ಮುಂಬೈ: ಈ ಬಾರಿಯ ಐಪಿಎಲ್ ಹಲವು ಬದಲಾವಣೆಗಳೊಂದಿಗೆ ಹೊಸ ಮಾದರಿಯಲ್ಲಿ ಬರಲಿದೆ. ಕೆಲವು ನೂತನ ನಿಯಮಗಳು ಈ ಬಾರಿಯ ಕೂಟದಲ್ಲಿರಲಿದೆ. ಅದರಲ್ಲಿ ಪ್ರಮುಖವಾಗಿರುವುದು ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಹಾಗಾದರೆ ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಬಳಕೆ ಹೇಗೆ? ಇಲ್ಲಿದೆ ಉತ್ತರ.
ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟದ ಸಮಯದಲ್ಲಿ ಯುದ್ಧತಂತ್ರದ ಬದಲಾವಣೆಯನ್ನು ಮಾಡಲು ತಂಡಕ್ಕೆ ಅವಕಾಶವನ್ನು ನೀಡುತ್ತದೆ. ಟಾಸ್ ಸಮಯದಲ್ಲಿ, ನಾಯಕನು ಆರಂಭಿಕ 11 ಆಟಗಾರರ ಜೊತೆಗೆ ನಾಲ್ಕು ಬದಲಿ ಆಟಗಾರರನ್ನು ಉಲ್ಲೇಖಿಸಬೆಕು. ಈ ಬದಲಿ ಆಟಗಾರನು (ಇಂಪ್ಯಾಕ್ಟ್ ಪ್ಲೇಯರ್) ಇನ್ನಿಂಗ್ಸ್ ನ 14 ನೇ ಓವರ್ ನ ಮುಕ್ತಾಯದ ಮೊದಲು ಯಾವುದೇ ನಿರ್ದಿಷ್ಟ ಹಂತದಲ್ಲಿ ಆರಂಭಿಕ 11 ನ ಸದಸ್ಯರನ್ನು ಬದಲಾಯಿಸಬಹುದು. ಆಟಗಾರನು ಬ್ಯಾಟಿಂಗ್ ಮಾಡಲು ಹಾಗೂ ತನ್ನ ಸಂಪೂರ್ಣ ಕೋಟಾದ (ನಾಲ್ಕು) ಓವರ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.
ಮತ್ತೊಂದು ವಿಶೇಷವೆಂದರೆ ಇಂಪ್ಯಾಕ್ಟ್ ಪ್ಲೇಯರ್ ಈಗಾಗಲೇ ಔಟ್ ಆಗಿರುವ ಆಟಗಾರನ ಬದಲಿಯಾಗಿ ಬಂದು ಮತ್ತೊಮ್ಮೆ ಬ್ಯಾಟಿಂಗ್ ಮಾಡಬಹುದು. ಆದರೆ ತಂಡದಲ್ಲಿ ಕೇವಲ 11 ಬ್ಯಾಟರ್ ಗಳಿಗೆ ಬ್ಯಾಟಿಂಗ್ ಗೆ ಅವಕಾಶವಿದೆ. ಮತ್ತೊಂದೆಡೆ, ಈಗಾಗಲೇ ಕೆಲವು ಓವರ್ ಗಳನ್ನು ಬೌಲ್ ಮಾಡಿದ ಬೌಲರ್ ಬದಲಿಗೆ ಬಂದು ನಾಲ್ಕು ಓವರ್ ಗಳ ಪೂರ್ಣ ಕೋಟಾ ಬೌಲ್ ಮಾಡಬಹುದು.
ಇದನ್ನೂ ಓದಿ:ಏಷ್ಯಾದ ಅತೀ ದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವನ; ಒಂದೇ ವಾರದಲ್ಲಿ 1 ಲಕ್ಷ ಪ್ರವಾಸಿಗರ ಭೇಟಿ
ಇಂಪ್ಯಾಕ್ಟ್ ಪ್ಲೇಯರ್ ಸೇರ್ಪಡೆಯಿಂದ ಆಟಕ್ಕೆ ಹೊಸತನ ಬಂದಂತಾದರೂ ಈ ನಿಯಮವು ಕೆಲವು ಮಿತಿಗಳನ್ನು ಹೊಂದಿದೆ. 10 ಓವರ್ ಗಳಿಗಿಂತ ಕಡಿಮೆಯಿರುವ ಆಟದಲ್ಲಿ (ಮಳೆ ಸೇರಿದಂತೆ ಹಲವು ಕಾರಣದಿಂದ) ಈ ನಿಯಮ ಅನ್ವಯಿಸುವುದಿಲ್ಲ. ಅಲ್ಲದೆ, ಪ್ರತಿ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸಲೇ ಬೇಕು ಎಂಬ ಒತ್ತಾಯವಿಲ್ಲ. ಆದರೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸುವ ಮೊದಲು ನಾಯಕ ಅಥವಾ ಮುಖ್ಯ ಕೋಚ್ ಅಥವಾ ಮ್ಯಾನೇಜರ್ ಅದನ್ನು ಆನ್-ಫೀಲ್ಡ್ ಅಂಪೈರ್ ಗೆ ತಿಳಿಸಬೇಕು.
ಇಂಪ್ಯಾಕ್ಟ್ ಪ್ಲೇಯರ್ ಓವರ್ ನಡುವಿನಲ್ಲಿ ಬರುವಂತಿಲ್ಲ. ಓವರ್ ಮುಗಿದ ಬಳಿಕವಷ್ಟೇ ಆಟಕ್ಕೆ ಬರಬಹುದು. ಆದಾಗ್ಯೂ, ಕೆಲವು ವಿನಾಯಿತಿಗಳಿದ್ದು, ಬ್ಯಾಟಿಂಗ್ ತಂಡವು ವಿಕೆಟ್ ಪತನದ ಸಮಯದಲ್ಲಿ ಅದರ ಇಂಪ್ಯಾಕ್ಟ್ ಪ್ಲೇಯರ್ ಕಾರ್ಡ್ ಅನ್ನು ಓವರ್ ನಡುವೆ ಬಳಸಿಬಹುದು, ಫೀಲ್ಡಿಂಗ್ ತಂಡದಲ್ಲಿ ಗಾಯಗೊಂಡ ಫೀಲ್ಡರ್ ಬದಲು ಓವರ್ ನ ನಡುವೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಆಟಕ್ಕೆ ಕರೆಯಬಹುದು.