Advertisement

ತಿನ್ನುವ ಸ್ಪರ್ಧೆಗಳ ಅಗತ್ಯವೇನಿದೆ?

12:30 AM Sep 23, 2018 | |

ತಿನ್ನುವ ಮೇಲಾಟಗಳು ವಿಶ್ವದೆಲ್ಲೆಡೆ ಏರ್ಪಡುತ್ತಿರುತ್ತವೆ. ಕೆಲವೆಡೆ ಪೈಪೋಟಿಯಲ್ಲಿ ನೂಡಲ್ಸ್‌, ಚಾಕೊಲೆಟ್‌, ಪಿಜ್ಜಾ, ಪಾಸ್ತಾ ಮಾತ್ರವಲ್ಲದೆ ಮೆಣಸಿನ ಕಾಯಿ, ಮೆಣಸು, ಕಲ್ಲಂಗಡಿ ಇತ್ಯಾದಿ ಭಕ್ಷಿಸುವುದಿದೆ. ಭಾರತವೇನೂ ಇದಕ್ಕೆ ಹೊರತಲ್ಲ. ಕರ್ನಾಟಕದಲ್ಲಿ ರಾಗಿ ಮುದ್ದೆ, ಲಡ್ಡು, ದೋಸೆ, ಜೋಳದ ರೊಟ್ಟಿ, ಹೋಳಿಗೆ ತಿನ್ನುವ ಸ್ಪರ್ಧೆಗಳು ಅಲ್ಲಲ್ಲಿ ವ್ಯವಸ್ಥಿತವಾಗಿ ನಡೆಯುತ್ತವೆ. ಸ್ಪರ್ಧಾಳು 3 ಕಿಲೋ ಗ್ರಾಂ ರಾಗಿಮುದ್ದೆ ನುಂಗಿಯೋ, 60 ಇಡ್ಲಿ ತಿಂದೋ ಅಥವಾ 40 ಜಿಲೇಬಿ ಸೇವಿಸಿಯೋ ಗಮನ ಸೆಳೆಯುತ್ತಾರೆ. ಪ್ರಶಸ್ತಿಗೆ, ಬಹುಮಾನಕ್ಕೆ ಪಾತ್ರರಾಗುತ್ತಾರೆ. ಅವರಿಗಾದ ಸನ್ಮಾನ, ಸತ್ಕಾರಗಳು ವರದಿಯಾಗುತ್ತಿರುತ್ತವೆ. 

Advertisement

ಮುದ್ದೆ ಪರಾಕ್ರಮಿ, ಹೋಳಿಗೆ ವೀರ, ಜಾಮೂನು ಶೂರ ಮುಂತಾಗಿ ಬಿರುದುಗಳೂ ವಿಜಯಿಗಳಿಗೆ ಪ್ರದಾನವಾಗುತ್ತವೆಯೆನ್ನಿ. ತ್ವರಿತವಾಗಿ ಹೆಚ್ಚು ತಿಂಡಿ, ತಿನಿಸು ಭಕ್ಷಣೆಯೇ ಪ್ರತಿಭೆ, ಸಾಧನೆ ಎನ್ನುವಂತೆ ಪರಿಗಣನೆ! ತಿಂದು ತೇಗಿದರೆ ಬೆನ್ನು ತಟ್ಟುವ ಇಂಥ ಪೈಪೋಟಿಗಳು ಯಾವ ಸಂದೇಶ ಸಾರುತ್ತವೆ? ಇದೇನು ಆಟೋಟವೇ? ವ್ಯಾಯಾಮವೇ? ಸಂಕೀರ್ಣ ವಾದ ಜೀರ್ಣಾಂಗಗಳನ್ನು ಕೈಯಾರೆ ಹಿಂಸೆಗೊಳಪಡಿಸಿ ಬಹುಮಾನ ಗಳಿಸಬೇಕೇ? 

