Advertisement

ICC T20 World Cup; ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

04:03 PM Jun 29, 2024 | Team Udayavani |

ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ 2024 ಅಂತಿಮ ಹಂತಕ್ಕೆ ಬಂದಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಡಲಿದೆ. ಕೂಟದಲ್ಲಿ ಇದುವರೆಗೆ ಅಜೇಯವಾಗಿರುವ ಭಾರತ ಮತ್ತು ದ.ಆಫ್ರಿಕಾ ತಂಡಗಳು ಇಂದು ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ಮುಖಾಮುಖಿಯಾಗಲಿದೆ.

Advertisement

ವೆಸ್ಟ್‌ ಇಂಡೀಸ್‌-ಅಮೆರಿಕ ಆತಿಥ್ಯದ ಈ ವಿಶ್ವಕಪ್‌ನಲ್ಲಿ ಮಳೆಯ ಪಾಲು ದೊಡ್ಡದಿತ್ತು. ಇದರಿಂದ ಕೆಲವು ಲೆಕ್ಕಾಚಾರಗಳು ತಲೆಕೆಳಗಾಗಿವೆ. ಶನಿವಾರದ ಫೈನಲ್‌ ಪಂದ್ಯಕ್ಕೂ ಮಳೆಯ ಭೀತಿ ಇದೆ. ಶೇ.78ರಷ್ಟು ಮಳೆ ಸುರಿದು, ಪಂದ್ಯ ರದ್ದಾದರೂ ಅಚ್ಚರಿಯಿಲ್ಲ.

ಈ ಹಿನ್ನೆಲೆಯಲ್ಲಿ ಮೀಸಲು ದಿನವೂ ಇದೆ. ಅಲ್ಲೂ ಮಳೆ ಸುರಿದು ಪಂದ್ಯ ರದ್ದಾದರೆ ಜಂಟಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇದರ ನಡುವೆ ಪಂದ್ಯದ ಫ‌ಲಿತಾಂಶ ನಿರ್ಧರಿಸಲು ಹಲವು ಲೆಕ್ಕಾಚಾರಗಳಿವೆ. ಆ ಕುತೂಹಲಕರ ಸಂಗತಿಗಳು ಹೀಗಿವೆ…

1 ಶನಿವಾರ ನಿಗದಿತ ಅವಧಿಯಲ್ಲಿ ಪಂದ್ಯ ಮುಗಿಯದೇ ಹೋದರೆ, ಹೆಚ್ಚುವರಿ 3 ಗಂಟೆ 15 ನಿಮಿಷ ನೀಡಲಾಗುತ್ತೆ, ಆ ಅವಧಿಯಲ್ಲಿ ಪಂದ್ಯ ಮುಗಿಯಲೇಬೇಕು.

2 ಮಳೆಯಡ್ಡಿ ಕಾರಣ ಪಂದ್ಯ ತಡವಾದರೆ, ಫ‌ಲಿತಾಂಶ ಬರಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಿರಲೇಬೇಕು. ಇಲ್ಲವಾದರೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ.

Advertisement

3 ಒಂದು ವೇಳೆ ನಿಗದಿತ ದಿನವಾದ ಶನಿವಾರ ಏನೂ ಆಟ ನಡೆಯದೇ ಹೋದರೆ ಅಥವಾ 2ನೇ ಬ್ಯಾಟಿಂಗ್‌ ಮಾಡಿದ ತಂಡಕ್ಕೆ ಕನಿಷ್ಠ 10 ಓವರ್‌ ಆಡಲು ಆಗದೇ ಇದ್ದರೆ, ಮೀಸಲು ದಿನಕ್ಕೆ ಪಂದ್ಯ ಮುಂದೂಡಲ್ಪಡುತ್ತದೆ.

4 ಮೀಸಲು ದಿನದಂದು ಹಿಂದಿನ ದಿನದಂದು ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ.

5 ಆಗಲೂ ಫ‌ಲಿತಾಂಶ ಬರದೇ ಹೋದರೆ, ತಲಾ ಒಂದು ಓವರ್‌ ಗಳ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಮಳೆಯ ತೀವ್ರತೆಯಿಂದ ಅದೂ ಸಾಧ್ಯವಾಗದಿದ್ದರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಅಂಕಣ ಹೇಗಿದೆ?

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಮೈದಾನ ಪಂದ್ಯಾರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚು ಅನುಕೂಲ ನೀಡುವ ಸಾಧ್ಯತೆಯಿದೆ. ಚೆಂಡು ಬೌನ್ಸ್‌ ಆಡುವ ಸಾಧ್ಯತೆಯೂ ಹೆಚ್ಚಿರುವುದರಿಂದ ಬ್ಯಾಟರ್‌ಗಳಿಗೆ ರನ್‌ ಗಳಿಸುವುದು ಆರಂಭದಲ್ಲಿ ಸವಾಲೆನಿಸಬಹುದು. ಪಂದ್ಯ ಮುಂದುವರಿದು ಪಿಚ್‌ಗೆ ಹೊಂದಾಣಿಕೆ ಮಾಡಿಕೊಂಡರೆ, ಬ್ಯಾಟರ್‌ಗಳೂ ಅನುಕೂಲ ಪಡೆಯಲು ಅವಕಾಶವಿದೆ. ಟಾಸ್‌ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಂಡು ಚೇಸಿಂಗ್‌ ಮಾಡುವ ನೆಲೆಯಲ್ಲಿ ಯೋಚಿಸುವ ಸಾಧ್ಯತೆಯೇ ಹೆಚ್ಚು. ಈ ಮೈದಾನದಲ್ಲಿ ಸರಾಸರಿ ಸ್ಕೋರ್‌ 167.

Advertisement

Udayavani is now on Telegram. Click here to join our channel and stay updated with the latest news.

Next