Advertisement

ಅಪಾಯದಲ್ಲಿ ಪಶ್ಚಿಮ ಘಟ್ಟ! ಘಟ್ಟ ವ್ಯಾಪ್ತಿಯಲ್ಲಿ 8 ವರ್ಷಗಳಲ್ಲಿ 3000ಕ್ಕೂ ಅಧಿಕ ಭೂಕುಸಿತ

01:04 AM Jul 31, 2024 | Team Udayavani |

ಕಳೆದ ಕೆಲವು ವರ್ಷಗಳಲ್ಲಿ ಪಶ್ಚಿಮಘಟ್ಟ ಶಿಥಿಲಗೊಂಡಂತಿದೆ. ಒಂದಲ್ಲ ಒಂದು ಭೂಕುಸಿತ ಪ್ರಕರಣಗಳು ವರದಿಯಾಗುತ್ತಿದ್ದು, ತಪ್ಪಲಿನ ಜನರು ಭೀತರಾಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯಗಳಲ್ಲಿ ಒಂದರ ಮೇಲೊಂದು ಭೂಕುಸಿತಗಳು ಸಂಭವಿಸುತ್ತಿವೆ. ಭೌಗೋಳಿಕ ಮತ್ತು ಜೀವ ವೈವಿಧ್ಯತೆಯ ಆಗರವಾಗಿರುವ ಪಶ್ಚಿಮ ಘಟ್ಟದಲ್ಲಿ ಯಾಕೆ ಭೂಕುಸಿತಗಳು ಸಂಭವಿಸುತ್ತಿವೆ, ಇದಕ್ಕೆ ಕಾರಣಗಳೇನು, ಪರಿಣಾಮಗಳು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ಪಶ್ಚಿಮ ಘಟ್ಟ ಪ್ರದೇಶವು ಪಶ್ಚಿಮ ಕರಾವಳಿಗುಂಟ ಹಬ್ಬಿರುವ ಪರ್ವತಗಳ ಸಾಲು. ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಂಚಿ ಹೋಗಿರುವ ಈ ಘಟ್ಟ ಶ್ರೇಣಿಯ ವ್ಯಾಪ್ತಿಯು ಸುಮಾರು 1.60 ಲಕ್ಷ ಕಿ.ಮೀ.! ಪಶ್ಚಿಮ ಘಟ್ಟ ಶ್ರೇಣಿಯು ತಮಿಳುನಾಡಿನ ನೀಲಗಿರಿಯಲ್ಲಿ ಪೂರ್ವ ಘಟ್ಟ ಶ್ರೇಣಿಯಲ್ಲಿ ಸಮ್ಮಿಲನಗೊಂಡು ಮುಂದುವರಿಯುತ್ತದೆ. ಸಾಕಷ್ಟು ಜೀವ ವೈವಿಧ್ಯ ಹಾಗೂ ಸಸ್ಯ ಸಂಕುಲವನ್ನು ಹೊಂದಿರುವ ಪಶ್ಚಿಮ ಘಟ್ಟ ಶ್ರೇಣಿಯು ಅನೇಕ ನದಿಗಳಿಗೆ ಉಗಮ ಸ್ಥಾನವೂ ಹೌದು. ದೇಶದ ಮಳೆಯನ್ನು ನಿರ್ಧರಿಸುವ ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ಈ ಸೂಕ್ಷ ಪ್ರದೇಶದಲ್ಲಿನ ಅತಿಯಾದ ಮಾನವ ಹಸ್ತಕ್ಷೇಪದಿಂದಾಗಿ ಅದರ ಮೂಲ ಸಂರಚನೆಯಲ್ಲಿ ವ್ಯತ್ಯಾಸವಾಗುತ್ತಿದೆ. ಅಲ್ಲದೇ ಭೂಕುಸಿತದಂತ ನೈಸರ್ಗಿಕ ವಿಪತ್ತುಗಳಿಗೂ ಕಾರಣವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಮಂಗಳವಾರ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ.