ಕೆಲ ತಿಂಗಳ ಹಿಂದೆ ತಮಿಳುನಾಡಿನ ಪುದುಕೋಟ್ಟೆç ಯಲ್ಲಿ ಇಡ್ಲಿ ತಿನ್ನುವ ಸ್ಪರ್ಧಾಳುವೊಬ್ಬ ಗಂಟಲಿನಲ್ಲಿ ಇಡ್ಲಿ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಮೃತ್ಯುವಶನಾದ. ವಿಶ್ವದ ಒಟ್ಟು ಜನಸಂಖ್ಯೆಯ ಎಂಟನೆಯ ಒಂದು ಪಾಲು ಹಸಿವಿನಿಂದ ತತ್ತರಿಸಿದೆ. ಅಮೆರಿಕದಲ್ಲೇ ನಾಲ್ಕರಲ್ಲಿ ಒಂದು ಮಗುವಿಗೆ ಆಹಾರದ ಕೊರತೆ ಯಿದೆ. ಪ್ರತಿ ಹತ್ತು ಸೆಕೆಂಡಿಗೆ ಜಗತ್ತಿನಲ್ಲಿ ಸರಾಸರಿ ಒಬ್ಬರು ಹಸಿವಿನಿಂದ ಅಸು ನೀಗುತ್ತಾರೆ. ಜಗತ್ತಿನಲ್ಲಿ ಎಂಥ ಹಸಿವುಳ್ಳ ಜನರಿದ್ದಾರೆಂದರೆ ದೇವರು ಅನ್ನದ ಹೊರತಾಗಿ ಬೇರ್ಯಾವುದೇ ರೂಪದಲ್ಲಿ ಅವರಿಗೆ ಕಾಣಿಸಿಕೊಳ್ಳಲಾರ ಎಂದರು ಮಹಾತ್ಮ ಗಾಂಧೀಜಿ. ಬಡವನ‌ ತಟ್ಟೆಯಲ್ಲಿರುವ ಹಣ್ಣಿಗಿಂತಲೂ ಶ್ರೀಮಂತನ ಶಾಂಪುವಿನಲ್ಲಿನ ಹಣ್ಣು ಹೆಚ್ಚು!

“ಒಂದು ಭೂರಿ ಭೋಜನ ಸೇವನೆ ಅಥವಾ ಒಂದು ಮಗು ಹಸಿವಿನಿಂದ ಮಲಗುವುದನ್ನು ತಪ್ಪಿಸುವುದು- ಆಯ್ಕೆ ನಿಮ್ಮದು’ ಎನ್ನುವುದು ನ್ಯೂಯಾರ್ಕಿನಲ್ಲಿ ತನ್ನ ಕೇಂದ್ರ ಕಚೇರಿಯುಳ್ಳ “ವಿಶ್ವ ಆಹಾರ ಕಾರ್ಯಕ್ರಮ’ದ ಧ್ಯೇಯವಾಕ್ಯ. 1961ರಲ್ಲಿ ಡಬ್ಲ್ಯು. ಎಫ್. ಪಿ. ಸ್ಥಾಪನೆಯಾಯಿತು. ಸಿರಿವಂತ ದೇಶವೆನ್ನಲಾಗಿರುವ ಅಮೆರಿಕದಿಂದಲೇ ಹಸಿವು ಮುಕ್ತ ಜಗತ್ತಿನ ಪರಿಕಲ್ಪನೆ ಹೊರಟಿದ್ದು ಎನ್ನುವುದು ಮುಖ್ಯವಾಗುತ್ತದೆ. ಈ ಸಂಸ್ಥೆಗೆ ಯಾರು ಬೇಕಾದರೂ ವಂತಿಗೆ ಸಲ್ಲಿಸಬಹುದು. ಯಾವುದೇ ದೇಶವು ಸಮರ, ಆಂತರಿಕ ಅಶಾಂತಿ, ನೈಸರ್ಗಿಕ ವಿಕೋಪ
ದಿಂದ ಆಹಾರದ ಅಭಾವ ಎದುರಿಸಿದರೆ ಸಂಸ್ಥೆ ನೆರವಾಗುತ್ತದೆ. 

