Advertisement

West Indies vs India 4th T20: ಸರಣಿ ಸಮಬಲಕ್ಕೆ ಭಾರತ ಪ್ರಯತ್ನ

11:27 PM Aug 11, 2023 | Team Udayavani |

ಲಾಡರ್‌ಹಿಲ್‌: ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವಣ ಟಿ20 ಸರಣಿಯ ನಾಲ್ಕನೇ ಪಂದ್ಯವು ಶನಿವಾರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ ಭಾರತ ಹೋರಾಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಆರಂಭವಾಗಲಿದೆ.

Advertisement

ಸೂರ್ಯಕುಮಾರ್‌ ಯಾದವ್‌ ಅವರ ಸಾಹಸದಿಂದ ಭಾರತ ಮೂರನೇ ಟಿ20 ಪಂದ್ಯವನ್ನು ಜಯಿಸಿದ್ದರಿಂದ ಸರಣಿಯನ್ನು ಜೀವಂತವಿರಿಸಿಕೊಳ್ಳಲು ಯಶಸ್ವಿಯಾಯಿತು. ಇದೀಗ ಸರಣಿ ಸಮಬಲಗೊಳಿಸಲು ಆರಂಭಿಕ ಸಹಿತ ಅಗ್ರ ಕ್ರಮಾಂಕದ ಆಟಗಾರರು ಉತ್ತಮವಾಗಿ ಆಡುವ ನಿರೀಕ್ಷೆಯನ್ನು ಭಾರತ ಇಟ್ಟುಕೊಂಡಿದೆ.
ಐದು ಪಂದ್ಯಗಳ ಈ ಸರಣಿಯಲ್ಲಿ ಸದ್ಯ ವೆಸ್ಟ್‌ಇಂಡೀಸ್‌ 2-1ರಿಂದ ಮುನ್ನಡೆಯಲ್ಲಿದೆ. ಒಂದು ವೇಳೆ ನಾಲ್ಕನೇ ಪಂದ್ಯ ಗೆದ್ದರೆ ವೆಸ್ಟ್‌ ಇಂಡೀಸ್‌ 2016ರ ಬಳಿಕ ಭಾರತ ವಿರುದ್ಧ ಮೊದಲ ಬಾರಿ ಸರಣಿ ಗೆಲ್ಲಲಿದೆ. ಭಾರತ ಮುಂದಿನೆರಡು ಪಂದ್ಯ ಗೆದ್ದರೆ ಮಾತ್ರ ಸರಣಿ ತನ್ನದಾಗಿಸಿಕೊಳ್ಳಲಿದೆ.

ಭಾರತಕ್ಕೆ ಬ್ಯಾಟಿಂಗ್‌ ಚಿಂತೆ
ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್‌ ಕಳಪೆಯಾಗಿತ್ತು. ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮ ಅವರನ್ನು ಬಿಟ್ಟು ಉಳಿದ ಆಟಗಾರರ್ಯಾರೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿಲ್ಲ. ಇದು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ತಂಡವನ್ನು ಆಧರಿಸಬೇಕಾಗಿದ್ದ ಆರಂಭಿಕರು ಇನ್ನೂ ಮಿಂಚಲು ಒದ್ದಾಡುತ್ತಿದ್ದಾರೆ.

ಇಶಾನ್‌ ಕಿಶನ್‌ ಅವರಿಗೆ ವಿಶ್ರಾಂತಿ ನೀಡಿ ಯಶಸ್ವಿ ಜೈಸ್ವಾಲ್‌ ಅವರಿಗೆ ಟಿ20ಗೆ ಪದಾರ್ಪಣೆಗೈಯಲು ಅವಕಾಶ ನೀಡಿದರೂ ಅವರು ಕೇವಲ ಆರು ರನ್‌ ಗಳಿಸಲಷ್ಟೇ ಶಕ್ತರಾಗಿ ನಿರಾಶೆ ಮೂಡಿಸಿದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆರಂಭಿಕರಾದ ಕಿಶನ್‌ ಮತ್ತು ಶುಭ್‌ಮನ್‌ ಗಿಲ್‌ ಮೊದಲ ವಿಕೆಟಿಗೆ 5 ಮತ್ತು 16 ರನ್‌ ಗಳಿಸಿದ್ದರು. ಇದರಿಂದಾಗಿ ಮಧ್ಯಮ ಕ್ರಮಾಂಕದ ಆಟಗಾರರು ಒತ್ತಡದಲ್ಲಿ ಆಡಬೇಕಾಯಿತು.

