ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ವರದಿಗಳ ಬೆನ್ನಲ್ಲೇ, ಜೆಡಿಎಸ್ ಪಕ್ಷ ಸುಮಲತಾ ವಿರುದ್ಧ ಕಿಡಿ ಕಾರಲು ಆರಂಭಿಸಿದೆ. ‘ಮಂಡ್ಯ ಜಿಲ್ಲೆಗೆ ಸುಮಲತಾ ಕೊಡುಗೆ ಏನು?’ ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಕಟುವಾಗಿ ಪ್ರಶ್ನಿಸಿದರೆ, ಜೆಡಿಎಸ್‌ನ ಎಂಎಲ್‌ಸಿ ಶ್ರೀಕಂಠೇಗೌಡರು, ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ’ ಎಂದು ಜಾತಿಯನ್ನು ಕೆಣಕಿದ್ದಾರೆ.
ಸೋಮವಾರ ಪತ್ರಿಕಾ ಸಂಪಾದಕರ ಜತೆ ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ”ವಾಟ್ ಈಸ್ ದಿ ಕಾಂಟ್ರಿಬ್ಯೂಷನ್ ಆಫ್ ಸುಮಲತಾ ಇನ್ ಮಂಡ್ಯ? ಯಾಕೆ ಈ ರೀತಿ ಪ್ರಚಾರ ನೀಡಲಾಗುತ್ತಿದೆ? ಸುಮಲತಾ ಹೆಸರು ಯಾಕೆ ಓಡ್ತಾ ಇದೆ? ಇವು ಕೇವಲ ಭಾವನಾತ್ಮಕ ವಿಷಯಗಳು” ಎಂದು ವಿಶ್ಲೇಷಿಸಿದರು.
ದೇವೇಗೌಡರ ಮೂರನೇ ತಲೆಮಾರು ರಾಜಕೀಯ ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆಗೆ ಲಘು ಧಾಟಿಯಲ್ಲಿ ಉತ್ತರಿಸಿದ ಕುಮಾರಸ್ವಾಮಿ, ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗುವುದು, ಸಿನಿಮಾ ನಟರ ಮಕ್ಕಳು ಸಿನಿಮಾನಟರಾಗುವಂತೆ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಿವುದು ಸ್ವಾಭಾವಿಕ ಎಂದರು. ನಿಖೀಲ್ ಸ್ಪರ್ಧಿಸುವ ಬಗ್ಗೆ ಪಕ್ಷದ ಕಾರ್ಯಕರ್ತರು ಒತ್ತಾಯ ಮಾಡುತ್ತಿರಬಹುದು. ಆದರೆ, ಅವೆಲ್ಲವನ್ನೂ ಪಕ್ಷವೇ ನಿರ್ಧರಿಸಲಿದೆ. ಆ ಬಗ್ಗೆ ಇನ್ನೂ ಪಕ್ಷ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಉತ್ತರಿಸಿದರು.
ಸುಮಲತಾ ಆಂಧ್ರ ಗೌಡ್ತಿ: ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀಕಂಠೇಗೌಡರ ಈ ಹೇಳಿಕೆಯು ಅಂಬಿ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ. ಅಭಿಮಾನಿಗಳು ಶ್ರೀಕಂಠೇಗೌಡರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
”ನನ್ನ ರಾಜಕಾರಣ ನನಗೇ ಕೊನೆಯಾಗಲಿ. ಚುನಾವಣೆಗೆ ನನ್ನ ಪತ್ನಿ ಹಾಗೂ ಮಗನನ್ನು ತರುವುದಿಲ್ಲ ಎಂದು ಅಂಬರೀಶ್ ಬದುಕಿದ್ದಾಗಲೇ ಸ್ಪಷ್ಟವಾಗಿ ಹೇಳಿದ್ದರು. ಈಗಾಗಲೇ ರಮ್ಯಾರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ನೋಡಿಯಾಗಿದೆ. ರಮ್ಯಾ ಅವರಿಂದ ಈಗಾಗಲೇ ಜನರು ಪಾಠ ಕಲಿತಿದ್ದಾರೆ,” ಎಂದೂ ಹೇಳಿದರು.
ಸುಮಲತಾ ರಾಜಕಾರಣ ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ಅಂಬಿ ಕುಟುಂಬಕ್ಕೆ ಎಲ್ಲ ರೀತಿಯ ರಾಜಕೀಯ ಸಹಕಾರ ನೀಡುತ್ತೇವೆ. ಸದಾಕಾಲ ನಾವು ಅವರ ಜೊತೆಗಿದ್ದೇವೆ.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