ಹಸಿವು ನಿವಾರಣೆ ಎನ್ನುವುದು ದಾನ, ದತ್ತಿಯ ವಿಷಯವಲ್ಲ, ಅದು ಮನುಷ್ಯನಿಗೆ ಸಲ್ಲಲೇಬೇಕಾದ ನ್ಯಾಯ. ಹಸಿವು ಎಷ್ಟು ಕ್ರೂರ ಎನ್ನುವುದನ್ನು ಡಾ.ಗೊರೂರರು ಮನಮುಟ್ಟವಂತೆ ತಮ್ಮ ಹಳ್ಳಿಯ ಚಿತ್ರಗಳಲ್ಲಿ ಸಾದರಪಡಿಸಿದ್ದಾರೆ. ನಮ್ಮ ಜನಪದರಲ್ಲಿ ಮನೆಗೆ ಬರುವವರಿಗೆ ಸಾಂಕೇತಿಕವಾಗಿ ಬೆಲ್ಲ, ಕೊಬ್ಬರಿ ಇಲ್ಲವೇ ಕಬ್ಬಿನ ತುಂಡನ್ನೋ, ಪಾನಕವನ್ನೋ ನೀಡುವ ರೂಢಿ ಇಂದಿಗೂ ಉಂಟು. ಒಂದೊತ್ತುಣ್ಣುವವ ಯೋಗಿ, ಎರಡೊತ್ತುಂಡರೆ ಭೋಗಿ, ಮೂರೊತ್ತುಂಡರೆ ರೋಗಿ, ನಾಲ್ಕು ಹೊತ್ತುಣ್ಣವವನ ಹೊತ್ತುಕೊಂಡು ಹೋಗಿ ಎಂಬ ಗಾದೆ ಅರ್ಥಪೂರ್ಣ.

Advertisement

ಭಾರತೀಯ ಪರಂಪರೆಯಲ್ಲಿ ಅನ್ನವನ್ನು ಬ್ರಹ್ಮ ಎಂದು ಭಾವಿಸಲಾಗುತ್ತದೆ. ಅನ್ನದಿಂದಲೇ ಉತ್ಸಾಹ, ಹುರುಪು, ಬದುಕೆನ್ನುವ ಸಾರ ಈ ಉಪಮೆಯಲ್ಲಿ ಸಾಂದ್ರಗೊಂಡಿದೆ. ಅನ್ನದಾನವೇ ಅತಿ ಶ್ರೇಷ್ಠತಮ ದಾನವೆಂಬ ಅರಿವಾಗುವುದು ಹಸಿದಾಗಲೇ. ಹಾಗೆ ನೋಡಿದರೆ ಮೃಷ್ಟಾನ್ನ ಭೋಜನ ಪ್ರಾರಂಭ ಆಗುವುದು ಹಸಿವಿನಿಂದಲೇ! “ಉಂಡವ ಬಡಿಸಬಾರದು, ಕೊನೇ ಪಂಕ್ತೀಲಿ ಊಟಕ್ಕೆ ಕೂರಬಾರ್ದು’. ಆಡುಮಾತು.  

