ಹೈದರಾಬಾದ್: ತೆಲಂಗಾಣ ಸರ್ಕಾರವು (Telangana Govt) ಆಹಾರ ಸುರಕ್ಷತೆಯ ಕಾರಣದಿಂದ ಹಸಿ ಮೊಟ್ಟೆ ಆಧಾರಿತ ಮೇಯನೀಸನ್ನು (mayonnaise) ನಿಷೇಧಿಸಿ ಬುಧವಾರ (ಅ.30) ಆದೇಶಿಸಿದೆ. ರಾಜ್ಯದಲ್ಲಿ ಮೇಯನೀಸ್‌ಗೆ ಸಂಬಂಧಿಸಿದ ಆಹಾರ ವಿಷಪೂರಿತವಾದ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ನಂತರ ಈ ನಿರ್ಧಾರ ಮಾಡಲಾಗಿದೆ.
ಹೈದರಾಬಾದ್ ನಲ್ಲಿ ಮೊಮೊಸ್ ಸೇವನೆಯಿಂದ ಒಬ್ಬರು ಮೃತಪಟ್ಟು 15 ಮಂದಿ ಅಸ್ವಸ್ಥರಾದ ಒಂದು ದಿನದ ನಂತರ ಈ ಆದೇಶ ಹೊರಡಿಸಲಾಗಿದೆ.
ನಿಷೇಧವು ಬುಧವಾರದಿಂದ ಜಾರಿಗೆ ಬಂದಿದೆ. ಒಂದು ವರ್ಷದವರೆಗೆ ನಿಷೇಧ ಮುಂದುವರಿಯುತ್ತದೆ, ಆಹಾರ ನೈರ್ಮಲ್ಯವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಪರ್ಯಾಯ ಮೇಯನೀಸ್ ಸಿದ್ಧತೆಗಳನ್ನು ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ ಇತ್ತೀಚಿನ ಹಲವಾರು ಮೊಟ್ಟೆ ಆಧಾರಿತ ಮೇಯನೀಸ್ ಗಳಲ್ಲಿ ಕಲಬೆರಕೆಯನ್ನು ಪತ್ತೆಹಚ್ಚಲಾಗಿದೆ, ಇದನ್ನು ಸ್ಯಾಂಡ್‌ವಿಚ್‌ಗಳು, ಮೊಮೊಸ್, ಶವರ್ಮಾ ಮತ್ತು ಅಲ್ ಫಹಾಮ್ ಚಿಕನ್ ಇತರ ಖಾದ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮೊಟ್ಟೆಯ ಹಳದಿಗಳನ್ನು ಎಣ್ಣೆಯೊಂದಿಗೆ ಎಮಲ್ಸಿಫೈಯಿಂಗ್ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ.
ತೆಲಂಗಾಣ ರಾಜ್ಯದಲ್ಲಿನ ಜಾರಿ ಚಟುವಟಿಕೆಗಳು ಮತ್ತು ಸಾರ್ವಜನಿಕರಿಂದ ಬಂದ ದೂರುಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಅನೇಕ ಘಟನೆಗಳಲ್ಲಿ ಹಸಿ ಮೊಟ್ಟೆಯಿಂದ ತಯಾರಿಸಿದ ಮೇಯನೀಸ್ ಆಹಾರ ವಿಷಕ್ಕೆ ಕಾರಣ ಎಂದು ಶಂಕಿಸಲಾಗಿದೆ ಎಂದು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.