ಗಾಲೆ: ಆತಿಥೇಯ ಶ್ರೀಲಂಕಾ ವಿರುದ್ಧ ರವಿವಾರ ಆರಂಭವಾದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್‌ನ ಯುವ ಆಟಗಾರ ಜೆರೆಮಿ ಸೊಲೊಝಾನೊ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನ 24ನೇ ಓವರ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಆಫ್ ಸ್ಪಿನ್ನರ್ ರೋಸ್ಟನ್ ಚೇಸ್ ಅವರ ಶಾರ್ಟ್ ಪಿಚ್ ಎಸೆತವನ್ನು ಬೌಂಡರಿಗೆ ಅಟ್ಟಲು ಎಡಗೈ ಬ್ಯಾಟ್ಸ್‌ಮನ್ ದಿಮುತ್ ಕರುಣಾರತ್ನೆ ಬಲವಾಗಿ ಬಾರಿಸಿದ್ದರು. ಆದರೆ ದುರದೃಷ್ಟವಶಾತ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಯುವ ಆಟಗಾರ ಜೆರೆಮಿ ಅವರ ತಲೆಗೆ ಚೆಂಡು ಬಲವಾಗಿ ಬಡಿದಿದೆ.
ಪದಾರ್ಪಣೆಯ ಪಂದ್ಯವನ್ನಾಡುತ್ತಿದ್ದ 26 ವರ್ಷದ ಆಟಗಾರ ಜೆರೆಮಿ ಹೆಲ್ಮೆಟ್ ಧರಿಸಿದ್ದರಾದರೂ, ಚೆಂಡು ಬಡಿದ ರಭಸಕ್ಕೆ ಸ್ಥಳದಲ್ಲೇ ಕುಸಿದುಬಿದ್ದರು. ಅನಂತರ ಅವರನ್ನು ಸ್ಟ್ರೆಚರ್ ಮೂಲಕ ಸಾಗಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಇದನ್ನೂ ಓದಿ:ಸೂರ್ಯ ಹೊಣೆಯಲ್ಲ: ವಿಷಾದ ವ್ಯಕ್ತಪಡಿಸಿದ ‘ಜೈ ಭೀಮ್’ ನಿರ್ದೇಶಕ
ಇದಾದ ಬಳಿಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವಿಟರ್ ಮೂಲಕ ಗಾಯಾಳು ಕ್ರಿಕೆಟಿಗನ ಬಗ್ಗೆ ಮಾಹಿತಿ ನೀಡಿದ್ದು “ಫೀಲ್ಡಿಂಗ್ ವೇಳೆ ತಲೆಗೆ ಪೆಟ್ಟು ತಿಂದಿರುವ ಪದಾರ್ಪಣೆಯ ಆಟಗಾರ ಜೆರೆಮಿ ಸೊಲೊಝಾನೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುಯುತಿದ್ದು ಚೇತರಿಕೆ ಕಾಣುತಿದ್ದು ಶೀಘ್ರವಾಗಿ ಅವರು ಮತ್ತೆ ಮೈದಾನಕ್ಕೆ ಬರಲಿದ್ದಾರೆ’ ಎಂದು ಮಾಹಿತಿ ನೀಡಿದೆ.