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರತಿಯೊಬ್ಬರಿಗೂ ಲಭ್ಯವಾಗುವ ಊಟಕ್ಕೆ 1.25 ಡಾಲರಿಗೂ ಕಡಿಮೆ ಕಿಮ್ಮತ್ತು ಕಟ್ಟಬಹುದು. ಇಷ್ಟೆಲ್ಲ ಹಿನ್ನೆಲೆಯಲ್ಲಿ ಭಕ್ಷಣಾ ಸ್ಫರ್ಧೆಗಳು ಎಷ್ಟು ಸಮಂಜಸ ಎನ್ನುವುದನ್ನು ಅವಲೋಕಿಸಬೇಕು. ನಿಜವೇ, ಇಡೀ ಜಗತ್ತು ಉದರದ ಅಧೀನ. ಎಲ್ಲರೂ ಮಾಡುವುದು ಹೊಟ್ಟೆಗಾಗಿಯೇ. ಹಾಗೆಂದು ತಿಂಡಿ, ತಿನಿಸುಗಳನ್ನು ಎಗ್ಗಿಲ್ಲದೆ ಸೇವಿಸಲಾಗದು. ನಮ್ಮ ತುತ್ತಿನ ಚೀಲ ಹಿಗ್ಗಲು ಪ್ರಕೃತಿಯೇ ಇತಿಮಿತಿ ನಿಯೋಜಿಸಿದೆ. “ಅತಿ ಸರ್ವತ್ರ ವರ್ಜಯೇತ್‌’- ಅತಿಯಾಗಿ ಯಾವುದರ ಸೇವನೆಯೂ ಶಕ್ಯವಲ್ಲ. ವೈದ್ಯ ವಿಜ್ಞಾನ “ಲೆಸ್‌ ಈಟನ್‌ ಇಸ್‌ ಮೋರ್‌ ಈಟನ್‌’ (ಕಡಿಮೆ ತಿಂದರೆ ಹೆಚ್ಚು ತಿಂದಂತೆ) ಎಂದು ಮಿತಾಹಾರದ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. “ಲಂಗ‌ನಮ್‌ ಪರಮೌ‚ಷಧಮ್‌’ ಎನ್ನುವುದು ಆರ್ಯುವೇದ ಆರೋಗ್ಯ ಸೂತ್ರ. 

ನಿಯಮಿತ ಉಪವಾಸ ಆಚರಣೆಯನ್ನು ಎಲ್ಲ ಧರ್ಮಗಳೂ ಮನಗಂಡಿವೆ, ಮಾನ್ಯ ಮಾಡಿವೆ. ಜೀರ್ಣಾಂಗಗಳಿಗೂ ವಿರಾಮ, ಎಲ್ಲೋ ಒಂದೆಡೆ ಪರೋಕ್ಷವಾಗಿ ಒಂದು ಹಸಿದ ಉದರಕ್ಕೆ ಊಟದ ಲಭ್ಯತೆ-ಇವೆರಡರ ಈಡೇರಿಕೆ. 35,000 ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದೆ. ಪಯಣಿಗನೊಬ್ಬ ವಿಶೇಷ ಊಟ ಬೇಕೆನ್ನುತ್ತಾನೆ. ಆತನಿಗೆ ಅಂತು ಅದು ಸರಬರಾಜಾಗುತ್ತದೆ, ಆ ಮಾತು ಬೇರೆ. ಆದರೆ ಇಲ್ಲೊಂದು ಷರಾ. ಅಷ್ಟೊಂದು ಎತ್ತರದಲ್ಲಾದರೂ ಆತ ತನ್ನ ಹೊಟ್ಟೆಯ ದರ್ಬಾರಿಗೆ ಕಿವಿ ಹಿಂಡಬಹುದಿತ್ತು. ಸಿಬ್ಬಂದಿ ಪಡುವ ತ್ರಾಸ ಗ್ರಹಿಸಬಹುದಿತ್ತು.

ಮೆಚ್ಚುಗೆಯ ಅಂಶವೆಂದರೆ ನ್ಯೂಯಾರ್ಕಿನ “ಮೇಜರ್‌ ಲೀಗ್‌ ಈಟಿಂಗ್‌’ ಸಂಸ್ಥೆ ಜಗತ್ತಿನಲ್ಲಿ ಎಲ್ಲಿಯೇ ತಿನ್ನುವ ಸ್ಪರ್ಧೆಗಳು ಏರ್ಪಾಟಾದರೂ ಭಾಗಿಯಾಗುವವರ ಭದ್ರತೆ ಬಗ್ಗೆ ಕಾಳಜಿ ವಹಿಸುತ್ತದೆ. ನುರಿತ ವೈದ್ಯಕೀಯ ತಂತ್ರಜ್ಞರ ಸಾನ್ನಿಧ್ಯವಿಲ್ಲದೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದೆಂದು ಅದು ವ್ಯವಸ್ಥಾಪಕರಿಗೆ ತಿಳಿಹೇಳುತ್ತದೆ. ಪೈಪೋಟಿ ನಡೆದ ವಿವರಗಳನ್ನು ಕಲೆಹಾಕುತ್ತದೆ. ಹದಿನೆಂಟು ವರ್ಷ ದೊಳಗಿನವರು ವೇಗವಾಗಿ ಆಹಾರ ಸೇವಿಸುವುದರ ದುಷ್ಪರಿಣಾಮಗಳನ್ನು ಸಂಸ್ಥೆ ಒತ್ತಿ ಹೇಳುತ್ತದೆ. ಪ್ರಸ್ತುತ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬರಗಾಲವಿದೆ. ಮಳೆಗಾಗಿ ಮುಗಿಲು ದಿಟ್ಟಿಸುವ ಕಳಾಹೀನ ಕಣ್ಣುಗಳು. ಇಂತಾದರೂ ಹನಿ ಸುರಿದೀತೇನೋ ಎಂದು ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಚಿತ್ರ ವಿಚಿತ್ರ ಆಚರಣೆಗಳು, ವಿಧಿಗಳಿಗೆ ಮೊರೆಹೋಗು ವುದಿದೆ. ನೀರಿನಲ್ಲಿ ದಿನವಿಡೀ ನಿಲ್ಲುವುದು, ಕಪ್ಪೆಗಳ ಮದುವೆ, ಕತ್ತೆಗಳ ದಿಬ್ಬಣ, ಬಾಲಕರ ನಗ್ನ ಮೆರವಣಿಗೆ, ಮೃತ ಪ್ರಾಣಿಗಳ ಶವಗಳನ್ನು ಮರಕ್ಕೆ ನೇತು ಹಾಕುವುದು…ಒಂದೇ? ಎರಡೇ? 

ಇನ್ನೊಂದೆಡೆ ಕೃತಕ ಮಳೆಗೆ ಪ್ರಯತ್ನಿಸುವುದೂ ಇದೆಯೆನ್ನಿ. ಅತಿವೃಷ್ಟಿ/ಅನಾವೃಷ್ಟಿಯ ನಡುವೆ ಕೈಗೆ ಬರುತ್ತದೆ ಅಷ್ಟು ಫ‌ಸಲು.  ಸಂಗ್ರಹಣೆಗೆ ಅಗತ್ಯ ವ್ಯವಸ್ಥೆಯ ಕೊರತೆಯಿಂದಾಗಿ ಒಂದಷ್ಟು ವ್ಯರ್ಥ ವಾಗುವುದೂ ಉಂಟು. ಹಸಿವು ನೀಗಿಸುವ ಪ್ರತ್ಯಕ್ಷ ದೇವರಾದ ಆಹಾರಕ್ಕೆ ಸಾಟಿಯಿಲ್ಲ, ಇರುವುದನ್ನು ಸಂಜೀವಿನಿಯಂತೆ ಬಳಸಬೇಕು. ಎಂದಮೇಲೆ ಪಂದ್ಯೋಪಾದಿಯಲ್ಲಿ ಆಹಾರ ಭಕ್ಷಣೆಯನ್ನು ವೈಭವೀಕರಿಸುವುದು ಔಚಿತ್ಯವಲ್ಲ. ಅದನ್ನು ಕ್ರೀಡೆ, ವಿನೋದಗಳ ಸಾಲಿಗೆ ಸೇರಿಸಿ ಚೆಲ್ಲಾಟ, ಮೇಲಾಟಕ್ಕೆ ಅನುಮೋದಿಸುವುದು ಸಮರ್ಥನೀಯವಲ್ಲ.

ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next