Advertisement
ನಿರಂತರವಾಗಿ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ನಮ್ಮ ಮಾನಸಿಕ ಯೋಗ ಕ್ಷೇಮ ಮತ್ತು ವೈಯಕ್ತಿಕ ಬೆಳವಣಿಗೆಗೆ ಹಾನಿಕರವಾಗಿದೆ. ಬೇರೆಯವರಿಗಿಂತ ನಾನು ಕುಳ್ಳ, ದಪ್ಪ, ಗಿಡ್ಡ, ಬೊಕ್ಕ ತಲೆಯವ, ಸಣಕಲ, ಕಪ್ಪು, ಬಿಳಿ ಕೂದಲವ, ಬೊಜ್ಜು ಹೊಟ್ಟೆ ಹೀಗೆ.. ಜೀವನದ ಬಹುಪಾಲು ಭಾಗವನ್ನು ಕೊರಗುವುದರಲ್ಲಿಯೇ ಕಳೆದಿರುತ್ತೇವೆ.
Related Articles
Advertisement
ನಿರಂತರ ಹೋಲಿಕೆಯು ಅತೃಪ್ತಿಯನ್ನು ಶಾಶ್ವತಗೊಳಿಸುತ್ತದೆ. ನಮ್ಮ ಸ್ವಂತ ಪ್ರಗತಿ ಮತ್ತು ಸಾಧನೆಗಳನ್ನು ಪ್ರಶಂಸಿಸಲು ನಾವು ವಿಫಲರಾಗುತ್ತೇವೆ. ಈ ಮನಸ್ಥಿತಿಯು ನಮ್ಮ ಸಂತೋಷವನ್ನು ನಾಶಪಡಿಸುವುದಲ್ಲದೆ, ಜೀವನದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ತಡೆಯುತ್ತದೆ.
ನಾವು ಯಶಸ್ವಿ ವ್ಯಕ್ತಿಗಳ ಅಂದರೆ ಸಿನೆಮಾ ನಟರ, ಗಾಯಕರ, ಕ್ರಿಕೆಟಿಗರ, ಉದ್ಯಮಿಗಳ, ಸಾಧನೆಗಳನ್ನು ಮಾತ್ರ ನೋಡುತ್ತೇವೆ. ಅವರ ಹಾದಿಯಲ್ಲಿ ಸವೆಸಿದ ಕಷ್ಟ-ನೋವುಗಳು, ಪರಿತಪಿಸಿದ ದಿನಗಳನ್ನು ನೋಡಿರುವುದಿಲ್ಲ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅದೆಷ್ಟೋ ಹಬ್ಬ ಹರಿದಿನಗಳನ್ನು ಆಚರಿಸಿರುವುದಿಲ್ಲ,. ಡಾಕ್ಟರ್ ರಾಜಕುಮಾರ್, ಅಮಿತಾಬ್ ಬಚ್ಚನ್, ಎಷ್ಟೊಂದು ವೈಯಕ್ತಿಕ ಬದುಕಿನ ಕ್ಷಣಗಳನ್ನು ತಪ್ಪಿಸಿಕೊಂಡಿರುವರೋ ಲೆಕ್ಕವಿಟ್ಟವರಾರು?, ಆದರೆ ನಮಗೆ ಕಾಣುವುದು ಅವರ ಯಶಸ್ಸು ಮಾತ್ರ ಸವೆಸಿದ ಹಾದಿ ಅಗೋಚರವಾಗಿಯೇ ಉಳಿದುಬಿಟ್ಟಿರುತ್ತದೆ.
ನಾನು ಬೇರೆಯವನಲ್ಲ,ನಾನು ನಾನೇ
ನಮ್ಮನ್ನು ಇತರರೊಂದಿಗೆ ಹೋಲಿಸುವುದು, ಸ್ವಯಂ ಸೋಲಿಸುವ ನಡವಳಿಕೆಯಾಗಿದ್ದು, ನಮ್ಮ ಸ್ವಾಭಿಮಾನ, ಸಂತೋಷ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ. ಬಾಹ್ಯ ಆದರ್ಶಗಳ ವಿರುದ್ಧ ನಮ್ಮನ್ನು ಅಳೆಯುವ ಬದಲು ನಮ್ಮ ಅನನ್ಯತೆಯನ್ನು ನಾವು ಕಾಪಾಡಿಕೊಳ್ಳಬೇಕು. ಸ್ವಯಂ ಸಹಾನುಭೂತಿ, ಕೃತಜ್ಞತೆ ಬೆಳೆಸಿಕೊಳ್ಳಬೇಕು.
ಓಟದ ಸ್ಪರ್ಧೆಗೆ ಬಿಟ್ಟ ಓಟಗಾರನಿಗೆ ಕಾಣಬೇಕಾಗಿರುವುದು ತನ್ನ ಸ್ಪಷ್ಟ ಪಥ ಹಾಗೂ ಗುರಿ ಮಾತ್ರ, ಈ ಮಟ್ಟದ ನಿಲುವನ್ನು ತಳೆಯಬೇಕು. ಬೇರೆಯವರ ಖುಷಿ, ಗೆಲುವು, ಸಂತೋಷಗಳಲ್ಲಿ ನಾವು ಭಾಗಿಯಾಗಬೇಕು. ಅಸೂಯೆ ದೂರವಿಟ್ಟು ಆತ್ಮತೃಪ್ತಿಯನ್ನು ಹೊಂದಬೇಕು. ನಮ್ಮ ದೌರ್ಬಲ್ಯಗಳ ವಿರುದ್ಧ ನಮ್ಮ ಹೋರಾಟವಿರಬೇಕೆ ಹೊರತು, ಬೇರೆಯವರ ಬಗ್ಗೆ ಅಲ್ಲ. ನಿಮ್ಮಂತೆ ನೀವು ಸಾಕು ನಿಮ್ಮ ಪಯಣ ನಿಮ್ಮದೇ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು,ಕಷ್ಟಗಳ ಮಳೆಯ ವಿಧಿ ಸುರಿಯೆ
ಕಲ್ಲು ಸಕ್ಕರೆಯಾಗು, ದೀನದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ. ನಮ್ಮತನವನ್ನು ಉಳಿಸಿಕೊಂಡು, ಬೇರೆಯವರ ಬದುಕಿಗೂ ಬೆಳಕಾಗೋಣವಲ್ಲವೇ..
- ಕೆ.ಟಿ. ಮಲ್ಲಿಕಾರ್ಜುನಯ್ಯ,
ಶಿಕ್ಷಕರು., ಸೀಗಲಹಳ್ಳಿ.ಶಿರಾ