ಚಿತ್ತಗಾಂಗ್: ವೆಸ್ಟ್ ಇಂಡೀಸ್ ಮತ್ತು ಕೈಲ್ ಮೇಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ಇತಿಹಾಸ ನಿರ್ಮಿಸಿದ್ದಾರೆ. ಬಾಂಗ್ಲಾದೇಶ ನೀಡಿದ 395 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಕೆರಿಬಿಯನ್ ಕ್ರಿಕೆಟಿಗರು ತಮ್ಮ ಗತಕಾಲದ ಸಾಹಸವೊಂದನ್ನು ನೆನಪಿಸಿದ್ದಾರೆ. ಇದಕ್ಕಿಂತ ಮಿಗಿ ಲಾದದ್ದು ಮೊದಲ ಟೆಸ್ಟ್‌ನಲ್ಲೇ ಅಜೇಯ ದ್ವಿಶತಕ ಬಾರಿಸಿ ತಂಡವನ್ನು ದಡ ಸೇರಿಸಿದ ಮೇಯರ್ ಅವರ ಸಾಟಿಯಿಲ್ಲದ ಸಾಹಸ!
ಏಕದಿನದಲ್ಲಿ ವೈಟ್‌ವಾಶ್ ಅನು ಭವಿಸಿದ ವೆಸ್ಟ್ ಇಂಡೀಸ್ ಟೆಸ್ಟ್‌ನಲ್ಲೂ ಹಿನ್ನಡೆಯಲ್ಲಿತ್ತು. 395 ರನ್ ಟಾರ್ಗೆಟ್ ಪಡೆದು, 4ನೇ ದಿನ ದಾಟದ ಅಂತ್ಯಕ್ಕೆ 3 ವಿಕೆಟಿಗೆ 110 ರನ್ ಗಳಿಸಿ ಸೋಲಿನ ಭೀತಿಯಲ್ಲಿತ್ತು. ಆದರೆ ಎಡಗೈ ಬ್ಯಾಟ್ಸ್ ಮನ್ ಕೈಲ್ ಮೇಯರ್ ಅಜೇಯ 210 ರನ್ ಬಾರಿಸಿ ಮೆರೆದಾಡಿದರು. 86 ರನ್ ಮಾಡಿದ ಎನ್‌ಕ್ರುಮಾಹ್ ಬಾನರ್ ಮತ್ತೋರ್ವ ಸಾಧಕ.
ವಿಂಡೀಸ್ 7 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಇದರಲ್ಲಿ ಮೇಯರ್ ಪಾಲು ಅಜೇಯ 210 ರನ್. 310 ಎಸೆತಗಳ ಈ ಅಸಾಮಾನ್ಯ ಇನ್ನಿಂಗ್ಸ್ ನಲ್ಲಿ 20 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಯಲ್ಪಟ್ಟಿತು. ಮೊದಲ ಟೆಸ್ಟ್‌ನಲ್ಲೇ ಅತ್ಯಧಿಕ ರನ್ ಬಾರಿಸಿದವರ ಯಾದಿಯಲ್ಲಿ ಮೇಯರ್ಗೆ 6ನೇ ಸ್ಥಾನ. ಹಾಗೆಯೇ ಪದಾರ್ಪಣ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲಿಗನೂ ಹೌದು. ಮೇಯರ್ ಮೊದಲ ಸರದಿಯಲ್ಲಿ 40 ರನ್ ಮಾಡಿದ್ದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ ದೇಶ-430 ಮತ್ತು 8 ವಿಕೆಟಿಗೆ 223 ಡಿಕ್ಲೇರ್. ವೆಸ್ಟ್ ಇಂಡೀಸ್-259 ಮತ್ತು 7 ವಿಕೆಟಿಗೆ 395 (ಮೇಯರ್ ಔಟಾಗದೆ 210, ಬಾನರ್ 86, ಮೆಹಿದಿ ಹಸನ್ 113ಕ್ಕೆ 4).
ಪಂದ್ಯಶ್ರೇಷ್ಠ: ಕೈಲ್ ಮೇಯರ್.