Advertisement
8 ಜನರಿದ್ದ ನಮ್ಮ ಗೆಳೆಯರ ಬಳಗಕ್ಕೆ ತಿಮ್ಮರಾಯಪ್ಪನವರು ಜತೆಯಾದದ್ದು ಈ ಸಂದರ್ಭದಲ್ಲಿಯೇ. ಅವರು ತಮ್ಮನ್ನು ಪರಿಚಯಿಸಿಕೊಂಡ ರೀತಿಯೇ ಭಿನ್ನವಾಗಿತ್ತು. “ನಾನೊಬ್ಬ ನಿವೃತ್ತ ಸರಕಾರಿ ನೌಕರ. ಎರಡು ತಿಂಗಳ ಹಿಂದಷ್ಟೇ ಫ್ಲಾಟ್ ತಗೊಂಡೆ.ಜೀವನದಲ್ಲಿ ಖುಷಿಗಿಂತ ಕಷ್ಟವನ್ನೇ ಜಾಸ್ತಿ ನೋಡಿದ್ದೀನಿ. ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡೆ. ಐದು ವರ್ಷಗಳ ಅನಂತರ ನೌಕರಿ ಪರ್ಮನೆಂಟ್ ಆಯ್ತು. ಮುಂದೆ ಭಡ್ತಿಗಳು ಸಿಗುತ್ತಾ ಹೋದವು. ನನ್ನ ಸುತ್ತಲೂ ಇದ್ದವರು, “ಒಂದೈವತ್ ಸಾವ್ರ ಕೊಟ್ರೆ ನಿಮಗೆ ಡಾಕ್ಟರೆಟ್ ಕೂಡ ಸಿಗುತ್ತೆ’ ಅಂದರು. ಎಲ್ಲರ ಮಾತುಗಳಿಗೂ ಒಪ್ಪಿಕೊಂಡು ಡಾಕ್ಟರೆಟ್ ಪಡೆಯಲು ಕಾಸು ಕೊಟ್ಟೆ. ಆದರೆ ನಮಗೆ ಪಿಎಚ್.ಡಿ ಕೊಡಲು ಒಪ್ಪಿದ್ದವರು ಪೊಲೀಸರಿಗೆ ಸಿಕ್ಕಿಕೊಂಡ್ರು!… ಎಂದು ನಕ್ಕಿದ್ದರು.
Related Articles
Advertisement
ರಾಯರು ಈ ಜಗತ್ತಿನ ಪರಿವೆಯಿಲ್ಲದೆ ಹೆಂಡತಿಯ ಎದುರು ಕುಳಿತು ಬಿಟ್ಟಿದ್ದರು!
ಈ ವಿಷಯ ತಿಳಿಸಿದ ಸೆಕ್ಯುರಿಟಿಯವನೇ ಮುಂದು ವರಿದು ಹೇಳಿದ: “ಪಾಪ ಸರ್, ಆ ಮನುಷ್ಯ ದೇವರಂಥವರು. ಅವರ ಹೆಂಡತಿಗೆ ಮರೆವಿನ ಕಾಯಿಲೆ ಇದೆ. ಆಕೆಗೆ ಯಾರೊಬ್ಬರ ಗುರುತೂ ಹತ್ತುವುದಿಲ್ಲ. ಕೆಲವೊಮ್ಮೆ ಮಂಪರಿನಲ್ಲಿ ಇರುತ್ತಾರೆ. ಜತೆಗೆ, ಸರಿಯಾಗಿ ನಿಲ್ಲಲೂ ಆಗದ, ಕೂರಲೂ ಆಗದಂಥ ನಿಶ್ಶಕ್ತಿ. ದಿನಕ್ಕೆ ಅರ್ಧ ಗಂಟೆ ನಡೆದರೆ ಅದೇ ಹೆಚ್ಚು. ಎಷ್ಟೋ ಸಲ ಶೌಚವೆಲ್ಲ ಮಲಗಿದಲ್ಲೇ ಆಗುತ್ತೆ. ಆಕೆಯನ್ನು ನೋಡಿಕೊಳ್ಳಲು ಒಬ್ಬರು