ಡಿಗ್ರಿ ಮೊದಲ ಸೆಮಿಸ್ಟರಲ್ಲಿ ಓದುತ್ತಿರುವಾಗ ಮನಸಲ್ಲಿ ಆದ ತಳಮಳದ ಬಗ್ಗೆ ಹೇಳಲೇಬೇಕಾಗಿದೆ. ಮೊದಲ ದಿನದ ಖುಷಿ ಒಂದು ಕಡೆ. ಇನ್ನೊಂದು ಕಡೆ ಆತಂಕ. ಪರಿಚಯ ಇಲ್ಲದ ಸ್ನೇಹಿತರು, ನಗರವನ್ನರಿಯದ ಹಳ್ಳಿ ಹುಡುಗ ನಾನು, ಈ ನಗರಜೀವನಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಆತಂಕ ಕಾಡುತ್ತಿತ್ತು.
ಅವತ್ತು ಯಾವ ವಾರ ಗೊತ್ತಿಲ್ಲ. ತುಂತುರು ಮಳೆ ಬರುತ್ತಿತ್ತು, ಪಡುವಣ ದಿಕ್ಕಿನಿಂದ ಮಲ್ಲಿಗೆಯ ಸುಗಂಧ ಘಂ ಎಂದು ಮೂಗಿಗೆ ತಾಕಿತು, ಅವಳು ಬಸ್ ಇಳಿದು ನೇರಾನೇರ ನನ್ನ ಎದುರಿಗೇ ಬರುತ್ತಿದ್ದಳು ಅವಳು ಸಮೀಪಿಸಿದಾಗ ಹೃದಯ ಡಬ ಡಬ ಎಂದು ಬಡಿದುಕೊಳ್ಳುತ್ತಿತ್ತು. ಅವಳು ಬಂದವಳೇ “ರಾಸಾಯನ ಶಾಸ್ತ್ರ ವಿಭಾಗ ಎಲ್ಲಿದೆ?’ ಎಂದು ಕೇಳಿದಳು. ನಾನೇ ಹೊಸಬ, ನನ್ನನ್ನೇ ವಿಳಾಸ ಕೇಳುತ್ತಿದ್ದಾಳಲ್ಲ. ಇವಳು ಯಾರೋ ಹೊಸಬಳು ಇರಬೇಕು ಎಂದು ಮನಸಿನಲ್ಲೇ ಅಂದುಕೊಂಡು ಗೊತ್ತಿಲ್ಲಾ ಎಂದು ಉತ್ತರಿಸಿದೆ. ನಂತರ ಅವಳು ಅಲ್ಲಿಂದ ಎಲ್ಲಿ ಮಾಯವಾದಳ್ಳೋ ಗೊತ್ತಾಗಲಿಲ್ಲ.
ನಾನು ನನ್ನ ಪಾಡಿಗೆ ಕ್ಲಾಸ್‌ರೂಂ ಹುಡುಕಿಕೊಂಡು ಹೋದೆ ರಾಸಾಯನಿಕ ಶಾಸ್ತ್ರ ವಿಭಾಗದ ಬಲ ಬದಿಯ ಕೋಣೆಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಲೆಕ್ಚರರ್ ಹೇಳಿದಾಗ ಕ್ಲಾಸಿನಲ್ಲಿ ಹೋಗಿ ಕುಳಿತುಕೊಂಡೆ. ಕ್ಲಾಸ್ ತುಂಬಾ ಹುಡುಗಿಯರ ದರ್ಬಾರು. ಹುಡುಗರ ಸಂಖ್ಯೆ ಮಾತ್ರ ಬರಿ ಏಂಟು. ನಾನು ಕೊನೆಯ ಬೆಂಚ್‌ನಲ್ಲಿ ಕುಳಿತುಕೊಂಡಿದ್ದೆ. ಮತ್ತೆ ಮಲ್ಲಿಗೆಯ ಸುವಾಸನೆ ಮೂಗಿಗೆ ತಾಕುತ್ತಿತ್ತು. ಅರೇ..! ಆ ಪಿಂಕ್ ಚೂಡಿದಾರ್ ಹುಡುಗಿಯೇ ಇರಬೇಕು ಎಂದುಕೊಳ್ಳುತ್ತಿರುವಾಗಲೇ ಅವಳೇ ಪ್ರತ್ಯಕ್ಷವಾಗಿಬಿಟ್ಟಳು. ಬಂದು ನನ್ನ ಪಕ್ಕದ ಬೆಂಚಿನಲ್ಲಿ ಕುಳಿತೇ ಬಿಟ್ಟಳು! ಹೃದಯದಲ್ಲಿ ಯಾರೋ ಕುಚಗುಳಿ ಇಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಅವಳು ಓರೆ ಕಣ್ಣಿನಿಂದ ನನ್ನನ್ನು ನೋಡಿ “ನೀವಾ?’ ಎಂದಳು “ನಾನೇ ಅವನು’ ಅಂದೆ.
ಅಲ್ಲಿಂದಲೇ ಶುರುವಾಯಿತು ನಮ್ಮ ಸ್ನೇಹದ ಪಯಣ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಕ್ಲೋಸ್ ಆದೆವು, ಕಾಲೇಜಿನ ಕಾರಿಡಾರಿನಲ್ಲಿ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಬೈ ಟೂ ಕಾಫಿ ಹೀರುತ್ತಿದ್ದೆವು. ಎಲ್ಲ ನೆನಪುಗಳನ್ನು ಇನ್ನೂ ಈ ಪುಟ್ಟ ಹೃದಯದಲ್ಲಿ ಬಚ್ಚಿಟ್ಟಿದ್ದೇನೆ. ಈ ಮಧ್ಯೆ ನನಗೆ ತಿಳಿಯದೆ ನಾನು ಅವಳನ್ನು ಇಷ್ಟ ಪಡಲು ಶುರು ಮಾಡಿದ್ದೇನೆ. ಅವಳು ಕೂಡಾ ನನ್ನನ್ನು ಇಷ್ಟಪಡುತ್ತಿದ್ದಾಳೆ ಎಂದು ನನ್ನ ಒಳಮನಸ್ಸು ಹೇಳುತ್ತಿದೆ. ಆದರೂ ಎಲ್ಲಿ ನನ್ನ ಪ್ರೀತಿಯನ್ನು ನಿರಾಕರಿಸುತ್ತಾಳ್ಳೋ ಎಂಬ ಭಯದಿಂದ ಅವಳಿಗೆ ಏನೂ ಹೇಳದೆ ಸುಮ್ಮನಿದ್ದೇನೆ. ಈ ಪ್ರೀತಿಗೆ ಏನೆಂದು ಹೆಸರಿಡಲಿ?
-ಆರೀಫ್ ವಾಲೀಕಾರ, ಬೆಳಗಾವಿ