ಭಾವಲೋಕ ಎಂಬುದು ಮನುಷ್ಯನ ಅನೂಹ್ಯ ಜಗತ್ತು. ಅಲ್ಲಿ ಅರಳುವ ಹೊರಳುವ ಭಾವಗಳಿಗೆ ಲೆಕ್ಕವಿಲ್ಲ. ಈ ಭಾವಗಳೇ ಮನುಷ್ಯನನ್ನು ಬಂಧಿಸುತ್ತವೆಯೋ ಅಥವಾ ಮನುಷ್ಯನೇ ತನಗೇ ತಿಳಿಯದಂತೆ ಈ ಭಾವಗಳಲ್ಲಿ ಬಂಧಿಯಾಗಿ ಬಿಡುತ್ತಾನೋ ಎನ್ನುವುದೇ ತಿಳಿಯದು. ಆದರೆ ಭಾವಕೋಶದೊಳಗೆ ಬಿರಿಯುವ ಭಾವಗಳು ಕೆಲವೊಮ್ಮೆ ಅಲ್ಲೇ ಮುದುಡಿ ಮರೆಯಾಗಿ ಹೋಗುತ್ತವೆ.
‘ನೀ ನನಗಿದ್ದರೆ ನಾ ನಿನಗೆ’ ಎನ್ನುವುದು ಸಹಾಯಕ್ಕೆ ಮಾತ್ರವೇ ಸಂಬಂಧಿಸಿದುದು ಅಲ್ಲ. ಅದು ಭಾವ ಬಂಧಿಯೂ ಹೌದು, ಭಾವ ಸ್ಪಂದಿಯೂ ಹೌದು.
ಮನುಷ್ಯನ ನಡೆ- ನುಡಿಗಳೆಲ್ಲವೂ ಭಾವಗಳೊಂದಿಗೆ ಬಂಧಿ ಯಾಗಿರುತ್ತವೆ. ಭಾವನೆಗಳು ಇಲ್ಲದ ಜೀವವೇ ಇಲ್ಲ. ಪ್ರತಿಯೊಂದು ಜೀವಕ್ಕೂ ಅದರದೇ ಆದ ಭಾವವಲಯವಿರುತ್ತದೆ. ಆ ಭಾವಕೋಶದೊಳಗೆ ಕನಸು, ಕಲ್ಪನೆ, ಆಸೆ, ವಿಚಾರಗಳು ಎಲ್ಲವೂ ರೂಪು ತಳೆಯುತ್ತವೆ. ಬುದ್ಧಿಯಿಂದ ರೂಪುಗೊಂಡ ಚಿಂತನೆಗಳನ್ನೂ ಭಾವವಲಯ ಪೋಷಿಸಿ ಬೆಳೆಸುತ್ತದೆ. ಅದೆಷ್ಟೋ ಭಾವವಲಯದಿ ಬೆಳೆದ ಭಾವಗಳನ್ನು ಬುದ್ಧಿ ತನ್ನ ಹಿಡಿತದಲ್ಲಿ, ಮುಷ್ಟಿಯಲ್ಲಿ ಇರಿಸಲು ಪ್ರಯತ್ನಿಸುತ್ತದೆ.
ಈ ಭಾವ ಮತ್ತು ಬುದ್ಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವೆರಡೂ ಪರಸ್ಪರ ಹೊಂದಿಕೊಂಡು ಕಾರ್ಯ ಮಾಡಿದರೆ ಬಾಳು ಸುಗಮವಾಗಿ ಸಾಗುತ್ತದೆ. ಅವೆರಡರ ಮಧ್ಯೆ ಜೀಕುವಿಕೆ ಆರಂಭವಾದಾಗ ಬದುಕಿನ ಬಂಡಿಯೂ ಮೆಲ್ಲನೇ ವಾಲಲಾರಂಭಿಸುತ್ತದೆ. ಬಾಳ ಬಂಡಿ ಸರಿಯಾಗಿ ಸಾಗಲು ಬುದ್ಧಿ ಮತ್ತು ಭಾವ ಎರಡರ ನಿಯಂತ್ರಣವೂ ಅಗತ್ಯ. ಭಾವವೇ ಬದುಕಾಗಲೂ ಬಾರದು. ಬುದ್ಧಿಯೇ ಎಲ್ಲವನ್ನೂ ನಿಯಂತ್ರಿಸಲೂ ಬಾರದು. ಭಾವ-ಬುದ್ಧಿಗಳ ಸಂಗಮದ ಬಾಳಲಿ ಅರಿತು-ಬೆರೆತು ನಡೆಯಬೇಕಿದೆ. ಒಲುಮೆಯೂಡಿ ಸಾಗಬೇಕಿದೆ.
-ಡಾ| ಮೈತ್ರಿ ಭಟ್
ವಿಟ್ಲ