ಸರಣಿ ಸಮಬಲದ ನಿರ್ಣಾಯಕ ಪಂದ್ಯದಲ್ಲಿ ಕಿಶನ್‌ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಕೆಳಗಿನ ಕ್ರಮಾಂಕದಲ್ಲಿ ಉತ್ತಮ ಆಟಗಾರರು ಇಲ್ಲದ ಕಾರಣ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ನಿರ್ವಹಣೆ ನೀಡುವುದು ಅನಿವಾರ್ಯವಾಗಿದೆ. ಕೆಳಗಿನ ಕ್ರಮಾಂಕದಲ್ಲಿ ಅಕ್ಷರ್‌ ಪಟೇಲ್‌ ತಂಡವನ್ನು ಆಧರಿಸಬೇಕಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮ ತಂಡವನ್ನು ಆಧರಿಸಿದ್ದಾರೆ. ಈ ಹಿಂದಿನ ಮೂರು ಪಂದ್ಯಗಳಲ್ಲಿ ಅವರು ಅನುಕ್ರಮವಾಗಿ 39, 51 ಮತ್ತು 49 ರನ್‌ ಗಳಿಸಿದ್ದಾರೆ. ಈ ಮೂಲಕ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ. ಈ ಸರಣಿಯಲ್ಲಿ ಅವರೀಗ ತಂಡದ ಗರಿಷ್ಠ ರನ್‌ ಗಳಿಸಿದ ಆಟಗಾರರಾಗಿದ್ದಾರೆ. 69.50 ಸರಾಸರಿಯಲ್ಲಿ 139 ರನ್‌ ಗಳಿಸಿದ್ದಾರೆ. ಅವರಿಗೆ ಸೂರ್ಯಕುಮಾರ್‌ ಯಾದವ್‌ ಉತ್ತಮ ನೆರವು ನೀಡಿದ್ದಾರೆ. ಸೂರ್ಯ ಮತ್ತು ತಿಲಕ್‌ ವರ್ಮ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ಭಾರತ ಮೂರನೇ ಪಂದ್ಯ ಜಯಿಸಿತ್ತು.

Advertisement

ಬೌಲಿಂಗ್‌ನಲ್ಲಿ ಭಾರತ ಬಲಿಷ್ಠವಾ ಗಿದೆ. ಈ ಹಿಂದಿನ ಟಿ20ಯಲ್ಲಿ ಆಡಿದ್ದ ಕುಲದೀಪ್‌ ಯಾದವ್‌ ಮೂರು ವಿಕೆಟ್‌ ಕಿತ್ತು ಗಮನ ಸೆಳೆದಿದ್ದರು. ಅವರ ಸಹಿತ ಅಕ್ಷರ್‌ ಮತ್ತು ಯಜುವೇಂದ್ರ ಚಹಲ್‌ ಈ ಸರಣಿಯಲ್ಲಿ ಉತ್ತಮ ದಾಳಿ ಸಂಘಟಿಸಿದ್ದರು.

ಅಂಕಿ ಅಂಶ
ಲಾಡರ್‌ಹಿಲ್‌ನಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್‌ ಇಷ್ಟರವರೆಗೆ ಆರು ಟಿ20 ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಭಾರತ ಜಯ ಗಳಿಸಿದ್ದರೆ ವೆಸ್ಟ್‌ಇಂಡೀಸ್‌ ಒಂದು ಪಂದ್ಯದಲ್ಲಿ ಗೆದ್ದಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ.

ಯಜುವೇಂದ್ರ ಚಹಲ್‌ ಅವರಿಗೆ ಟಿ20ಯಲ್ಲಿ ನೂರು ವಿಕೆಟ್‌ ಪೂರ್ತಿಗೊಳ್ಳಲು ಇನ್ನು 5 ವಿಕೆಟ್‌ ಬೇಕಾಗಿದೆ. ಇದು ಅವರ 78ನೇ ಪಂದ್ಯವಾಗಿದೆ. ಒಂದು ವೇಳೆ ಅವರಿಲ್ಲಿ 5 ವಿಕೆಟ್‌ ಕಿತ್ತರೆ 100 ವಿಕೆಟ್‌ ಪೂರ್ತಿಗೊಳಿಸಿದ ಭಾರತದ ಮೊದಲ ಬೌಲರ್‌ ಎಂದೆನಿಸಿಕೊಳ್ಳಲಿದ್ದಾರೆ.

ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಇದು ಭಾರತದ ಐದನೇ ಟಿ20 ಸರಣಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next