ನರ್ಸ್ ಬರುತ್ತಾರೆ. ದಿನಕ್ಕೆರಡು ಬಾರಿ ಬಂದು ಮಾತ್ರೆ ಕೊಟ್ಟು, ಚೆಕ್ ಮಾಡಿ, ಡ್ರೆಸ್ ಬದಲಿಸಿ ಹೋಗಿಬಿಡ್ತಾರೆ. ಆ ಸಮಯದಲ್ಲಿ ಈ ರಾಯರು ಪಕ್ಕದಲ್ಲಿಯೇ ಇದ್ದು ಚೂರೂ ಬೇಸರಿಸದೆ ಸೇವೆ ಮಾಡ್ತಾರೆ. ಎಷ್ಟೋ ಸಲ ಆ ನರ್ಸ್, ನಾನು ಮಾಡ್ತೇನೆ ಸರ್ ಅಂದರೂ ಇವರು- “ಬೇಡಮ್ಮ, ಅಷ್ಟು ದೂರದಿಂದ ನೀವು ಬರುವುದೇ ಹೆಚ್ಚು. ಇದೆಲ್ಲ ಕೆಲಸ ನನಗಿರಲಿ’ ಅನ್ನುತ್ತಾರೆ…”
ಇಷ್ಟೆಲ್ಲ ವಿವರ ಕೇಳಿದ ಅನಂತರ, ತಿಮ್ಮರಾಯಪ್ಪನವರನ್ನು ಭೇಟಿಯಾಗಿ ಸಮಾಧಾನಿಸಿ ಹೋಗೋಣ ಅಂತ ನಾವು ಮಾತಾಡುತ್ತಿದ್ದಾಗಲೇ, ನರ್ಸ್ ಬಂದುಬಿಟ್ಟರು. ಮುಂದಿನ ಎರಡು ಗಂಟೆ ಯಾರಿಗೂ ಮನೆಯೊಳಗೆ ಹೋಗಲು ಅವಕಾಶವಿಲ್ಲ ಎಂದು ಸೆಕ್ಯುರಿಟಿಯವನು ಸ್ಪಷ್ಟಪಡಿಸಿದ. ಸಮೀಪದ ಅಂಗಡಿಯಿಂದ ಒಂದಷ್ಟು ಹಣ್ಣು ತಂದು, ಅವರಿಗೆ ಕೊಟ್ಟು ಬಿಡಪ್ಪಾ ಎಂದು ತಿಳಿಸಿ ಹಿಂದಿರುಗಿದೆವು. ಅದುವರೆಗೂ, ರಸಿಕ ಮಾತುಗಳ ತಿಮ್ಮರಾಯಪ್ಪ ದಿನಕ್ಕೆರಡು ಬಾರಿ ಸ್ನಾನ ಮಾಡಿ ಬರುವುದರ ಕುರಿತು ನಮ್ಮ ಲೆಕ್ಕಾಚಾರಗಳೇ ಬೇರೆ ಇದ್ದವು. “ಅವಳು ಕಾಯ್ತಾ ಇರ್ತಾಳೆ…’ ಅಂದರೆ- ಅವಳಿಗೆ ಊಟ ಮಾಡಿಸಬೇಕು ಎನ್ನುವ ತುರ್ತು ಅವರ ಮಾತಿನಲ್ಲಿರುತ್ತಿತ್ತು.
ನಾವು ಅದನ್ನು ಬೇರೊಂದು ರೀತಿಯಲ್ಲಿ ತಿಳಿದಿದ್ದೆವು! ಹೆಂಡತಿಯನ್ನು ಮಗುವಿನಂತೆ “ಶುದ್ಧ’ ಮಾಡಿದ ಅನಂತರ ಅವರು ಸ್ನಾನ ಮಾಡುತ್ತಿದ್ದರು, ಎದೆಯ ತುಂಬಾ ನೋವಿನ ಪರ್ವತವೇ ಇದ್ದರೂ ಅದನ್ನು ತೋರಿಸಿಕೊಳ್ಳದೆ ಜೋಕ್ ಹೇಳುತ್ತಾ ನಮ್ಮನ್ನು ಖುಷಿಪಡಿಸುತ್ತಿದ್ದರು ಎಂದು ತಿಳಿದಾಗ ಖುಷಿಯೂ, ಸಂಕಟವೂ ಒಟ್ಟಿಗೇ ಆಯಿತು.
