Advertisement

ಟ್ರಂಪ್‌ ಭರವಸೆಗಳ ಕಥೆಯೇನು?

11:58 PM Oct 27, 2020 | mahesh |

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿಯೂ ಟ್ರಂಪ್‌ ಗೆಲ್ಲುತ್ತಾರಾ ಅಥವಾ ಡೆಮಾಕ್ರಟಿಕ್‌ ಪಾರ್ಟಿ ಹೇಳುವ ಹಾಗೆ, ಅಮೆರಿಕನ್ನರು ಟ್ರಂಪ್‌ರಿಂದ ರೋಸಿಹೋಗಿದ್ದಾರಾ? “ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌’ ಎಂಬ ಭರವಸೆಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದಿದ್ದ ಟ್ರಂಪ್‌ ತಮ್ಮ ಮಾತು ಉಳಿಸಿಕೊಳ್ಳಲು ಎಷ್ಟು ಯಶಸ್ವಿಯಾಗಿದ್ದಾರೆ?

Advertisement

ಗೋಡೆ ನಿರ್ಮಿಸುತ್ತಿದ್ದಾರಾ?
ಮೆಕ್ಸಿಕೋದ ಅಕ್ರಮ ನುಸುಳುಕೋರರನ್ನು ತಡೆಯುವುದಕ್ಕಾಗಿ ಅಮೆರಿಕ-ಮೆಕ್ಸಿಕೋ ಗಡಿಯುದ್ದಕ್ಕೂ ಬೃಹತ್‌ ಗೋಡೆ ನಿರ್ಮಿಸುವುದಾಗಿ ಟ್ರಂಪ್‌ ಭರವಸೆ ನೀಡಿದ್ದರು. ಬಾಕಿ ಉಳಿದಿರುವ 2,100 ಕಿ.ಮಿ. ಉದ್ದದ ಮುಕ್ತ ಗಡಿಯಲ್ಲಿ ಕಾಂಕ್ರೀಟ್‌ ಗೋಡೆ ನಿರ್ಮಿಸುವುದು ಅಸಾಧ್ಯ, ಅದರಿಂದ ಸರಕಾರದ ಬೊಕ್ಕಸಕ್ಕೆ ಬಹಳ ಪೆಟ್ಟು ಬೀಳುತ್ತದೆ ಎಂದು ವಿಪಕ್ಷಗಳು ವಾದಿಸಿದ್ದವು. ಟ್ರಂಪ್‌ ಗೋಡೆ ನಿರ್ಮಾಣಕ್ಕೆ ಮೆಕ್ಸಿಕೋದಿಂದಲೇ ಹಣ ಪಡೆಯುತ್ತೇವೆ ಎಂದಿದ್ದರಾದರೂ, ಅದು ಸಾಧ್ಯವಾಗುವ ಮಾತಲ್ಲ. ಹಲವು ಅಡ್ಡಿ ಆತಂಕಗಳ ಅನಂತರ ಕೊನೆಗೂ 2019ರ ಸೆಪ್ಟrಂಬರ್‌ನಲ್ಲಿ ಅಮೆರಿಕದ ಬೊಕ್ಕಸದಿಂದಲೇ ಗೋಡೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 2020ರ ಅಂತ್ಯದೊಳಗೆ 800 ಕಿಲೋಮೀಟರ್‌ನಷ್ಟಾದರೂ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು ಟ್ರಂಪ್‌. ಈಗ ಗೋಡೆ ನಿರ್ಮಾಣ ಕಾರ್ಯ ವೇಗ ಪಡೆದಿದ್ದು, ಅಕ್ಟೋಬರ್‌ 20ರ ವೇಳೆಗೆ 597 ಕಿ.ಮಿ. ಉದ್ದಕ್ಕೆ ಗೋಡೆ ನಿರ್ಮಾಣವಾಗಿದೆ.

ಕೋವಿಡ್‌ ಸವಾಲಿನ ನಡುವೆ
ಕೋವಿಡ್‌ ನಿರ್ವಹಣೆಯಲ್ಲಿ ಟ್ರಂಪ್‌ ಅಜಾಗರೂಕತೆ ತೋರಿದ್ದರಿಂದಾಗಿ ನಿರುದ್ಯೋಗ ಸಮಸ್ಯೆ ಅಧಿಕವಾಗಿದೆ ಎನ್ನುವುದು ಜೋ ಬೈಡೆನ್‌ ಆರೋಪ. ಆದರೆ ಸಾಂಕ್ರಾಮಿಕಕ್ಕೆ ಚೀನವನ್ನು ಕಟಕಟೆಯಲ್ಲಿ ನಿಲ್ಲಿಸುವ ಟ್ರಂಪ್‌, ಕೋವಿಡ್‌ನಿಂದಾಗಿ ನಷ್ಟವಾಗಿದ್ದ ಉದ್ಯೋಗಗಳಲ್ಲಿ ಈಗಾಗಲೇ 52 ಪ್ರತಿಶತ ಉದ್ಯೋಗ ರಿಕವರಿ ಆಗಿದೆ ಎನ್ನುತ್ತಾರೆ. ಎಚ್‌1ಬಿ ವೀಸಾದ ವಿಚಾರದಲ್ಲಿ ತಾನು ತಂದಿರುವ ಕಠಿನ ನಿಯಮಗಳು, ಅಮೆರಿಕನ್ನರಿಗೆ ವರದಾನವಾಗಲಿವೆ ಎಂದೂ ಟ್ರಂಪ್‌ ಆಡಳಿತ ವಾದಿಸುತ್ತಿದೆ.

