Advertisement
ನ.13, 20ರಂದು 2 ಹಂತದಲ್ಲಿ ಝಾರ್ಖಂಡ್‌ನಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ನಡೆಯಲಿದೆ. ನ.23ರಂದು ಫಲಿತಾಂಶ ಘೋಷಣೆಯಾಗಲಿದೆ. ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಹಾಗೂ 2ನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 41 ಸ್ಥಾನಗಳ ಅವಶ್ಯಕತೆ ಇದೆ. ಪ್ರಸ್ತುತ ಅಧಿಕಾರದಲ್ಲಿರುವ ಮಹಾಘಟಬಂಧನ್‌ನಲ್ಲಿ ಝಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ರಾಷ್ಟ್ರೀಯ ಜನತಾದಳ ಮತ್ತು ಕಮ್ಯುನಿಷ್ಟ್ ಪಕ್ಷಗಳಿವೆ. ಉಳಿದಂತೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಆಲ್ ಝಾರ್ಖಂಡ್ ಸ್ಟೂಡೆಂಟ್ ಯೂನಿಯನ್, ಜನತಾದಳ, ಲೋಕ ಜನಶಕ್ತಿ ಪಕ್ಷಗಳಿವೆ.
ಝಾರ್ಖಂಡ್ ವಿಧಾನಸಭೆಯಲ್ಲಿ ಜನರನ್ನು ಸೆಳೆಯಲು ಈ ಬಾರಿ ಬಿಜೆಪಿ ತನ್ನ ಬತ್ತಳಿಕೆ ತುಂಬಾ ಬಾಣಗಳನ್ನು ತುಂಬಿಸಿಕೊಂಡೇ ಬಂದಿದೆ. ಚುನಾವಣೆ ಘೋಷಣೆ ಯಾಗುವುದಕ್ಕೂ ಮೊದಲೇ ಸರಕಾರದ ವಿರುದ್ಧ ತನ್ನ ಬಳಿ ಇರುವ ಬಾಣಗಳನ್ನು ನಿರಂತರವಾಗಿ ಪ್ರಯೋಗಿಸತ್ತಲೇ ಇದೆ. ಇದು ಜನರ ಮನಸ್ಸಿಗೆ ಸರಿಯಾಗಿ ನಾಟಿದರೆ ಈ ಬಾರಿ ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವ ಹಾದಿ ಸರಳವಾಗಲಿದೆ.
Related Articles
Advertisement
28 ಎಸ್‌ಟಿ ಸ್ಥಾನವೇ ಬಿಜೆಪಿಯ ಆತಂಕ81 ಕ್ಷೇತ್ರಗಳ ರಾಜ್ಯ ವಿಧಾನಸಭೆಯಲ್ಲಿ 28 ಸ್ಥಾನಗಳು ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂನ ಹೇಮಂತ್ ಸೊರೇನ್ ಹೆಚ್ಚು ಪ್ರಬಲರು ಎನಿಸಿಕೊಂಡಿದ್ದಾರೆ. ಅಲ್ಲದೇ ಹೇಮಂತ್ ಬಂಧನಕ್ಕೆ ಬಿಜೆಪಿ ನೇರ ಕಾರಣ ಎಂದು ಹೇಳುವ ಮೂಲಕ ಹೆಚ್ಚು ಮತ ಪಡೆಯಬಹುದು ಎಂಬುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕಾಂಗ್ರೆಸ್‌ನ ವೋಟ್‌ಬ್ಯಾಂಕ್ ಎನಿಸಿಕೊಂಡಿರುವ ಬುಡಕಟ್ಟು ಸಮುದಾಯವೂ ರಾಜ್ಯದಲ್ಲಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.
