“ಇಂಗ್ಲಿಷ್‌ಗೆ ಹೆದರಿ ನಾನವತ್ತು ಹಳ್ಳಿಗೆ ವಾಪಸಾಗಿದ್ದರೆ ನನಗಿಂದು ಯಾವ ಅಸ್ತಿತ್ವವೂ ಇರುತ್ತಿರಲಿಲ್ಲ’ ಎಂದು ಕಣ್ಣು ಮಿಟುಕಿಸುತ್ತಾರೆ, ಸುರಭಿ ಗೌತಮ್. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಮಾªರ ಎಂಬ ಕುಗ್ರಾಮದ ಹುಡುಗಿ. ಯುಪಿಎಸ್ಸಿ ಪರೀಕ್ಷೆಯಲ್ಲಿ 50ನೇ ರ್‍ಯಾಂಕ್ ಬಂದ ಈ ಹುಡುಗಿ, ತನ್ನ ಇಂಗ್ಲಿಷ್ ವಿಂಗ್ಲಿಷ್ ವೃತ್ತಾಂತವನ್ನು ಮನಕ್ಕೆ ತಟ್ಟುವಂತೆ ವಿವರಿಸಿದ್ದಾಳೆ…
ನನ್ನದೊಂದು ಪುಟ್ಟ ಹಳ್ಳಿ. ನಾನು ಓದುವಾಗ ಅದು ಕರೆಂಟೇ ಕಂಡಿರಲಿಲ್ಲ. ಓದು- ಕಲಿಕೆಗೆ ಅಲ್ಲಿ ಬೆಲೆಯೇ ಇಲ್ಲ. ನಾನೂ ಎಲ್ಲರಂತೆಯೇ ಹಳ್ಳಿಯ ಶಾಲೆಗಳಲ್ಲೇ ಓದಿದವಳು. 12ನೇ ತರಗತಿಯಲ್ಲಿ ವಿಜ್ಞಾನದಲ್ಲಿ ಜಾಸ್ತಿ ಅಂಕ ತೆಗೆದಿದ್ದಕ್ಕೆ ಎಪಿಜೆ ಅಬ್ದುಲ್ ಕಲಾಂ ಸ್ಕಾಲರ್‌ಶಿಪ್ ಸಿಕ್ಕಿತ್ತು. ಎಂಜಿನಿಯರಿಂಗ್ ಮಾಡಲು ಭೋಪಾಲ್‌ಗೆ ಬಂದೆ. ನಮ್ಮ ಹಳ್ಳಿಯಿಂದ ಹೊರಗೆ ಓದಲು ಬಂದ ಮೊದಲ ಹುಡುಗಿ ನಾನು.
ಅದು ಇಂಜಿನಿಯರಿಂಗ್‌ನ ಮೊದಲ ದಿನ. ಆ ದಿನವನ್ನು ನಾನೆಂದೂ ಮರೆಯಲಾರೆ. ನಾನು ತರಗತಿಯೊಳಗೆ ಬಂದಾಗ ಕೆಮಿಸ್ಟ್ರಿ ಕ್ಲಾಸ್ ನಡೆಯುತ್ತಿತ್ತು. ಮೇಡಂ ನನಗೆ “ಟೈಟ್ರೇಶನ್’ ಮಾಡಿ ತೋರಿಸಲು ಹೇಳಿದರು. ನಾನು ಓದಿದ್ದು ಹಳ್ಳಿಯ ಹಿಂದಿ ಮೀಡಿಯಂನ ಕಾಲೇಜಿನಲ್ಲಿ. ಅಲ್ಲಿ ಲ್ಯಾಬ್ ಇರಲೇ ಇಲ್ಲ. ಟೈಟ್ರೇಶನ್‌ಗೆ ಹಿಂದಿಯಲ್ಲಿ ಏನು ಹೇಳ್ತಾರೆ ಅಂತ ಕೂಡ ಗೊತ್ತಿರಲಿಲ್ಲ. ಕೊನೆಗೆ ಅವರೇ, “ಟೆಸ್ಟ್ ಟ್ಯೂಬ್ ತಗೋ’ ಅಂದರು. ನಡುಗುವ ಕೈಗಳಲ್ಲಿ ಅದನ್ನು ಎತ್ತಿಕೊಂಡಾಗ “ಫಳಾರ್’ ಅಂತ ಟೆಸ್ಟ್‌ಟ್ಯೂಬ್ ಒಡೆದೇಹೋಯ್ತು. ಎಲ್ಲರಿಗಿಂತ ಹಿಂದೆ ಕುಳಿತು ಅವರ ಕಣ್ತಪ್ಪಿಸಿಕೊಂಡು ಒಂದು ಗಂಟೆ ಕಳೆಯುವುದರೊಳಗೆ, ಜೀವ ಬಾಯಿಗೆ ಬಂದಿತ್ತು.
