ವೆಲ್ಲಿಂಗ್ಟನ್: ವೆಸ್ಟ್ ಇಂಡೀಸಿಗೆ ಸೋಲಿನ ಮೇಲೆ ಬರೆ ಬಿದ್ದಿದೆ. ನಾಯಕ ಜಾಸನ್ ಹೋಲ್ಡರ್ ಅವರಿಗೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಲಾಗಿದೆ.
ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಹೋಲ್ಡರ್ ಓವರ್ ಗತಿ ಕಾಯ್ದುಕೊಳ್ಳಲು ವಿಫಲ
ರಾದುದೇ ಇದಕ್ಕೆ ಕಾರಣ. ಇದಕ್ಕಾಗಿ ಅವರಿಗೆ ಪಂದ್ಯ ಸಂಭಾವನೆಯ ಶೇ. 60ರಷ್ಟು ಹಾಗೂ ತಂಡದ ಉಳಿದ ಆಟಗಾರರಿಗೆ ಶೇ. 30ರಷ್ಟು ದಂಡವನ್ನೂ ವಿಧಿಸಲಾಗಿದೆ.
ಒಂದು ವರ್ಷದ ಅವಧಿಯಲ್ಲಿ 2 ಸಲ ಓವರ್ ಗತಿ ಕಾಯ್ದುಕೊಳ್ಳಲು ವಿಫಲರಾದುದರಿಂದ ನಾಯಕ ಹೋಲ್ಡರ್ ನಿಷೇಧಕ್ಕೊಳಗಾಗಬೇಕಾಯಿತು. ಇದಕ್ಕೂ ಮುನ್ನ, ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ಥಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದ ವೇಳೆಯೂ ಹೋಲ್ಡರ್ “ನಿಧಾನ ಗತಿಯ ಓವರ್’ ಸಂಕಟಕ್ಕೆ ಸಿಲುಕಿದ್ದರು.
ಇದರಿಂದ ಡಿ. 9ರಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಿಂದ ಜಾಸನ್ ಹೋಲ್ಡರ್ ಹೊರಗುಳಿಯಲಿದ್ದಾರೆ.