ಉಡುಪಿ: ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಗಳ ಕಾರು ಚಾಲಕರಾಗಿದ್ದದ್ದು ಆರೀಫ್. ಇವರ ಇಬ್ಬರು ಅಣ್ಣಂದಿರು ಹಾಗೂ ಆರೀಫ್ ಸೇರಿದಂತೆ ಮೂವರು ಪೇಜಾವರ ಶ್ರೀಗಳ ವಾಹನ ಚಾಲಕರಾಗಿ 20 ವರ್ಷ ಕೆಲಸ ಮಾಡಿದ್ದರು. ಇದೀಗ ಪ್ರೀತಿಯ ಶ್ರೀಗಳು ಹರಿಪಾದ ಸೇರಿದ್ದು, ನನ್ನ ಕೊನೆಯ ಆಸೆ ಈಡೇರದಂತಾಗಿದೆ ಎಂದು ಆರೀಫ್ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.
ಪಬ್ಲಿಕ್ ಟಿವಿ ಜತೆ ಮಾತನಾಡಿದ್ದ ಆರೀಫ್ ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಶ್ರೀಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನನಗೆ ಶ್ರೀಗಳು ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು. ನಮ್ಮ ಕುಟುಂಬದ ಜತೆಯೂ ಆತ್ಮೀಯ ಬಾಂಧವ್ಯ ಹೊಂದಿದ್ದರು. ಕೋಮು ಸಾಮರಸ್ಯ ಕಾಪಾಡುವಲ್ಲಿ ಶ್ರಮಿಸುತ್ತಿದ್ದರು ಎಂದರು.
ಆದರೆ ಶ್ರೀಗಳ 90ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಆಸೆ ಹೊಂದಿದ್ದು, ಜತೆಗೆ ರಕ್ತದಾನ ಶಿಬಿರದ ವ್ಯವಸ್ಥೆ ಕೂಡ ಮಾಡಿದ್ದರು. ಮುಸ್ಲಿಂ ಯುವಕರು, ಸಂಘಟನೆಗಳು ಸೇರಿ ಶ್ರೀಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದೇವು. ಆದರೆ ಈಗ ಶ್ರೀಗಳು ಶ್ರೀಕೃಷ್ಣನ ಪಾದ ಸೇರುವ ಮೂಲಕ ಕೊನೆಯಾಸೆ ಈಡೇರದಂತಾಗಿದೆ ಎಂದು ಅಲವತ್ತುಕೊಂಡರು.
ನಾಲ್ಕು ವರ್ಷಗಳ ಹಿಂದೆ ಶ್ರೀಗಳ ಹೆಸರಿನಲ್ಲಿ ಆರೀಫ್ ರಕ್ತದಾನಿಗಳ ತಂಡವನ್ನು ಕಟ್ಟಿಕೊಂಡಿದ್ದಾರೆ. ಇವರಲ್ಲಿ 500 ಮಂದಿ ಮುಸ್ಲಿಮರು ಶ್ರೀಗಳ ಜನ್ಮ ನಕ್ಷತ್ರದಂದು ರಕ್ತದಾನ ಮಾಡುತ್ತಿದ್ದರು. ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬಂದಾಗಲೂ ನೂರಾರು ಮುಸ್ಲಿಮರು ಶ್ರೀಗಳ ಪರ ನಿಂತಿದ್ದೇವೆ. ಕೃಷ್ಣಮಠದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವು. ನಮ್ಮ ಅಷ್ಟೇ ಪ್ರೀತಿಯಿಂದ ಶ್ರೀಗಳು ನೋಡಿಕೊಳ್ಳುತ್ತಿದ್ದರು. ಈಗ ಪ್ರೀತಿಯ ಶ್ರೀಗಳು ಮೌನವಾಗಿದ್ದಾರೆ..ಇನ್ನು ನೆನಪು ಮಾತ್ರ ನಮ್ಮ ಜತೆಗೆ ಇರಲಿದೆ ಎಂದು ಆರೀಫ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.