ನೆಲ್ಸನ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ ಸಂಕಟದಲ್ಲಿರುವ ವೆಸ್ಟ್ ಇಂಡೀಸ್ ಇನ್ನು ಟಿ20 ಮುಖಾಮುಖೀಯಲ್ಲಿ ಅಗ್ನಿಪರೀಕ್ಷೆ ಎದುರಿಸಲಿದೆ. 3 ಪಂದ್ಯಗಳ ಸರಣಿ ಶುಕ್ರವಾರದಿಂದ ನೆಲ್ಸನ್‌ನಲ್ಲಿ ಆರಂಭವಾಗಲಿದ್ದು, ವಿಂಡೀಸ್ ನಾಯಕರಾಗಿ ಕಾರ್ಲೋಸ್ ಬ್ರಾತ್‌ವೇಟ್ ಮುಂದುವರಿದಿದ್ದಾರೆ.
ಟಿ20 ಕ್ರಿಕೆಟಿನ ವಿಶ್ವ ಚಾಂಪಿಯನ್ ಆದ ಕಾರಣ ವೆಸ್ಟ್ ಇಂಡೀಸಿಗೆ ಇದು ಪ್ರತಿಷ್ಠೆಯ ಸರಣಿ ಆಗಿದೆ. ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಸೋತ ವೆಸ್ಟ್ ಇಂಡೀಸ್, ಅನಂತರದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಸಂಪೂರ್ಣವಾಗಿ ಮುಗ್ಗರಿಸಿತ್ತು. ಇವೆರಡರಲ್ಲಿ ಹೋದ ಮಾನವನ್ನು ಚುಟುಕು ಕ್ರಿಕೆಟ್‌ನಲ್ಲಿ ಗಳಿಸಲು ಕೆರಿಬಿಯನ್ನರಿಗೆ ಸಾಧ್ಯವೇ ಎಂಬುದೊಂದು ಪ್ರಶ್ನೆ.
ಸ್ಫೋಟಕ ಆರಂಭಕಾರ ಕ್ರಿಸ್ ಗೇಲ್ ತಂಡದಲ್ಲಿದ್ದಾರೆ. ಆದರೆ ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ಕೈರನ್ ಪೊಲಾರ್ಡ್ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಇವರ ಸ್ಥಾನಕ್ಕೆ ಯುವ ಎಡಗೈ ಬ್ಯಾಟ್ಸ್‌ಮನ್ ಶಿಮ್ರನ್ ಹೆಟ್‌ಮೈರ್ ಬಂದಿದ್ದಾರೆ. ಸ್ನಾಯು ಸೆಳೆತಕ್ಕೊಳಗಾಗಿರುವ ಪೇಸ್ ಬೌಲರ್ ರೋನ್ಸ್‌ಫೋರ್ಡ್ ಬೀಟನ್ ಬದಲು ಶೆಲ್ಡನ್ ಕಾಟ್ರೆಲ್ ಅವಕಾಶ ಪಡೆದಿದ್ದಾರೆ. ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಅವರಿಗೆ ತಂಡದಲ್ಲಿ ಜಾಗ ಲಭಿಸಿಲ್ಲ. ಹೀಗಾಗಿ ಸಾಮ್ಯುಯೆಲ್ ಬದ್ರಿ ಸ್ಪಿನ್ ವಿಭಾಗದ ಟ್ರಂಪ್‌ಕಾರ್ಡ್ ಆಗಬೇಕಿದೆ.
ವೆಸ್ಟ್ ಇಂಡೀಸ್ ತಂಡ: ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ಸಾಮ್ಯುಯೆಲ್ ಬದ್ರಿ, ಶೆಲ್ಡನ್ ಕಾಟ್ರೆಲ್, ರಯಾದ್ ಎಮ್ರಿಟ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರನ್ ಹೆಟ್‌ಮೈರ್, ಶೈ ಹೋಪ್, ಜಾಸನ್ ಮೊಹಮ್ಮದ್, ಆ್ಯಶೆÉ ನರ್ಸ್, ರೋವ¾ನ್ ಪೊವೆಲ್, ಜೆರೋಮ್ ಟಯ್ಲರ್, ಚಾಡ್ವಿಕ್ ವಾಲ್ಟನ್, ಕೆಸ್ರಿಕ್ ವಿಲಿಯಮ್ಸ್.