿಯಾಗಿದ್ದಾರೆ.

Advertisement

ಇನ್ನೂ ಒಂದಷ್ಟು ಕೆಲಸಗಳಿವೆ. ಸರ್ಕಾರ ಹಾಗೂ ಮಂಡಳಿ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ, ಸಾ.ರಾ.ಗೋವಿಂದು ಅವರೇ ಅಧ್ಯಕ್ಷರಾಗಿ ಇನ್ನು ಒಂದು ಅವಧಿಗೆ ಮುಂದುವರೆಯಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಮುನಿರತ್ನ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಾ.ರಾ.ಗೋವಿಂದು, “ಚುನಾವಣೆ ಕುರಿತು ನಡೆದ ಚರ್ಚೆಯಲ್ಲಿ ನಾನು ನನ್ನ ಸಾಧನೆ ಹೇಳಿಕೊಳ್ಳಲಿಲ್ಲ. ಸುಮಾರು 250 ಜನ ಸದಸ್ಯರು ನಾನೇ ಮುಂದುವರೆಯಬೇಕು ಅಂದಿದ್ದಾರೆ. ಚುನಾವಣೆ ಮಾಡಬೇಕು ಎಂದು ಯಾರೂಬ್ಬರೂ ಕೈ ಎತ್ತಿಲ್ಲ. ಕಾನೂನು ಚೌಕಟ್ಟಿನಲ್ಲೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ.

ಒಟ್ಟಾರೆ ಸದಸ್ಯರು ಏನು ಹೇಳುತ್ತಾರೋ ಅದೇ ಅಂತಿಮ ತೀರ್ಮಾನವಾಗಲಿದೆ. ಮೊದಲ ಬಾರಿ ಮುಂದುವರೆದಾಗ ಯಾರೂ ವಿರೋಧಿಸಿರಲಿಲ್ಲ. ಎರಡನೇ ಬಾರಿ ಮುಂದುವರೆಯುವಾಗ ಯಾಕೆ ಈ ವಿರೋಧ? ಎಂದು ಪ್ರಶ್ನಿಸಿದ ಸಾ.ರಾ.ಗೋವಿಂದು, ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ನನ್ನ ಪರ ನಿಂತಿದ್ದಾರೆ.

ಅವರ ಸಹಿ ಸಂಗ್ರಹಿಸಿ, ಅದನ್ನು ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸುತ್ತೇನೆ. ಕಾನೂನು ಪ್ರಕಾರವೇ ಮುಂದುವರೆಯುತ್ತೇನೆ. ಈ ಹಿಂದೆ ಸರ್ವ ಸದಸ್ಯರು ಒಪ್ಪಿದರೆ ಮುಂದುವರೆಯಲಿ ಎಂದು ಬಸಂತ್‌ಕುಮಾರ್‌ ಪಾಟೀಲ್‌ ಹೇಳಿದ್ದರು. ಆದರೆ, ಈಗ ಅವರೇ ವಿರೋಧ ಮಾಡುತ್ತಿದ್ದಾರೆ ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

ಇದೇ ವೇಳೆ, ಭಾ.ಮ.ಹರೀಶ್‌ ಹಾಗೂ ತಂಡ, “ಚುನಾವಣೆ ನಡೆಸದೆ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಅಧ್ಯಕ್ಷ ಸ್ಥಾನ ಸೇರಿದಂತೆ ಮಂಡಳಿ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಸಬೇಕು.ಇಲ್ಲವಾದರೆ, ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಭಾ.ಮ.ಹರೀಶ್‌ ಹೇಳಿದ್ದಾರೆ.

ಮಂಡಳಿ ಮಾಜಿ ಅಧ್ಯಕ್ಷ ಬಂಸಂತ್‌ಕುಮಾರ್‌ ಪಾಟೀಲ್‌ ಮಾತನಾಡಿ, “ಸಾ.ರಾ.ಗೋವಿಂದು ಚಿತ್ರರಂಗದ ಅಜಾತ ಶತ್ರು. ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಚುನಾವಣೆ ನಡೆಸದೆ ಕಾನೂನು ವಿರುದ್ಧ ನಡೆಯುವ ದುಸ್ಸಾಹಕ್ಕೆ ಕೈ ಹಾಕುತ್ತಿದ್ದಾರೆ.

ಚುನಾವಣೆ ನಡೆಸದೆ ಅಧ್ಯಕ್ಷರಾಗಿ ಅವರೇ ಮುಂದುವರೆದರೆ ಅದು ಅಸಿಂಧು ಆಗಲಿದೆ ಎಂಬುದು ಬಸಂತ್‌ ಕುಮಾರ್‌ ಅಭಿಪ್ರಾಯ.  ಸರ್ವ ಸದಸ್ಯರ ಸಭೆಯಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್‌ ವೆಂಕಟೇಶ್‌, ಚಿನ್ನೇಗೌಡ, ಎನ್‌. ಎಂ. ಸುರೇಶ್‌ ಸೇರಿದಂತೆ ಹಲವು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next