ಏನಿದು ಭೂಕುಸಿತ?: ಭೂಕುಸಿತವು ಬಂಡೆಗಳು, ಮಣ್ಣು ಮತ್ತು ಭಗ್ನಾವಶೇಷಗಳ ಹಠಾತ್‌ ಚಲನೆಯ ಭೂವೈಜ್ಞಾನಿಕದ ಒಂದು ವಿದ್ಯಮಾನ. ನೈಸರ್ಗಿಕ ಮತ್ತು ಮಾನವ ಹಸ್ತಕ್ಷೇಪಗಳು ಭೂಕುಸಿತಕ್ಕೆ ಕಾರಣವಾಗುತ್ತದೆ. ಅತಿಯಾದ ಮಳೆ, ಭೂಕಂಪಗಳು, ಜ್ವಾಲಾಮುಖೀ ಹಾಗೂ ಮಾನವ ನಿರ್ಮಿತ ಅಂದರೆ ನಿರ್ಮಾಣ ಚಟುವಟಿಕೆಗಳು, ಅರಣ್ಯನಾಶ, ಬೆಳೆ ಮಾದರಿಗಳಲ್ಲಿನ ಬದಲಾವಣೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಭೂಕುಸಿತಗಳು ಸಂಭವಿಸುತ್ತವೆ.

ಕೇರಳದಲ್ಲಿ ಭೂಕುಸಿತ ಹೇರಳ!: ಇತ್ತೀಚೆಗೆ ನಡೆಸಲಾದ ಎಐ ಆಧರಿತ ಅಧ್ಯಯನ ವರದಿಯಲ್ಲಿ ಕೇರಳದ ಶೇ.13ರಷ್ಟು ಭಾಗವು ಭೂಕುಸಿತದ ಅಪಾಯದಲ್ಲಿದೆ. ಈ ಪೈಕಿ ಇಡುಕ್ಕಿ, ಪಾಲಕ್ಕಾಡ್‌, ಮಲಪ್ಪುರಂ, ಪತ್ತನಂತಿಟ್ಟ ಮತ್ತು ವಯನಾಡು ಪ್ರದೇಶಗಳು ಹೆಚ್ಚು ಭೂಕುಸಿತ ಅಪಾಯದಲ್ಲಿರುವ ಪ್ರದೇಶಗಳಾಗಿವೆ. ಪಶ್ಚಿಮ ಘಟ್ಟ ವ್ಯಾಪ್ತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸುತ್ತವೆ. ಪ್ರತಿ ಮಳೆಗಾಲದಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾದರೆ, ಭೂಕುಸಿತಗಳು ಸಾಮಾನ್ಯ ಎನ್ನುವಂತಾಗಿದೆ. ಪ್ರಸಕ್ತ ಮಳೆಗಾಲದ ಕರ್ನಾಟಕದ ಶಿರೂರು ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಇದಕ್ಕೆ ಉದಾಹರಣೆಯಾಗಿದೆ.

ಹಿಮಾಲಯದ ಬಳಿಕ ಪಶ್ಚಿಮ ಘಟ್ಟವೇ ಹೆಚ್ಚು ಅಪಾಯ!
ಪಶ್ಚಿಮ ಘಟ್ಟಗಳು ಅತ್ಯಂತ ಸ್ಥಿರ ಪ್ರದೇಶ ಎಂದು ಹೇಳಲಾಗುತ್ತದೆ. ಆದರೆ ಅರಣ್ಯ ಮತ್ತು ಕಣಿವೆಗಳ ನಾಶದಿಂದ ಭೂಕುಸಿತಕ್ಕೆ ಹೆಚ್ಚು ಪ್ರಶಸ್ತ ತಾಣವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಹಿಮಾಲಯದ ಬಳಿಕ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಭೂಕುಸಿತಗಳು ಸಂಭವಿಸುತ್ತಿವೆ. ಇದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಘಟ್ಟವು ಹೆಚ್ಚು ದಪ್ಪ ಮಣ್ಣಿನ ಹೊದಿಕೆ ಮತ್ತು ಕಡಿದಾದ ಇಳಿಜಾರು ಪ್ರದೇಶವಾಗಿ ರುವುದೂ ಭೂ ಕುಸಿತಕ್ಕೂ ಕಾರಣವಾಗುತ್ತಿದೆ. ಜತೆಗೆ ಮಾನವನ ಅತಿಯಾದ ಹಸ್ತಕ್ಷೇಪವೂ ಹೆಚ್ಚನ ಆತಂಕಕ್ಕೆ ಕಾರಣವಾಗಿದೆ.

