Advertisement

ರೋಗ ನಿರೋಧಕ ಶಕ್ತಿಯ ಅವಧಿ ಎಷ್ಟು?

02:04 AM Apr 07, 2021 | Team Udayavani |

ಈಗ ದೇಶಾದ್ಯಂತ 45 ವರ್ಷ ಮೀರಿದ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ತಿಂಗಳ ಅಂತರದಲ್ಲಿ ಎರಡು ಡೋಸ್‌ ನೀಡಲಾಗುತ್ತಿದೆ. ಈಗಾಗಲೇ 6ರಿಂದ 7 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. ಹಾಗಾದರೆ ಒಮ್ಮೆ ಲಸಿಕೆ ಪಡೆದ ಮೇಲೆ, ಇದರ ಪರಿಣಾಮ ಎಷ್ಟು ದಿನ ಇರುತ್ತದೆ ಗೊತ್ತಾ? ಈ ಕುರಿತ ಸಂದೇಹಗಳನ್ನು ನಿವಾರಿಸುವ ಯತ್ನ ಇಲ್ಲಿದೆ.

Advertisement

1. ಎಷ್ಟು ಅವಧಿವರೆಗೆ ಲಸಿಕೆಯ ರೋಗ ನಿರೋಧಕ ಶಕ್ತಿ ಇರುತ್ತದೆ?
ಆರೋಗ್ಯ ತಜ್ಞರ ಪ್ರಕಾರ, ಒಮ್ಮೆ ಲಸಿಕೆ ಪಡೆದ ಮೇಲೆ ಇದರ ಪರಿಣಾಮ ಆರು ತಿಂಗಳವರೆಗೆ ಇರಲಿದೆ. ಈ ಅವಧಿಯಲ್ಲಿ ಲಸಿಕೆ ತೆಗೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿಯೇ ಇರುತ್ತದೆ.

2. ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗವೇನು?
ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಕೊರೊನಾ ಬರುವ ಸಾಧ್ಯತೆ ಕಡಿಮೆ. ಬಂದರೂ ಭಾರೀ ಕಡಿಮೆ ಎನ್ನುವಷ್ಟು ಮಂದಿಗೆ ಬರಬಹುದು. ಆದರೆ ಕೊರೊನಾ ವ್ಯಾಪಿಸುವಿಕೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ತಜ್ಞರು.

3. ಲಸಿಕೆ ಹೇಗೆ ಕೆಲಸ ಮಾಡುತ್ತದೆ?
ಲಸಿಕೆಯನ್ನು ತೆಗೆದುಕೊಂಡ ಮೇಲೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ದೇಹದಲ್ಲಿ ಆ್ಯಂಟಿಬಾಡಿಯನ್ನು ಉತ್ಪತ್ತಿ ಮಾಡುತ್ತದೆ.

4. ಲಸಿಕೆಯ ಪರಿಣಾಮಕತ್ವ ಗೊತ್ತಾಗಿದ್ದು ಹೇಗೆ?
ಈಗಾಗಲೇ ಲಸಿಕೆ ಪಡೆದಿರುವ ಮುಂಚೂಣಿ ಕಾರ್ಯಕರ್ತರಲ್ಲಿ 13 ವಾರಗಳ ವರೆಗೆ ಪ್ರತೀ ವಾರವೂ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಕಂಡು ಬಂದ ಅಂಶಗಳ ಪ್ರಕಾರ, ಲಸಿಕೆಯ ಪರಿಣಾಮಕತ್ವ 6 ತಿಂಗಳವರೆಗೆ ಇರಲಿದೆ.

Advertisement

5 ಲಸಿಕೆ ತೆಗೆದುಕೊಂಡ ಮೇಲೂ ಮಾಸ್ಕ್ ಧರಿಸಿಕೊಳ್ಳಬೇಕಾ?
ಹೌದು, ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಭಾರವನ್ನು ಲಸಿಕೆ ಮೇಲೆ ಹಾಕಿ ಓಡಾಡಲು ಸಾಧ್ಯವಿಲ್ಲ. ಕೊರೊನಾ ಹೋಗುವವರೆಗೂ ಮಾಸ್ಕ್ ಧರಿಸಿ ಓಡಾಡಲೇ ಬೇಕು. ಹಾಗೆಯೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಇತರ ಎಲ್ಲ ಆರೋಗ್ಯಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

6 ಎಲ್ಲರೂ ಲಸಿಕೆ ಪಡೆಯಲೇ ಬೇಕಾ?
ಸದ್ಯ ಸರಕಾರವೇ ನಿಗದಿಪಡಿಸಿರುವ ವಯಸ್ಸಿನ ಮೇಲಿನವರು ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಇದು ಅಂದರೆ ಭಾರತದಲ್ಲಿ 45 ವರ್ಷ ದಾಟಿದ ಎಲ್ಲ ಆರೋಗ್ಯವಂತ ಮತ್ತು ಇತರ ಅನಾರೋಗ್ಯ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಎಲ್ಲರೂ ಬಳಸಿಕೊಳ್ಳಬೇಕು.

ಮೂಲ: ಸಿಎನ್‌ಎನ್

Advertisement

Udayavani is now on Telegram. Click here to join our channel and stay updated with the latest news.

Next