ಮುಂದಿನದು ಫಿಸಿಕ್ಸ್ ಕ್ಲಾಸ್. ಎಲ್ಲರೂ ತಮ್ಮ ಪರಿಚಯವನ್ನು ಇಂಗ್ಲಿಷ್‌ನಲ್ಲಿ ಮಾಡಿಕೊಳ್ಳುತ್ತಿದ್ದರು. ನಾನು ಕುಳಿತಲ್ಲಿಯೇ ಬೆವರುತ್ತಿದ್ದೆ, ಕೈ ಕಾಲು ನಡುಗುತ್ತಿತ್ತು. ಯಾಕಂದ್ರೆ ನನಗೆ ಇಂಗ್ಲಿಷ್‌ನಲ್ಲಿ ಒಂದು ವಾಕ್ಯವನ್ನೂ ಸರಿಯಾಗಿ ಹೇಳಲು ಬರುತ್ತಿರಲಿಲ್ಲ. ಒಬ್ಬೊಬ್ಬರಾಗಿ ಹೇಳುತ್ತಿದ್ದ ಇಂಗ್ಲಿಷ್ ವಾಕ್ಯವನ್ನು ಬಾಯಿಪಾಠ ಮಾಡಿ ನನ್ನ ಪರಿಚಯ ಮಾಡಿಕೊಂಡೆ. ಬದುಕಿದೆಯಾ ಬಡಜೀವವೇ ಅಂತ ಉಸಿರು ಬಿಡೋವಷ್ಟರಲ್ಲಿ ಆ ಲೆಕ್ಚರರ್ ನನಗೆ, “ವಾಟ್ ಈಸ್ ಪೊಟೆನ್ಶಿಯಲ್?’ ಅಂತ ಇಂಗ್ಲಿಷ್‌ನಲ್ಲಿ ಮತ್ತೂಂದು ಬಾಂಬ್ ಎಸೆದರು. ಫಿಸಿಕ್ಸ್‌ನ ಬೇಸಿಕ್ ಪ್ರಶ್ನೆ ಅದಾಗಿತ್ತು. ನನಗೆ ಉತ್ತರವೂ ಗೊತ್ತಿತ್ತು. ಆದರೆ, ಅದನ್ನು ಇಂಗ್ಲಿಷ್‌ನಲ್ಲಿ ಹೇಗೆ ಹೇಳಬೇಕು ಅಂತ ಗೊತ್ತಿರಲಿಲ್ಲ. ಅವಮಾನದಿಂದ ತಲೆತಗ್ಗಿಸಿದೆ. ಆಗ ಅವರು, “ನೀನು ನಿಜವಾಗ್ಲೂ 12ನೇ ಕ್ಲಾಸ್‌ನಲ್ಲಿ ಪಾಸ್ ಆಗಿದ್ದೀಯ? ಇಷ್ಟು ಸುಲಭದ ಪ್ರಶ್ನೆಗೆ ಉತ್ತರ ಗೊತ್ತಿಲ್ವ?’ ಅಂದರು. ನಾನು ಸ್ಕಾಲರ್‌ಶಿಪ್ ಪಡೆದವಳು, ನನಗೆ ಹಿಂದಿಯಲ್ಲಿ ಉತ್ತರ ಗೊತ್ತಿದೆ ಅಂತ ಹೇಳುವಷ್ಟೂ ಇಂಗ್ಲಿಷ್ ಗೊತ್ತಿರಲಿಲ್ಲ.