ಎರಡು ದಿನಗಳ ನಂತರ ಅದೇ ಹಳೆಯ ಮುಗುಳ್ನಗೆಯೊಂದಿಗೆ ತಿಮ್ಮರಾಯಪ್ಪ ಎದುರಾದರು. “ನೀವೆಲ್ಲರೂ ಬಂದಿದ್ರಂತೆ. ಆಗ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ, ಸಾರಿ. ಹೆಂಡತಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದೆವು. ಅಲ್ಲಿ ನೆಟ್‌ವರ್ಕ್ ಸಮಸ್ಯೆ. ಮಾತನಾಡಲೂ ಇಷ್ಟವಿರಲಿಲ್ಲ. ಹಾಗಾಗಿ ಫೋನ್ ಪಿಕ್ ಮಾಡಲಿಲ್ಲ, ಬೇಜಾರಾಗಬೇಡಿ’ ಅಂದರು. ನಾವು ನಿಂತೆವೆಂದು ಸಮಯ ನಿಲ್ಲುವುದೇ? ಮಧ್ಯಾಹ್ನ ಒಂದು ಗಂಟೆ ಆಗುತ್ತಿದ್ದಂ ತೆಯೇ-ಊಟಕ್ಕೆ ಹೆಂಡತಿ ಕಾಯ್ತಾ ಇರ್ತಾಳೆ… ಅನ್ನುತ್ತಾ ಹೊರಟು ನಿಂತರು ತಿಮ್ಮರಾಯಪ್ಪ. ಅದುವರೆಗೂ ಸುಮ್ಮ ನಿದ್ದ ನನ್ನ ಗೆಳೆಯ ಇದ್ದಕ್ಕಿದ್ದಂತೆ ಹೇಳಿಬಿಟ್ಟ’ ಸರ್, ನಿಮ್ಮ ಮನೆಯವರಿಗೆ ಮರೆವಿನ ಕಾಯಿಲೆಯಂತೆ. ಹೀಗಿರುವಾಗ ನೀವು ಅವರ ಎದುರಿಗಿದ್ದು ಏನುಪಯೋಗ? ಇಷ್ಟು ದಿನ ಅವರ ಸೇವೆ ಮಾಡಿ ದಣಿದಿದ್ದೀರಿ. ಇವತ್ತಾದ್ರೂ ನಿಧಾನಕ್ಕೆ ಹೋಗಬಹುದಲ್ಲ..?”
ಗೆಳೆಯನ ಹೆಗಲ ಮೇಲೆ ಕೈಹಾಕಿದ ತಿಮ್ಮರಾಯಪ್ಪ ಹೇಳಿದರು: “ನೀವು ಹೇಳುವುದೂ ಸರಿ. ಆಕೆಗೆ ನಾನು ಯಾರು ಅನ್ನುವುದು ಗೊತ್ತಿಲ್ಲ. ಆದರೆ ಅವಳು ಯಾರು ಅಂತ ನನಗೆ ಗೊತ್ತಿದೆ ಅಲ್ವ? ಇಷ್ಟು ವರ್ಷದಲ್ಲಿ ಅವಳು ನನ್ನನ್ನು ಸಾಕಿ ಸಲಹಿದ್ದಾಳೆ. ನನಗೋಸ್ಕರ ಏನೆಲ್ಲ ತ್ಯಾಗ ಮಾಡಿದ್ದಾಳೆ. ಅಂಥವಳು ಅಸಹಾಯಕಳಾಗಿ ಇರುವಾಗ, ನಾನು ಜತೆಯಲ್ಲಿ ಇರ ಬೇಕಲ್ವ? ಅಕಸ್ಮಾತ್ ಇದ್ದಕ್ಕಿದ್ದಂತೆ ನೆನಪು ಮರುಕಳಿಸಿಬಿಟ್ರೆ… ಗಂಡ ಜತೆಗಿಲ್ಲ ಅನ್ನಿಸಿ ಆಕೆಗೆ ನಾನು ಒಂಟಿ ಅನ್ನಿಸಿ ನೋವಾಗಲ್ವ? ಹಾಗಾಗಲು ನಾನು ಅವಕಾಶ ಕೊಡಲಾರೆ. ಅವಳು ನನ್ನ ಜೀವ. ಅವಳಿಗೆ ನನ್ನ ಗುರುತು ಸಿಗದಿರಬಹುದು. ಆದರೆ ಆಕೆಯ ಕರುಳಿಗೆ ನನ್ನ ಪರಿಚಯ ಸಿಕ್ಕಿ ಬಿಡುತ್ತೆ! ಹಾಗಾಗಿ, ಅವಳಪಕ್ಕದಲ್ಲಿ ನಿಂತಾಗಲೇ ನನಗೆ ಸಮಾಧಾನ… ನಾಳೆ ಸಿಕ್ಕೋಣ, ಬರ್ಲಾ… ” ನಮ್ಮ ಉತ್ತರಕ್ಕೂ ಕಾಯದೆ ಗಡಿಬಿಡಿಯಿಂದಲೇ ಹೆಜ್ಜೆ ಮುಂದಿಟ್ಟರು ತಿಮ್ಮರಾಯಪ್ಪ. ಆ ಕ್ಷಣದಮಟ್ಟಿಗೆ ಸೂರ್ಯನನ್ನು ಮೋಡವೊಂದು ಆವರಿಸಿಕೊಂಡು, ಹಿತವಾದ ನೆರಳು ಇಳೆಯನ್ನು ತಂಪಾಗಿಸಿತು… ಎ.ಆರ್.ಮಣಿಕಾಂತ್