Advertisement

ಮಾಧವ್‌ ಗಾಡ್ಗಿಳ್‌ ವರದಿ ಜಾರಿಗೆ ಕೇರಳ, ಕರ್ನಾಟಕ ವಿರೋಧ!
ವಯನಾಡಿನ ಭೂಕುಸಿತದ ಹಿನ್ನೆಲೆಯಲ್ಲಿ 13 ವರ್ಷಗಳ ಹಿಂದೆ ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಮಾಧವ್‌ ಗಾಡ್ಗಿàಳ್‌ ನೀಡಿದ ವರದಿಯು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎಎಸ್‌)ಗಳಲ್ಲಿ ಕಲ್ಲು ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈಗ ಭೂಕುಸಿತ ಸಂಭವಿಸಿರುವ ಮೆಪ್ಪಾಡಿಯನ್ನೂ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗುರುತಿಸಲಾಗಿತ್ತು. ವರದಿಯನ್ನು ನಿರ್ಲಕ್ಷಿಸಿದ್ದಕ್ಕೆ ಈಗ ದುರಂತ ಸಂಭವಿಸಿದೆ! ಗಾಡ್ಗಿಳ್‌ ವರದಿಯನ್ನು 2011ರಲ್ಲಿ ಕೇಂದ್ರ ಸರ‌ಕಾರಕ್ಕೆ ಸಲ್ಲಿಸಲಾಗಿತ್ತು.ಆದರೆ ಈ ವರದಿ ಸಂಪೂರ್ಣವಾಗಿ ಜಾರಿಯಾಗಲಿಲ್ಲ! ಕೇರಳದಲ್ಲಿ ಒಟ್ಟು 18 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅದೇ ರೀತಿ ಪಶ್ಚಿಮ ಘಟ್ಟದ 1.29 ಲಕ್ಷ ಚ.ಕಿ.ಮೀ ವ್ಯಾಪ್ತಿಯ ಪೈಕಿ ಶೇ.75 ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲು ಶಿಫಾರಸು ಮಾಡಲಾಗಿತ್ತು. ಗಾಡ್ಗಿàಳ್‌ ವರದಿ ಸಲ್ಲಿಕೆಯಾದ 3 ವರ್ಷದ ಬಳಿಕ ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿ, ಸೂಕ್ಷ್ಮ ಪ್ರದೇಶ ವ್ಯಾಪ್ತಿಯನ್ನು ಶೇ.50ಕ್ಕೆ ಇಳಿಸಿತು. ಈ ಎರಡೂ ವರದಿಗಳ ಜಾರಿಗೆ ಕೇರಳ ಮತ್ತು ಕರ್ನಾಟಕ ಹೆಚ್ಚು ಪ್ರತಿರೋಧ ತೋರಿದ್ದವು. ಪರಿಣಾಮ, ಪರಿಸರ ಸೂಕ್ಷ್ಮ ಪರಿಸರದಲ್ಲಿ ಕಲ್ಲು ಕ್ವಾರಿ, ಗಣಿಗಾರಿಕೆ, ಹೊಸ ಕೈಗಾರಿಕೆಗಳ ನಿರ್ಮಾಣ ಸೇರಿದಂತೆ ಇನ್ನಿತರ ನಿರ್ಮಾಣ ಕಾರ್ಯಗಳು ನಿರಾತಂಕವಾಗಿ ನಡೆಯುತ್ತಿವೆ. ಇವುಗಳ ಅಡ್ಡ ಪರಿಣಾಮ ಮಳೆಗಾಲದಲ್ಲಿ ಭೂಕುಸಿತ ರೂಪದಲ್ಲಾಗುತ್ತಿವೆ!

ಭೂಕುಸಿತದ ಪರಿಣಾಮಗಳು
-ಭೂಕುಸಿತದಿಂದ ಅಪಾರ ಪ್ರಮಾಣದಲ್ಲಿ ಜೀವ ಹಾನಿ ಮತ್ತು ಆಸ್ತಿಹಾನಿಯಾಗುತ್ತದೆ.
-ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತದೆ, ಸಂವಹನ ವ್ಯವಸ್ಥೆ ಸ್ಥಗಿತವಾಗುತ್ತದೆ. ಇದರಿಂದ ಜನರಿಗೆ ಅಗತ್ಯವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.
-ಜಲಮೂಲಗಳ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಕೃಷಿ ಇಳುವರಿಯ ಮೇಲೂ ಭೂಕುಸಿತಗಳು ಪರಿಣಾಮ ಬೀರುತ್ತವೆ.

