ಸೌಥಂಪ್ಟನ್: ಕೋವಿಡ್-19 ಲಾಕ್ ಡೌನ್ ನಂತರ ನಡೆದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಹೋಲ್ಡರ್ ಪಡೆ 1-0 ಮುನ್ನಡೆ ಸಾಧಿಸಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೆಲುವಿಗೆ 200 ರನ್ ಗುರಿ ಪಡೆದ ವಿಂಡೀಸ್ ಬ್ಲ್ಯಾಕ್ ವುಡ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ನಾಲ್ಕನೇ ದಿನದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಜೋಫ್ರಾ ಆರ್ಚರ್ ನೆರವಾದರು. ಅಂತಿಮವಾಗಿ ಇಂಗ್ಲೆಂಡ್ 313 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು, ಶೆನಾನ್ ಗ್ಯಾಬ್ರಿಯಲ್ ಐದು ವಿಕೆಟ್ ಕಬಳಿಸಿದರು.
ಗೆಲುವಿಗೆ 200 ರನ್ ಗುರಿ ಪಡೆದ ವಿಂಡೀಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಸೆಶನ್ ಆಟದಲ್ಲಿ 27 ರನ್ ಗೆ ಆರಂಭಿಕ ಮೂರು ವಿಕೆಟ್ ಕಳೆದುಕೊಂಡಿತು.
ನಂತರ ಒಂದಾದ ರೋಸ್ಟನ್ ಚೇಸ್ ಮತ್ತು ಬ್ಲ್ಯಾಕ್ ವುಡ್ 73 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. 37 ರನ್ ಗಳಿಸಿದ್ದ ಚೇಸ್ ಆರ್ಚರ್ ಬೌಲಿಂಗ್ ಗೆ ಔಟಾದರೆ, ನಂತರ ಬಂದ ಕೀಪರ್ ಡೌರಿಚ್ ಉತ್ತಮ ಆಟವಾಡಿದರು.
ಉತ್ತಮ ಬ್ಯಾಟಿಂಗ್ ಮಾಡಿದ ಬ್ಲ್ಯಾಕ್ ವುಡ್ 95 ರನ್ ಗಳಿಸಿ ಔಟಾದರು. ಈ ಮೂಲಕ ಕೋವಿಡ್ ನಂತರ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಯಿಂದ ವಂಚಿತರಾದರು.
ವಿಂಡೀಸ್ ಈ ಗೆಲುವಿನಿಂದ ಸರಣಿಯಲ್ಲಿ ಶುಭಾರಂಭ ಮಾಡಿದೆ. ಎರಡನೇ ಪಂದ್ಯ ಜುಲೈ 16ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಲಿದೆ.