Advertisement
ಇದಕ್ಕೆ ಇಪಿಎಫ್ ಆಕ್ಟ್ 1952 ಎನ್ನುವ ಪ್ರತ್ಯೇಕ ಶಾಸನವಿದೆ. ಇದರನ್ವಯ ಸರಕಾರವು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಎಂಬ ನಿಧಿಯನ್ನು ನೌಕರ ವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರಿಗೆ ಸಮಾನವಾಗಿ ಅನ್ವಯಿಸುವ ಸೌಲಭ್ಯ. ಇದು ನಿಮ್ಮ ಕಂಪೆನಿಯೊಳಗೆ ಸಂಬಳದಿಂದ ಕಡಿತಗೊಂಡು ವೃದ್ಧಿಯಾಗುವ ಫಂಡ್. ಹೊರಗೆ ಸ್ಟೇಟ್ ಬ್ಯಾಂಕ್/ ಪೋಸ್ಟ್ ಆಫೀಸ್ ನಲ್ಲಿ ಸಾರ್ವಜನಿಕರಿಗಾಗಿ ದೊರೆಯುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ಗಿಂತ ಭಿನ್ನ.
ಒಂದು ಸಂಸ್ಥೆಯಲ್ಲಿ ಪಿಎಫ್ ಕಡಿತ ಮಾಡಬೇಕಾದರೆ 20ಕ್ಕೂ ಹೆಚ್ಚು ಉದ್ಯೋಗಿಗಳು ಇರಬೇಕಾದದ್ದು ಕಡ್ಡಾಯ. ಅದಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್ ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ, ಮಾಸಿಕ ಸಂಬಳ 15,000 (ಬೇಸಿಕ್+ಡಿ.ಎ.) ರೂ. ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡ ಈ ಸ್ಕೀ ಮ್ ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮ್ ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿದ್ದಾಗಿರುತ್ತವೆ. ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎಲ್ಲ ಉದ್ಯೋಗಿಗಳಿಗೂ ಪಿಎಫ್ ಕಡಿತವನ್ನು ಐಚ್ಛಿಕವಾಗಿಯಾದರೂ ಮಾಡುತ್ತಿವೆ. ಇದು ಏಕೆಂದರೆ, ಪ್ರಾವಿಡೆಂಟ್ ಫಂಡ್ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಪಿಎಫ್ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ.
Related Articles
Advertisement
ವೇತನದ (ಬೇಸಿಕ್ ಮತ್ತು ಡಿಎ) ಶೇ. 12ರಷ್ಟ ನ್ನು ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ ‘ಅಕೌಂಟ್ ಎ’ ಅಡಿಯಲ್ಲಿ ಸಂಪೂರ್ಣವಾಗಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡ ಪ್ರತ್ಯೇಕವಾಗಿ ಇನ್ನೊಂದು ಶೇ. 12 ಕಡಿತಗೊಳಿಸಿ ‘ಅಕೌಂಟ್ ಬಿ’ ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ.
ಹಾಗಾಗಿ ಒಟ್ಟು ಜಮೆ ಶೇ. 24. ನಿಜ ಹೇಳಬೇಕಾದರೆ, ನಾವು ಶೇ. 24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಶೇ. 24ರಷ್ಟು ಸಂಪೂರ್ಣವಾಗಿ ಜಮೆಯಾಗುವುದಿಲ್ಲ. ನಿಮ್ಮ ಶೇ. 12ರಷ್ಟು ಸಂಪೂರ್ಣವಾಗಿ ಪಿಎಫ್ ಖಾತೆಗೆ ಜಮೆಯಾದರೂ ಕೂಡ ಉದ್ಯೋಗದಾತರ ಶೇ. 12ರಲ್ಲಿ ಎರಡು ಭಾಗಗಳಿವೆ. ಮೊತ್ತಮೊದಲನೆಯ ಭಾಗ ಸಂಬಳದ ಶೇ. 8.33 (ಗರಿಷ್ಠ, ಸಂಬಳ ರೂ 15,000 ಮಿತಿಯೊಳಗೆ ಅಂದರೆ, ಗರಿಷ್ಠ ದೇಣಿಗೆ ರೂ. 1,250) ಇಪಿಎಫ್ಒ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್‌ನ ಉಪಖಾತೆಗೆ ಹೋಗುತ್ತದೆ. ಎಂಪ್ಲಾಯ್ ಪೆನ್ಶನ್ ಸ್ಕೀಮ್ ಅಥವಾ ‘ಇಪಿಎಸ್’ ಎನ್ನುವ ಈ ಸ್ಕೀಮ್ ನಿವೃತ್ತಿಯ ಬಳಿಕ ಸಿಗುವ ಪೆನ್ಶನ್ ಗಾಗಿ ಮೀಸಲಾಗಿದೆ. ಹಾಗಾಗಿ ಇಪಿಎಫ್ನಲ್ಲಿ ಪೆನ್ಶನ್ ದೇಣಿಗೆಯಾದ ಶೇ. 8.33 ಅಥವಾ ಗರಿಷ್ಠ ರೂ. 1,250 ಕಳೆದು ಉಳಿದ ಮೊತ್ತ ಅಂದರೆ ಶೇ.3.67 (ಗರಿಷ್ಠ ಸಂಬಳ ರೂ. 15,000 ಮಿತಿಯೊಳಗೆ ಅಂದರೆ ಗರಿಷ್ಠ ದೇಣಿಗೆ ರೂ. 550) ಮಾತ್ರ ಪಿಎಫ್ನ ‘ಅಕೌಂಟ್ ಬಿ’ ಗೆ ಜಮೆಯಾಗುತ್ತದೆ.