ಪಶ್ಚಿಮ ಘಟ್ಟದ ಟಾಪ್‌ 5 ಭೂಕುಸಿತ
1.ಕೇರಳ ಭೂಕುಸಿತ: 483 ಸಾವು
2018ರ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಗೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಕ್ಕೆ 483 ಜನರ ಸಾವು ಮತ್ತು 15 ಜನರು ಕಾಣೆ.
2. ಮಾಳೀಣ ಹಳ್ಳಿ: 151 ಸಾವು
ವಿಪರೀತ ಮಳೆಯಿಂದಾಗಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾಳೀಣ ಹಳ್ಳಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 151ಕ್ಕೂ ಹೆಚ್ಚು ಜನರು ಮೃತಪಟ್ಟು, 10ಕ್ಕೂ ಅಧಿಕ ಜನರು ಕಾಣೆಯಾಗಿದ್ದರು.
3.ತಳಿಯೆ ಭೂಕುಸಿತ: 82 ಸಾವು
2021ರಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ತಳಿಯೆ ಹಳ್ಳಿ ಭೂಕುಸಿತಕ್ಕೆ ಸಂಪೂರ್ಣ ನಾಮಾವಶೇಷ. 82ಕ್ಕೂ ಹೆಚ್ಚು ಜನರ ಸಾವು.
4.ಇರ್ಷಳವಾಡಿ: 27 ಸಾವು
2023ರ ಜುಲೈ 19ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಷಳವಾಡಿ ಹಳ್ಳಿ ಪೂರ್ತಿ ಭೂಕುಸಿತಕ್ಕೆ ನಾಮಾವಶೇಷವಾಯಿತು. ಈ ವೇಳೆ 27 ಜನರು ಮೃತಪಟ್ಟರು, 57ಕ್ಕೂ ಹೆಚ್ಚು ಜನರು ಕಾಣೆಯಾದರು.
5.ಕೊಡಗು ಜಿಲ್ಲೆ: 20 ಸಾವು
2018ರ ಆಗಸ್ಟ್‌ನಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಸುರಿದ ವ್ಯಾಪಕ ಮಳೆಗೆ 150 ಭೂಕುಸಿತ ಸಂಭವಿಸಿ, 20 ಜನರು ಮೃತಪಟ್ಟರೆ 4056 ಮನೆಗಳಿಗೆ ಹಾನಿಯಾಗಿತ್ತು.

ಭೂಕುಸಿತಕ್ಕೆ ಕಾರಣಗಳು
1.ನೈಸರ್ಗಿಕ
ಕಾರಣಗಳು
-ವಿಪರೀತ ಮಳೆ ಮತ್ತು ನೆಲವು ಮಳೆ ನೀರು ಹೀರಿಕೊಳ್ಳುವ ಪೂರ್ಣ ಹಂತ ತಲುಪಿದರೆ ಭೂಕುಸಿತ ಸಂಭವಿಸುತ್ತದೆ.
-ಅಂತರ್ಜಲದಲ್ಲಿ ವಿಪರೀತ ಹೆಚ್ಚಳ ಅಥವಾ ಪೋರ್‌ ವಾಟರ್‌(ಶಿಲೆಗಳ ನಡುವಿನ ಸಂಗ್ರಹವಾದ ನೀರು) ಒತ್ತಡದಲ್ಲಿನ ಬದಲಾವಣೆ.
-ಭೂಮಿ ಬಿರುಕು ಮತ್ತು ಸೀಳುಗಳಲ್ಲಿನ ಹೈಡ್ರೋಸ್ಪಾಟಿಕ್‌ ಒತ್ತಡ
-ಮಣ್ಣಿನ ಪೋಷಕಾಂಶಗಳು ಮತ್ತು ಮಣ್ಣಿನ ರಚನೆಯ ವ್ಯತ್ಯಾಸ ಭೂಕಂಪಗಳು ಮತ್ತು ಜ್ವಾಲಾಮುಖೀ ಸ್ಫೋಟಗಳು ಭೂಕುಸಿತಕ್ಕೆ ಕಾರಣ.
2.ಮಾನವಕಾರಣಗಳು
-ಕಟ್ಟಡ ನಿರ್ಮಾಣ ಚಟುವಟಿಕೆಗಳು, ಕೃಷಿ ಹಾಗೂ ಮರಗಳ ಹನನ
-ಘಟ್ಟ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ, ಡ್ರಿಲ್ಲಿಂಗ್‌, ಮೈನಿಂಗ್‌, ಅಣೆಕಟ್ಟುಗಳ ನಿರ್ಮಾಣ ಇತ್ಯಾದಿಗಳು.
-ಭೂರಚನೆ ಬದಲಾವಣೆ. ಮಟ್ಟು ಗಟ್ಟಿ ಹಿಡಿದುಕೊಂಡಿರುವ ಮರಗಳ ನಾಶ.

-ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next