ಸೀದಾ ರೂಮಿಗೆ ಬಂದವಳೇ ಬಾಗಿಲು ಹಾಕಿಕೊಂಡು ಜೋರಾಗಿ ಅತ್ತೆ. ಈ ಕಾಲೇಜು, ಈ ಜನ ನನ್ನಂಥವರಿಗಲ್ಲ, ವಾಪಸ್ ಹಳ್ಳಿಗೆ ಹೋಗೋಣ ಅಂತನ್ನಿಸಿತು. ಮನೆಗೆ ಫೋನ್ ಮಾಡಿದೆ. ಆಗ ಅಪ್ಪ- ಅಮ್ಮ ಒಂದು ಮಾತು ಹೇಳಿದರು- “ನೋಡೂ ವಾಪಸ್ ಬರಲೇಬೇಕು ಅಂತಿದ್ರೆ ಬಾ. ಆದರೆ, ಇವತ್ತು ನೀನು ವಾಪಸ್ ಬಂದುಬಿಟ್ಟರೆ ಮುಂದೆ ಈ ಹಳ್ಳಿಯ ಯಾವ ಹುಡುಗಿಯೂ ಓದುವ ಕನಸು ಕಾಣಲ್ಲ. ನೀನು ಅವರೆಲ್ಲರ ಕನಸಿನ ಬಾಗಿಲನ್ನು ಮುಚ್ಚುತ್ತಿದ್ದೀಯ!’.
ಆ ಮಾತು ನನ್ನ ಛಲವನ್ನು ಬಡಿದೆಬ್ಬಿಸಿತು. ಒಂದು ಸೆಮ್ ಮುಗಿಯುವುದರೊಳಗೆ ಇಂಗ್ಲಿಷ್ ಕಲಿತೇ ಕಲಿಯುತ್ತೇನೆ ಅಂತ ಪಣ ತೊಟ್ಟೆ. ಆದರೆ, ಇಂಗ್ಲಿಷ್ ಮಾತಾಡುವ ಸ್ನೇಹಿತರಿರಲಿಲ್ಲ. ಕೋಚಿಂಗ್ ಅವಕಾಶವೂ ಸಿಗಲಿಲ್ಲ. ಇದ್ದ ದಾರಿಯೊಂದೇ. ನನಗೆ ನಾನೇ ಟೀಚರ್ ಆಗೋದು. ಎಂಜಿನಿಯರಿಂಗ್ ಪುಸ್ತಕಗಳನ್ನು ತೆಗೆದು ಅದರಲ್ಲಿನ ಕಷ್ಟದ ಸ್ಪೆಲ್ಲಿಂಗ್‌ಗಳನ್ನು ರೂಂನ ಗೋಡೆಯ ಮೇಲೆ ಬರೆದೆ. ಇಡೀ ಗೋಡೆ ತುಂಬಾ ಇಂಗ್ಲಿಷ್ ತುಂಬಿಕೊಂಡಿತ್ತು. ಅದನ್ನೇ ಓದಿದೆ, ಬರೆದೆ. ಅವತ್ತಿನಿಂದ ನಾನು ಕನಸು ಕಂಡಿದ್ದೂ ಇಂಗ್ಲಿಷ್‌ನಲ್ಲೇ. ಮೊದಲ ಸೆಮ್‌ನಲ್ಲಿ ಇಡೀ ಯುನಿವರ್ಸಿಟಿಗೇ ಫಸ್ಟ್ ಬಂದಿದ್ದೆ, ಮತ್ತೂಮ್ಮೆ ಸ್ಕಾಲರ್‌ಶಿಪ್ ಸಿಕ್ಕಿತು.
