Advertisement
ಹತ್ತಾರು ವರ್ಷಗಳ ಹಿಂದಿನ ಮಾತು. ಅಂದು ಸೂರ್ಯಗ್ರಹಣ. ಟಿ.ವಿಯಲ್ಲಿ ಈಗಿನಂತೆ ಜ್ಯೋತಿಷಿಗಳ ಅಬ್ಬರವೇನೂ ಇರಲಿಲ್ಲ. ಆದರೆ, ಗ್ರಹಣದ ದಿನದ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿದ್ದವು .ಮಧ್ಯಾಹ್ನ ಕೆಲವು ನಿಮಿಷಗಳವರೆಗೆ ಭಾಗಶಃ ಸೂರ್ಯ ಗ್ರಹಣವಿತ್ತು. ನಾನಾಗ ಐದೋ ಆರೋ ತಿಂಗಳ ಗರ್ಭಿಣಿ. ಅಣ್ಣ ಊರಿನಿಂದ ಬಂದಿದ್ದ. ಇಬ್ಬರೂ ಸೂರ್ಯಗ್ರಹಣ ನೋಡಲೆಂದು ಮನೆ ಮೇಲೆ ಹೋದೆವು. ಎಕ್ಸ್ ರೇ ಶೀಟ್‌ನಿಂದ ಸೂರ್ಯಗ್ರಹಣ ನೋಡಿ, ಮೆಟ್ಟಲಿಳಿದು ಬರುವಾಗ ರಸ್ತೆ ಕಡೆ ಗಮನ ಹರಿಸಿದೆ. ಒಬ್ಬರೂ ಕಾಣಿಸಲಿಲ್ಲ.
Related Articles
Advertisement
ಅಂಗವಿಕಲ, ಬುದ್ಧಿಮಾಂದ್ಯ ಮಗು ಹುಟ್ಟಿಬಿಟ್ಟರೆ, ನಾನು ಮಾಡಿದ ತಪ್ಪಿನಿಂದ (ಅದು ತಪ್ಪೇ?) ಮಗು ಕಷ್ಟ ಅನುಭವಿಸುವಂತಾದರೆ…ಎಂಬೆಲ್ಲ ಯೋಚನೆಗಳು ಜೊತೆಯಾಗಿದ್ದವು. ಮುಂದಿನ ಬಾರಿ ಚೆಕಪ್‌ಗೆ ಹೋದಾಗ “ಡಾಕ್ಟರ್, ಮಗು ಚೆನ್ನಾಗಿದೆಯಾ?’ ಅಂತ ಹೆದರಿ ಕೇಳಿದ್ದೆ. “ಫಸ್ಟ್ ಕ್ಲಾಸ್ ಆಗಿದೆ’ ಅಂತ ಅವರಂದರೂ, “ಗ್ರಹಣ ಪ್ರಭಾವ ಬೀರುತ್ತೆ’ ಅಂದ ನೆರೆಹೊರೆಯವರ ಮಾತೇ ಹೆಚ್ಚಾಗಿ ಕಾಡುತ್ತಿತ್ತು.
ದಸರೆಯ ಹಿಂದಿನ ದಿನ, ಡೆಲಿವರಿಗಾಗಿ ಆಸ್ಪತ್ರೆಗೆ ಹೋದೆವು. ಆಯುಧ ಪೂಜೆಯ ದಿನ ಆಸ್ಪತ್ರೆಯಲ್ಲಿ ಎಲ್ಲವನ್ನೂ ಅದೇ ತಾನೇ ಪೂಜೆ ಮಾಡಿ ಪ್ರಸಾದ ಹಂಚಿ ಸಂಭ್ರಮದಲ್ಲಿದ್ದರೆ, ನಾನು ಮಾತ್ರ ಹುಟ್ಟುವ ಮಗುವಿನ ಬಗ್ಗೆ ಚಿಂತಿತಳಾಗಿದ್ದೆ. ಕೊನೆಗೂ ರಾತ್ರಿ 1 ಗಂಟೆ ಹೊತ್ತಿಗೆ, ಆಸ್ಪತ್ರೆ ಹಾರಿ ಹೋಗುವಂತೆ ಅಳುತ್ತಾ ಮಗ ಹುಟ್ಟಿದ. ಮಂಪರಿನಿಂದ ಎಚ್ಚರವಾದಾಗ ನಾನು ಮೊದಲು ಕೇಳಿದ್ದು- “ಡಾಕ್ಟರ್ ಮಗು ಸರಿಯಾಗಿದೆಯಾ?’ “ಫಸ್ಟ್ ಕ್ಲಾಸ್ ಇದ್ದಾನೆ’ ಅವರದ್ದು ಅದೇ ಉತ್ತರ.
ಕಣ್ತೆರೆದು ಸ್ವಲ್ಪ ಹೊತ್ತಾದರೂ ನರ್ಸ್, ಮಗುವನ್ನು ನನಗೆ ತೋರಿಸಲೇ ಇಲ್ಲ. ಅಣ್ಣಂದಿರು, ಅತ್ತೆ, ಅಮ್ಮ, ನಮ್ಮ ಮನೆಯವರು ಮಾತನಾಡುವ, ನಗುವ ಸದ್ದು ಕೇಳಿದರೂ ಯಾಕೋ ಸಮಾಧಾನವಿಲ್ಲ. ನರ್ಸ್ ಬಂದಾಗ, “ಮಗುವಿನ ಕೈ-ಕಾಲು ಸರಿ ಇದೆಯಾ? ಎಂದು ಕೇಳಿದೆ. “ಹಾಂ, ಸರಿ ಇದೆ. ಯಾಕೆ, ಮೊದಲನೇ ಮಗುವಿನದ್ದು ಸರಿ ಇಲ್ವಾ? ಅಂತ ಕನಿಕರದಿಂದ ನೋಡಿದ್ದಳು.
ದಿನಗಳೆದಂತೆ ಮಗ ಸಹಜವಾಗಿ ಬೆಳೆಯುತ್ತಿದ್ದರೂ, ನನ್ನ ತಲೆಯಿಂದ, ಮಗುವಿನ ಮೇಲೆ ಗ್ರಹಣದ ಪ್ರಭಾವ ಅಂತ ಹೇಳಿದ್ದು ಮರೆಯಾಗಿರಲಿಲ್ಲ. ಮಗುವಿಗೆ ಸರಿಯಾಗಿ ಕಿವಿ ಕೇಳುತ್ತಾ, ಕಣ್ಣು ಕಾಣುತ್ತಾ, ಮಾತು ಬರುತ್ತಾ, ಬುದ್ಧಿ ಸರಿಯಾಗಿದೆಯಾ… ಅಂತ ಪರೀಕ್ಷಿಸುತ್ತಲೇ ವರ್ಷಗಳನ್ನು ಕಳೆದೆ. ಪ್ರತಿ ಬಾರಿಯ ಗ್ರಹಣದಲ್ಲೂ ಆ ಮಾತುಗಳು ನೆನಪಾಗುತ್ತವೆ. ಯಾವುದು ಸರಿ, ಯಾವುದು ಮೂಢನಂಬಿಕೆ ಎಂಬ ಪ್ರಶ್ನೆಯೂ ಕಾಡುತ್ತದೆ.
ಶೋಭಾ ದೇಸಾಯಿ