ಬೀಜಿಂಗ್: ಚೀನದ ಆರ್ಥಿಕಸ್ಥಿತಿಯೂ ಹಳ್ಳ ಹಿಡಿದಿದೆ. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿದೆಯೆಂದರೆ ಚೀನದ ದೊಡ್ಡದೊಡ್ಡ ಮನೆ ನಿರ್ಮಾಣ ಕಂಪನಿಗಳು ಕಳೆದ 11 ತಿಂಗಳುಗಳಿಂದ ಅಳುಮುಖ ಹಾಕಿಕೊಂಡಿವೆ!
ಅಂದರೆ ಬೃಹತ್ ಕಂಪನಿಗಳು ಕಟ್ಟಿದ ದೊಡ್ಡದೊಡ್ಡ ಮನೆಗಳು ಮಾರಾಟವಾಗುತ್ತಿಲ್ಲ. ಇದಕ್ಕಾಗಿ ಕೆಲವು ಕಂಪನಿಗಳು ರೈತರ ಬೆಳೆಗಳನ್ನೇ ಪರ್ಯಾಯವಾಗಿ ಕೊಟ್ಟರೂ ಪರವಾಗಿಲ್ಲ; ಮನೆ ಕೊಡುತ್ತೇವೆ ಎಂದು ಜಾಹೀರಾತು ನೀಡಿವೆ.
ಮೇ ತಿಂಗಳಲ್ಲಿ ಸೆಂಟ್ರಲ್ ಚೀನ ಮ್ಯಾನೇಜ್‌ಮೆಂಟ್ ಎಂಬ ಕಂಪನಿ 16 ದಿನಗಳ ಕಾಲ ಅಭಿಯಾನ ನಡೆಸಿತ್ತು. ಆಗ ನೀವು ಬೆಳ್ಳುಳ್ಳಿ ಕೊಟ್ಟರೂ, ಅದನ್ನೇ ಡೌನ್‌ಪೇಮೆಂಟ್ ಎಂದು ಸ್ವೀಕರಿಸುತ್ತೇವೆ ಎಂದು ಘೋಷಿಸಿತ್ತು. ಇದು ಶುದ್ಧವಾಗಿ ರೈತರಿಗೆ ಮನೆ ಕೊಳ್ಳಲು ನಾವು ಹಿಡಿದ ದಾರಿ ಎನ್ನುವುದು ಅದರ ಅಭಿಪ್ರಾಯ. ಈ ಮಾರ್ಗದಲ್ಲಿ ಕಂಪನಿ 30 ಮನೆಗಳನ್ನು ಮಾರಿದೆ. ಅದೇಕೋ ಏನೋ ಇದು ಆ ಮಟ್ಟದಲ್ಲಿ ಫಲ ನೀಡಿದಂತಿಲ್ಲ.
ಕಳೆದ ವಾರ ವುಕ್ಸಿ ನಗರದಲ್ಲಿನ ಕಂಪನಿಯೊಂದು 1,88,888 ಯುವಾನ್ (22.38 ಲಕ್ಷ ರೂ.) ಮೌಲ್ಯದ ಪೀಚ್ ಹಣ್ಣುಗಳನ್ನು ಡೌನ್ ಪೇಮೆಂಟ್ ರೂಪದಲ್ಲಿ ಸ್ವೀಕರಿಸುತ್ತೇವೆಂದು ಹೇಳಿತ್ತು.
ನ್ಯಾಂಜಿಂಗ್‌ನಲ್ಲಿನ ಇನ್ನೊಂದು ಕಂಪನಿ 5000 ಕೆಜಿ ಕಲ್ಲಂಗಡಿ ಹಣ್ಣುಗಳನ್ನೇ ಡೌನ್ ಪೇಮೆಂಟ್ ಆಗಿ ಪಡೆಯುತ್ತೇವೆಂದು ಘೋಷಿಸಿತ್ತು.