2011ರ ಜನಗಣತಿ ಪ್ರಕಾರ ಝಾರ್ಖಂಡ್ ರಾಜ್ಯದಲ್ಲಿ ಶೇ.30ಕ್ಕೂ ಹೆಚ್ಚು ಮಂದಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯಗಳು ಕಳೆದೆರಡು ಚುನಾವಣೆಗಳಲ್ಲಿ ಆಡಳಿತಾರೂಢ ಜೆಎಂಎಂ ಹಾಗೂ ಕಾಂಗ್ರೆಸ್ ಪರವಾಗಿರುವುದು ಮಹಾಘಟಬಂಧನ್ ಕೂಟಕ್ಕೆ ಬಲ ತಂದುಕೊಟ್ಟಿದೆ. ಅಲ್ಲದೇ ಈ ಬಾರಿಯೂ ಈ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಮೈತ್ರಿ ಕೂಟ “ಮೆಯಾನ್ ಸಮ್ಮಾನ್ ಯೋಜನಾ’, “ಆಪ್ಕಿ ಯೋಜನಾ”, “ಆಪ್ಕಿ ಸರ್ಕಾರ್’ ಯೋಜನೆಗಳನ್ನು ಜಾರಿ ಮಾಡಿದೆ. ಇದಲ್ಲದೇ ರಾಜ್ಯದ ಜನರಿ ಗಾಗಿ ಏಕರೂಪದ ಪಿಂಚಣಿ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ರಾಜ್ಯ ಸರಕಾರ ಜಾರಿ ಮಾಡಿದೆ. ಇವು ಈ ಚುನಾವಣೆಯಲ್ಲಿ ಮೈತ್ರಿಕೂಟದ ಕೈ ಹಿಡಿಯಬಹುದು ಎನ್ನಲಾಗಿದೆ. ಅಲ್ಲದೇ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರ್ನಾ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಬಗ್ಗೆ ಕಾಂಗ್ರೆಸ್ ಹಾಗೂ ಜೆಎಂಎಂ ಗೊತ್ತುವಳಿಯನ್ನು ಮಂಡಿಸಿದ್ದವು ಇದು ಸಹ ಕೂಟಕ್ಕೆ ವರವಾಗುವ ನಿರೀಕ್ಷೆ ಇದೆ. ಹಿರಿಯ ನಾಯಕರ ಪಕ್ಷಾಂತರ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಎಂಎಂ ಮತ್ತು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಮೈತ್ರಿಕೂಟಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ. ಮಾಜಿ ಸಿಎಂ ಚಂಪಯ್ ಸೊರೇನ್, ಕಾಂಗ್ರೆಸ್ ಸಂಸದೆ ಗೀತಾ ಕೋರಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ವಿಪಕ್ಷದಲ್ಲಿನ ಆಂತರಿಕ ಭಿನ್ನತೆಗಳು ಐಎನ್‌ಡಿಐಎ ಮೈತ್ರಿಕೂಟಕ್ಕೆ ಸವಾಲು ತಂದೊಡ್ಡಿದೆ. ಝಾರ್ಖಂಡಲ್ಲಿ ಜಾತಿ ಲೆಕ್ಕಾಚಾರ
ರಾಜ್ಯದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನಸಂಖ್ಯೆಯ ಪ್ರಮಾಣ ಹೆಚ್ಚಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟಿರುವ ಈ ಸಮುದಾಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಉಳಿದಂತೆ ಒಬಿಸಿ ಪ್ರಮಾಣ ಶೇ.46 ಹಾಗೂ ಸಾಮಾನ್ಯ ವರ್ಗ ಶೇ.16ರಷ್ಟಿದೆ. ಕಳೆದ ಚುನಾವಣೆಯಲ್ಲಿ ಎಸ್‌ಟಿ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಪ್ರದೇಶವನ್ನು ಜೆಎಂಎಂ ಗೆದ್ದುಕೊಂಡಿತ್ತು. ಅಲ್ಲದೇ ಜಾತಿ ಗಣತಿ ವಿಷಯವನ್ನಿಟ್ಟುಕೊಂಡು ಒಬಿಸಿ ಮತವನ್ನು ಸೆಳೆಯಲು ಕಾಂಗ್ರೆಸ್ ಮೈತ್ರಿಕೂಟ ಮುಂದಾಗಿದೆ. ಚುನಾವಣ ವಿಷಯಗಳು
1.ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬುಡಕಟ್ಟು ಜನರ ಅಭಿವೃದ್ಧಿ 2 ಝಾರ್ಖಂಡ್ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಂಗ್ಲಾ ವಲಸಿಗರ ಸಂಖ್ಯೆ 3. ಸಿಎಂ ಹೇಮಂತ್ ಸೊರೇನ್ ಭ್ರಷ್ಟಾಚಾರ ಕೇಸಲ್ಲಿ ಜೈಲು ಸೇರಿದ್ದು 4. ಕಳೆದ 5 ವರ್ಷದಲ್ಲಿ ರಾಜ್ಯ ಸರಕಾರ ಜಾರಿ ಮಾಡಿದ ಯೋಜನೆಗಳು 5. ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನದ ಪ್ರಮಾಣ
– ಗಣೇಶ್ ಪ್ರಸಾದ್