ಕಾರಕಸ್(ವೆನೆಜುವೆಲಾ): ಸತತ ಮೂರನೇ ಬಾರಿಗೆ ನಿಕೋಲಸ್ ಮಡುರೋ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ವೆನೆಜುವೆಲಾ ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಿಸಿದ ನಂತರ ಪ್ರತಿಭಟನೆ ಭುಗಿಲೆದ್ದಿರುವ ಘಟನೆ ಸೋಮವಾರ (ಜು.30) ನಡೆದಿರುವುದಾಗಿ ವರದಿಯಾಗಿದೆ.
ಮತ್ತೊಂದೆಡೆ ಚುನಾವಣಾ ಅಧಿಕಾರಿಗಳ ಘೋಷಣೆಯ ನಂತರ ವಿರೋಧ ಪಕ್ಷದ ಅಭ್ಯರ್ಥಿ ಎಡ್ಮುಂಡೋ ಗೋನ್ಸಾಲಿಝ್ ಕೂಡಾ ತಾನು ಗೆಲುವು ಸಾಧಿಸಿರುವುದಕ್ಕೆ ಪುರಾವೆ ಇದ್ದಿರುವುದಾಗಿ ಘೋಷಿಸುವ ಮೂಲಕ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದೆ.
ವೆನೆಜುವೆಲಾ ಆಡಳಿತ ಪಕ್ಷ ನಿಷ್ಠಾವಂತ ಐವರು ಸದಸ್ಯರ ಚುನಾವಣಾ ಮಂಡಳಿ ಮೂಲಕ ಮತದಾನ ವ್ಯವಸ್ಥೆ ಕಲ್ಪಿಸಿರುವುದಾಗಿ ವರದಿ ತಿಳಿಸಿದೆ. ಆದರೂ ಚುನಾವಣಾ ಕೇಂದ್ರದಿಂದ ಅಧಿಕೃತವಾಗಿ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು ಎಂದು ವರದಿ ಹೇಳಿದೆ.
ಭಾನುವಾರ ನಡೆದ ವೆನೆಜುವೆಲಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋನ್ಸಾಲಿಝ್ ಶೇ.70ಕ್ಕಿಂತಲೂ ಅಧಿಕ ಮತ ಪಡೆದಿರುವುದಾಗಿ ವಿಪಕ್ಷ ನಾಯಕಿ ಮರಿಯಾ ಕೋರಿನಾ ಮಚಾಡೋ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸೋಮವಾರ ನ್ಯಾಷನಲ್ ಎಲೆಕ್ಟ್ರೋಲ್ ಕೌನ್ಸಿಲ್ (CNE) ಔಪಚಾರಿಕವಾಗಿ ಫಲಿತಾಂಶ ಘೋಷಣೆ ಮಾಡಿದ ನಂತರ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಮಡುರೋ ಭಾರೀ ಬಹುಮತದೊಂದಿಗೆ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದು, 2025ರಿಂದ 2031ರವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.