ಅಮೆರಿಕನ್‌ ಪಡೆಗಳು ವಾಪಸ್‌
“ಅಮೆರಿಕನ್‌ ಸೈನಿಕರು ಅಫ್ಘಾನಿಸ್ಥಾನ, ಸಿರಿಯಾ ಇರಾಕ್‌ನಲ್ಲಿ ಸಾಯುತ್ತಿದ್ದಾರೆ. ಅಮೆರಿಕನ್‌ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತೇನೆ’ ಎಂಬ ಭರವಸೆ ನೀಡಿದ್ದರು ಟ್ರಂಪ್‌. ಈ ಭರವಸೆ ಭಾಗಶಃ ಈಡೇರಿದೆ. ಸಿರಿಯಾದಿಂದ ಸಾವಿರಾರು ಸಂಖ್ಯೆಯಲ್ಲಿ ಅಮೆರಿಕನ್‌ ಸೈನಿಕರನ್ನು ಅವರು ಹಿಂದಕ್ಕೆ ಕರೆಸಿಕೊಂಡಿದ್ದು, ಈಗ ಆ ದೇಶದಲ್ಲಿ 500 ಸೈನಿಕರು ಉಳಿದಿದ್ದಾರೆ. ಇನ್ನು ಆಫ್ಘಾನಿಸ್ಥಾನದಲ್ಲಿ 13 ಸಾವಿರಕ್ಕೂ ಅಧಿಕ ಅಮೆರಿಕನ್‌ ಸೈನಿಕರಿದ್ದರು, ಈಗ ಅವರ ಸಂಖ್ಯೆ 8,600ಕ್ಕೆ ಇಳಿದಿದೆ. ತಾಲಿಬಾನ್‌, ಅಫ‌^ನ್‌ ಸರಕಾರದ ನಡುವೆ ಶಾಂತಿ ಒಪ್ಪಂದವಾದರೆ, ಪೂರ್ಣವಾಗಿ ಪಡೆಗಳನ್ನು ಹಿಂಪಡೆಯುತ್ತೇವೆ ಎಂದು ಅವರನ್ನುತ್ತಾರಾದರೂ, ಹಾಗೇನಾದರೂ ಆದರೆ ಆಗ ಆಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ಹಿಡಿತಕ್ಕೆ ಸಿಲುಕುತ್ತದೆ ಹಾಗೂ ಚೀನ ಮೇಲಿನ ತನ್ನ ಕಾರ್ಯತಂತ್ರಕ್ಕೆ ಅಡ್ಡಿಯಾಗುತ್ತದೆ ಎನ್ನುವುದನ್ನು ಅರಿತಿದ್ದಾರೆ.

ಅಮೆರಿಕನ್ನರಿಗೇ ಆದ್ಯತೆ
ಅನ್ಯ ದೇಶಗಳ ನಾಗರಿಕರಿಗೆ ಹರಿದುಹೋಗುತ್ತಿರುವ ಉದ್ಯೋಗಗಳನ್ನು ಅಮೆರಿಕನ್ನರಿಗೇ ಕೊಡಿಸುತ್ತೇವೆ ಎನ್ನುತ್ತಾ ಕೆಳ ಮಧ್ಯಮ ಹಾಗೂ ಬಡ ವರ್ಗದ ಶ್ವೇತವರ್ಣೀಯ ಮತದಾರರನ್ನು ಸೆಳೆದಿದ್ದರು ಟ್ರಂಪ್‌. ಅವರು ಈ ವಿಷಯದಲ್ಲಿ ಎಷ್ಟು ಯಶಸ್ವಿಯಾಗಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಆದರೆ, ವೈಟ್‌ಹೌಸ್‌ನ ಅಧಿಕೃತ ಜಾಲತಾಣವಂತೂ ಟ್ರಂಪ್‌ ಅವಧಿಯಲ್ಲಿ 70 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುತ್ತದೆ. 2019ರಲ್ಲಿ ಟ್ರಂಪ್‌ ಆಡಳಿತ “ಕಳೆದ ಐವತ್ತು ವರ್ಷಗಳಲ್ಲೇ ಅತೀಕಡಿಮೆ ನಿರುದ್ಯೋಗ ಪ್ರಮಾಣ ದಾಖಲಾ ಗಿದೆ, ಅಲ್ಲದೇ ಕಳೆದ 65 ವರ್ಷದಲ್ಲೇ ಮಹಿಳೆಯರಲ್ಲಿನ ನಿರುದ್ಯೋಗ ಪ್ರಮಾಣ ಕನಿಷ್ಠ ಮಟ್ಟಕ್ಕೆ ಕುಸಿದಿದೆ’ ಎಂದು ಹೇಳಿತ್ತು. ಈ ಅಂಕಿಅಂಶಗಳೆಲ್ಲ ಆಧಾರ ರಹಿತವಾದದ್ದು ಎಂದು ಡೆಮಾಕ್ರಟಿಕ್‌ ಪಕ್ಷ, ಮಾಧ್ಯಮಗಳು ಹೇಳುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next