ಮ್ಯಾಂಚೆಸ್ಟರ್: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಫಿಲ್ ಸಿಮನ್ಸ್ ಸೆಲ್ಫ್ ಐಸೊಲೇಶನ್‌ಗೆ ಒಳಗಾಗಿದ್ದಾರೆ.
ಶುಕ್ರವಾರ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಇಂಗ್ಲೆಂಡಿಗೆ ಆಗಮಿಸಿರುವ ಫಿಲ್ ಸಿಮನ್ಸ್ ಓಲ್ಡ್ ಟ್ರಾಫರ್ಡ್ ಹೊಟೇಲ್ ಕೋಣೆಯೊಂದರಲ್ಲಿ ಏಕಾಂಗಿಯಾಗಿ ಉಳಿದುಕೊಂಡಿದ್ದಾರೆ. ಗುರುವಾರದ ಒಳಗಾಗಿ ಅವರು 2 ಸಲ ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ.
ಆದರೆ ಫಿಲ್ ಸಿಮನ್ಸ್ ಅನುಪಸ್ಥಿತಿಯಲ್ಲಿ ತಂಡದ ಸಿದ್ಧತೆಗೇನೂ ಅಡಚಣೆ ಆಗದು ಎಂಬುದಾಗಿ ವೇಗಿ ಅಲ್ಜಾರಿ ಜೋಸೆಫ್ ಹೇಳಿದ್ದಾರೆ. “ನಮ್ಮ ಕೆಲಸವನ್ನು ನಾವು ಮಾಡುತ್ತ ಹೋಗುತ್ತೇವೆ. ಸಾಕಷ್ಟು ದೊಡ್ಡದಾದ ತರಬೇತುದಾರರ ಪಡೆಯನ್ನು ನಾವು ಹೊಂದಿದ್ದೇವೆ. ಹೀಗಾಗಿ ನಮಗೇನೂ ತೊಂದರೆಯಾಗದು’ ಎಂದಿದ್ದಾರೆ ಅಲ್ಜಾರಿ ಜೋಸೆಫ್.
ಸಹಾಯಕ ಕೋಚ್ ರಾಡಿ ಎಸ್ಟ್‌ವಿಕ್ ಮತ್ತು ರೆಯಾನ್ ಗ್ರಿಫಿತ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಜು. 8ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.