ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಪಶ್ಚಿಮ ವಲಯದ ನೂತನ ಐಜಿಪಿ ಆಗಿ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಕಟ್ಟಡ ಸಂಕೀರ್ಣ ದಲ್ಲಿರುವ ಪಶ್ಚಿಮ ವಲಯ ಐಜಿಪಿ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ಐಜಿಪಿ ಹರಿಶೇಖರನ್ ಅವರಿಂದ ಹೇಮಂತ್ ನಿಂಬಾಳ್ಕರ್ ಅವರು ಅಧಿಕಾರ ಸ್ವೀಕರಿಸಿದರು. ವರ್ಗಾವಣೆ ಯಾಗಿ ತೆರಳುತ್ತಿರುವ ಹರಿಶೇಖರನ್ ಅವರು ಅಧಿಕಾರ ಹಸ್ತಾಂತರಿಸಿ ಹೊಸ ಐಜಿಪಿಗೆ ಶುಭ ಹಾರೈಸಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಬಂಟ್ವಾಳ ಎಎಸ್‌ಪಿ ಡಾ| ಅರುಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐಜಿಪಿ ಹರಿಶೇಖರನ್ ಅವರು ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಯಾಗಿದ್ದು, ತೆರವಾದ ಸ್ಥಾನಕ್ಕೆ ಹೇಮಂತ್ ನಿಂಬಾಳ್ಕರ್ ಅವರನ್ನು ಆ. 7ರಂದು ನಿಯುಕ್ತಿ ಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು.
ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವರಾಗಿರುವ ಹೇಮಂತ್ ನಿಂಬಾಳ್ಕರ್ 1998ರ ಐಪಿಎಸ್ ಬ್ಯಾಚ್‌ನವ ರಾಗಿದ್ದಾರೆ. 2000 ಇಸವಿಯಲ್ಲಿ ಪ್ರೊಬೇಷನರಿ ಎಸ್‌ಪಿ ಆಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಅವರು ವಿಟ್ಲ ಮತ್ತು ಮೂಡಬಿದಿರೆ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ತಿಪಟೂರಿನಲ್ಲಿ ಎಎಸ್‌ಪಿ ಆಗಿದ್ದರು. ಅನಂತರ ಎಸ್‌ಪಿ ಆಗಿ ಧಾರವಾಡ, ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು, ಗುಪ್ತಚರ ವಿಭಾಗದಲ್ಲಿ, ಡಿಐಜಿ ಆಗಿ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ, ಬಳಿಕ ಅಪರಾಧ ವಿಭಾಗದಲ್ಲಿ ಜಂಟಿ ಆಯುಕ್ತರಾಗಿ, ಐಜಿಯಾಗಿ ಸಿಐಡಿ ಬೆಂಗಳೂರು (ಆರ್ಥಿಕ ಅಪರಾಧ ವಿಭಾಗ)ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿಗೆ ವರ್ಗಾವಣೆಗೊಳ್ಳುವುದಕ್ಕೂ ಮೊದಲು ಅವರು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪಶ್ಚಿಮ ವಲಯದ 13ನೇ ಐಜಿಪಿ ಆಗಿರುತ್ತಾರೆ.
2017ರ ಜನವರಿ 6ರಂದು ಅಧಿಕಾರ ಸ್ವೀಕರಿಸಿದ್ದ ಹರಿಶೇಖರನ್ ಅವರು ಏಳೂವರೆ ತಿಂಗಳ ಕಾಲ ಪಶ್ಚಿಮ ವಲಯದ ಐಜಿಪಿ ಆಗಿ ಸೇವೆ ಸಲ್ಲಿಸಿದ್ದರು.