ಅವಳ ಹೆಸರು ಗಂಗಾ. ಆಕೆಯ ತಂದೆ ಕುಡುಕ. ಕುಡಿದು ಬಂದ ತಂದೆಯ ಜೊತೆ ಗಂಗಾ ಜಗಳ ಮಾಡಿಕೊಂಡು, ತಮ್ಮ ಸಿದ್ಧನೊಂದಿಗೆ ಮನೆಯಿಂದ ಹೊರ ನಡೆಯುತ್ತಾಳೆ. ತಮ್ಮನಿಗೆ ಶ್ರೀ ಮಠದಲ್ಲಿ ಉನ್ನತ ವಿದ್ಯಾಭ್ಯಾಸ ಕೊಡಿಸುತ್ತಾಳೆ. ಆತ ತುಂಬಾ ಚೆನ್ನಾಗಿ ಓದುತ್ತಾ, ಮುಂದೆ ಐಎಎಸ್ ಅಧಿಕಾರಿ ಆಗುತ್ತಾನೆ… ಇಂಥದ್ದೊಂದು ಕತೆಯುಳ್ಳಂಥ “ಸಿದ್ಧಗಂಗಾ’ ಎಂಬ ಚಿತ್ರವನ್ನು ಜಿ. ಮೂರ್ತಿ ಅವರು ನಿರ್ದೇಶಿಸಿದ್ದರು.
ನಿಡಸಾಲೆ ಪುಟ್ಟ ಸ್ವಾಮಯ್ಯ ಇತರರು ನಿರ್ಮಾಣದ ಹೊಣೆ ಹೊತ್ತಿದ್ದರು. ಇದು ಮಾನವೀಯ ಮೌಲ್ಯ ಸಾರುವಂಥ ಚಿತ್ರ. ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಬದುಕಿನ ಹಾದಿಯ ಕುರಿತ ಸಮಗ್ರ ಸಾಕ್ಷ್ಯಚಿತ್ರವೂ ಬಿಡುಗಡೆಯಾಗಿದೆ. ಇದು ಮಠದ ಆವರಣದಲ್ಲಿಯೇ ಲೋಕಾರ್ಪಣೆಗೊಂಡಿದ್ದು ವಿಶೇಷ.
ಪ್ರತಿವರ್ಷ ಜರುಗುವ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವಾರ್ಷಿಕ ಸಭೆಯ ದಿಕೆಯಲ್ಲಿ, ಸುಮಾರು 5 ಸಾವಿರ ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಗಳು “ಲೋಕ ಜಂಗಮ’ ಡಿವಿಡಿಯನ್ನು ಲೋಕಾರ್ಪಣೆ ಮಾಡಿದ್ದರು. ಇದನ್ನು ಜರಗನಹಳ್ಳಿ ಕಾಂತರಾಜು ಅವರು ನಿರ್ಮಿಸಿ, ಕೆ.ಎಸ್. ಪರಮೇಶ್ವರ ನಿರ್ದೇಶಿಸಿದ್ದರು. 90 ನಿಮಿಷಗಳ ಅವಧಿಯ ಚಿತ್ರದಲ್ಲಿ, ಶ್ರೀಗಳು ನಡೆದು ಬಂದ ದಾರಿ, ಸಿದ್ಧಗಂಗೆ ಪುಣ್ಯ ಕ್ಷೇತ್ರದ ಮಹಾತ್ಮೆ ಹಾಗೂ ಇತಿಹಾಸವನ್ನು ಕಟ್ಟಿಕೊಡಲಾಗಿದೆ.
ಸುಮಾರು ಒಂದು ವರ್ಷಗಳ ಕಾಲ ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಾಗಡಿ ತಾಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೆಲೆಸಿರುವ ಮಠದ ಹಾಗೂ ಪರಮಪೂಜ್ಯರ 90 ಜನ ಒಡನಾಡಿಗಳನ್ನು, ಭಕ್ತರನ್ನು, ಹಳೆಯ ವಿದ್ಯಾರ್ಥಿಗಳನ್ನು, ಮಠಾಧೀಶರನ್ನು, ಶರಣ ಪರಂಪರೆ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ವಿದ್ವಾಂಸರ ಜತೆ ಮಾತನಾಡಿಸಿ, ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.