Advertisement
ಎಚ್.ಡಿ.ಕುಮಾರಸ್ವಾಮಿಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭಭಿ ಕುಮಾರಸ್ವಾಮಿಗೆ ಬೃಹತ್ ಕೈಗಾರಿಕೆ ಖಾತೆ ದೊರಕಿರುವುದು ಸಹಜವಾಗಿಯೇ ರಾಜ್ಯದ ಉದ್ಯಮ ಕ್ಷೇತ್ರದ ಕನಸುಗಳು ಗರಿಗೆದರಿವೆ. ರಾಜ್ಯಕ್ಕೆ ಬೃಹತ್ ಉದ್ಯಮವನ್ನು ಹಾಗೂ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಬಹುದು. ಅಲ್ಲದೆ ನೆರೆ ರಾಜ್ಯಗಳಿಗೆ ಉದ್ಯಮಪತಿಗಳ ವಲಸೆ ತಡೆಗೆ ಇದರಿಂದ ಬ್ರೇಕ್ ಬೀಳಬಹುದು ಎಂಬ ನಿರೀಕ್ಷೆ ಇದೆ. ಜತೆಗೆ ಉಕ್ಕು ಖಾತೆಯನ್ನೂ ಹೊಂದಿರುವುದರಿಂದ ರಾಜ್ಯದ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಃಶ್ಚೇತನದ ಆಸೆ ಮತ್ತೆ ಚಿಗುರೊಡೆದಿದೆ. ಎಂಪಿಎಂ ಕಾರ್ಖಾನೆ ಮತ್ತು ಎನ್‌ಜಿಇಎಫ್ ಕಾರ್ಖಾನೆಗಳೂ ಸಹ ಮರುಜೀವ ಪಡೆದುಕೊಳ್ಳುವ ಆಸೆ ಚಿಗುರೊಡೆದಿದೆ.
ಆಹಾರ ಮತ್ತು ಗ್ರಾಹಕ ವ್ಯವಹಾರ ಹಾಗೂ ಪುನಃಶ್ಚೇತನಗೊಳಿಸಬಹುದಾದ ಇಂಧನ ಸಚಿವ
ಹಿಂದಿನ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಪ್ರಹ್ಲಾದ್ ಜೋಷಿಗೆ ಈ ಬಾರಿ ಆಹಾರ ಮತ್ತು ನಾಗರಿಕ ವ್ಯವಹಾರ ಖಾತೆ ಲಭಿಸಿರುವುದರಿಂದ ಕರ್ನಾಟಕದ ಹಲವು ಸಮಸ್ಯೆಗಳು ಬಗೆಹರಿಯಬಹುದು ಎಂಬ ನಿರೀಕ್ಷೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಲಭಿಸುತ್ತಿಲ್ಲ ಎಂಬ ದೂರು ಕೇಳಬಂದಿದೆ. ಈ ಕುರಿತು ರಾಜ್ಯದ ಆಹಾರ ಖಾತೆ ಸಚಿವ ಮುನಿಯಪ್ಪ ಕೇಂದ್ರವನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಈಗ ರಾಜ್ಯದವರೇ ಆಹಾರ ಖಾತೆಯನ್ನು ವಹಿಸಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ರಾಜ್ಯಕ್ಕಿದೆ. ಹಾಗೆಯೇ, ಹಸುರು ಇಂಧನ ಕ್ಷೇತ್ರದಲ್ಲಿ ರಾಜ್ಯವನ್ನು ಮುಂಚೂಣಿಗೆ ತರುವ ನಿರೀಕ್ಷೆಯನ್ನು ಜೋಷಿ ಮೇಲೆ ರಾಜ್ಯದ ಜನ ಭರವಸೆ ಇಟ್ಟುಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ
ವಿತ್ತ ಸಚಿವರಾಗಿ ಅನುಭವ ಹೊಂದಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ಅದೇ ಖಾತೆ ಸಿಕ್ಕಿದ್ದು, ಕರ್ನಾಟಕದ ನಿರೀಕ್ಷೆ ಹೆಚ್ಚಾಗಿದೆ. ಈಚೆಗಷ್ಟೇ ಅನುದಾನ ಹಂಚಿಕೆ ಮತ್ತು ಜಿಎಸ್‌ಟಿ ಬಾಕಿ ಪರಿಹಾರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ರಾಜಕೀಯ ಮತ್ತು ಕಾನೂನು ಹೋರಾಟ ನಡೆದಿತ್ತು. ಇದೇ ವೇಳೆ ಮತ್ತೆ ನಿರ್ಮಲಾ ಅವರು ಸಚಿವರಾಗಿ ಮುಂದುವರಿಯುವುದರಿಂದ ರಾಜ್ಯಕ್ಕಾಗಿದೆ ಎನ್ನಲಾದ ಅನ್ಯಾಯದ ಭಾವನೆಯನ್ನು ನೀಗಿಸಲು ಸಚಿವರು ಪ್ರಯತ್ನಿಸಬಹುದು ಎಂಬ ನಿರೀಕ್ಷೆ ಇದೆ. ಹಾಗೆಯೇ, ರಾಜ್ಯದ ಪ್ರಮುಖ ಯೋಜನೆಗಳಿಗೆ ಹಣಕಾಸು ಇಲಾಖೆ ಸಕಾಲದಲ್ಲಿ ಒಪ್ಪಿಗೆ ನೀಡಬಹುದು ಎಂಬ ನಿರೀಕ್ಷೆ ಇದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ನಿರ್ಮಲಾ ಅವರಿಂದ ಪರಿಹಾರ ದೊರಕಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಅವಧಿಯಲ್ಲಾದರೂ ಉಭಯ ಸರಕಾರಗಳ ನಡುವಿನ ಗೊಂದಲ ಬಗೆಹರಿಯಲಿ ಎಂಬುದು ಜನರ ಆಶಯ.
Related Articles
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವೆ
ಹಿಂದೆ ಕೃಷಿ ಖಾತೆ ಸಹಾಯಕ ಸಚಿವರಾಗಿದ್ದ ಶೋಭಾ ಈ ಸಲ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು, ಇಲ್ಲಿನ ಸಣ್ಣ ಕೈಗಾರಿಕೆ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಹೊಂದಿದವರು. ಹೀಗಾಗಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸವಾಲಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆ ರಾಜ್ಯದ್ದು. ರಾಜ್ಯವನ್ನು ಸಣ್ಣ ಕೈಗಾರಿಕೆಗಳ ಹಬ್ ಆಗಿ ಬೆಳೆಸುವ ಸವಾಲು ಅವರ ಮುಂದಿದೆ. ಜತೆಗೆ. ಮಹಿಳಾ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಬಹುದು ಎಂಬ ನಿರೀಕ್ಷೆ ಇದೆ.
Advertisement
ವಿ.ಸೋಮಣ್ಣಜಲಶಕ್ತಿ ಹಾಗೂ ರೈಲ್ವೆ ಸಹಾಯಕ ಸಚಿವ
ಕೇಂದ್ರದಲ್ಲಿ ಮೊದಲ ಬಾರಿಗೆ ಸಚಿವರಾಗಿರುವ ಸೋಮಣ್ಣಗೆ ಎರಡು ಪ್ರಮುಖ ಖಾತೆಗಳು ಲಭಿಸಿವೆ. ಎರಡೂ ಖಾತೆಗಳಿಂದಲೂ ರಾಜ್ಯದ ನಿರೀಕ್ಷೆ ದೊಡ್ಡದಿದೆ. ಮೇಕೆದಾಟು ಯೋಜನೆ ಇನ್ನೂ ಡಿಪಿಆರ್ ಹಂತದಲ್ಲೇ ಇರುವುದರಿಂದ ಅದಕ್ಕೆ ಕೇಂದ್ರದ ಅನುಮೋದನೆ ಪಡೆಯುವಲ್ಲಿ ಸೋಮಣ್ಣ ಪಾತ್ರ ವಹಿಸಬಹುದು ಎಂಬ ನಿರೀಕ್ಷೆ ಇದೆ. ಜತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಕುರಿತು ಹಿಂದಿನ ಬೊಮ್ಮಾಯಿ ಸರಕಾರ ಕೇಂದ್ರಕ್ಕೆ ಮಾಡಿದ್ದ ಮನವಿಯನ್ನು ಜಾರಿಗೊಳಿಸಬಹುದು ಎಂಬ ನಿರೀಕ್ಷೆ ಇದೆ. ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕಕ್ಕೆ ಬೆಸೆಯುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ತ್ವರಿತ ಸಾಕಾರದ ಕನಸು ಮತ್ತೂಮ್ಮೆ ಚಿಗುರೊಡೆದಿದೆ. ರಾಜ್ಯದ ಬಹು ವರ್ಷಗಳ ಬೇಡಿಕೆಯಾದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ವೇಗ ದೊರೆಯಬಹುದು ಎಂಬ ನಿರೀಕ್ಷೆ ಇದೆ.