ಇಪ್ಪತ್ತೂವರೆ ವರ್ಷಕ್ಕೆ ಚಿನ್ನದ ಪದಕದ ಜೊತೆಗೆ ಎಂಜಿನಿಯರಿಂಗ್ ಮುಗಿಸಿದೆ. ನಂತರ GAIT, BARC, IES, SAIL, MPPSC, SSC-CGL, ISRO ಪರೀಕ್ಷೆ ಪಾಸು ಮಾಡಿದೆ. ಮುಂಬೈನ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್‌ನಿಂದ ಲೆಟರ್ ಕೂಡ ಬಂತು. ಇಂಟರ್‌ವ್ಯೂಗೆ ಹೇಗೆ ತಯಾರಾಗಬೇಕು ಅಂತ ಸೀನಿಯರ್‌ಗಳನ್ನು ಕೇಳಿದಾಗ ಅವರು, “ನೋಡು ಸುರಭಿ, ಇಲ್ಲಿಯವರೆಗೆ ನಮಗೆ ಗೊತ್ತಿರುವವರ್ಯಾರೂ ಆ ಇಂಟರ್‌ವ್ಯೂ ಪಾಸ್ ಮಾಡಿಲ್ಲ. ಸುಮ್ಮನೆ ಮಜಾ ಮಾಡೋಕೆ ಅಂತ ಬೇಕಾದ್ರೆ ಮುಂಬೈಗೆ ಹೋಗು. ಪಾಸ್ ಆಗುವ ಕನಸು ಇಟ್ಕೊàಬೇಡ’ ಅಂದರು. ನಾನು ಛಲ ಬಿಡಲಿಲ್ಲ. ಇಂಟರ್‌ವ್ಯೂ ಪಾಸ್ ಮಾಡಿ ನ್ಯೂಕ್ಲಿಯರ್ ಸೈಂಟಿಸ್ಟ್ ಆಗಿ ಸೇರಿದೆ. ನಂತರ ಐಇಎಸ್ (ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್) ಪರೀಕ್ಷೆ ಬರೆದೆ. ಒಂದು ವರ್ಷದ ನಂತರ ರಿಸಲ್ಟ್ ಬಂತು. ಅದರಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದೆ. ಆ ಮೂಲಕ ಇಂಡಿಯನ್ ರೈಲ್ವೆ ಪ್ರವೇಶ ಪಡೆದು, ಸಿಕಂದರಾಬಾದ್‌ಗೆ ಹೋದೆ.
ನಾನು ಅಧಿಕಾರಿಯಾಗಿದ್ದೆ, ಸಂಬಳ ಬರುತ್ತಿತ್ತು, ಸಮಾಜದ ಮನ್ನಣೆಯೂ ಸಿಕ್ಕಿತ್ತು. ಆದರೂ, ಏನೋ ಕೊರತೆ ಬಾಧಿಸುತ್ತಿತ್ತು. ಆಗ ಅಮ್ಮ, 10ನೇ ತರಗತಿಯಲ್ಲಿದ್ದಾಗ ಪ್ರಕಟವಾದ ನನ್ನ ಸಂದರ್ಶನ ಓದಲು ಹೇಳಿದರು. ಅದರಲ್ಲಿ ನಾನು ನ್ಯೂಸ್‌ಪೇಪರಿನವರ ಮುಂದೆ “ಕಲೆಕ್ಟರ್ ಆಗ್ತಿàನಿ’ ಎಂದಿದ್ದೆ. ಆ ಕನಸನ್ನು ಪೂರೈಸಲು ಮನಸ್ಸು ಮತ್ತೆ ಹಠತೊಟ್ಟಿತು.
ಯುಪಿಎಸ್‌ಸಿ ಬರೆಯುವುದು ಸುಲಭದ ಮಾತಲ್ಲ. 24 ಗಂಟೆಯನ್ನೂ ಓದಿಗಾಗಿಯೇ ಮೀಸಲಿಡುವ ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ. ಆದರೆ, ನನಗೆ ಕೆಲಸದ ಮಧ್ಯೆ ಸಿಗುತ್ತಿದ್ದುದೇ 3-4 ಗಂಟೆ. ಅದರಲ್ಲಿಯೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆ. ಮೊಬೈಲ್, ಟ್ಯಾಬ್, ಆನ್‌ಲೈನೇ ನನ್ನ ಐಎಎಸ್ ಗುರುಗಳು. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 50ನೇ ರ್‍ಯಾಂಕ್ ಪಡೆದೆ. ಇದು ನನ್ನ ಕಥೆ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಪರಿಶ್ರಮವೊಂದೇ ಸಕ್ಸಸ್ ಮಂತ್ರ. ಇಂಗ್ಲಿಷ್‌ಗೆ ಹೆದರಿ ನಾನವತ್ತು ಹಳ್ಳಿಗೆ ವಾಪಸಾಗಿದ್ದರೆ ನನಗಿಂದು ಯಾವ ಅಸ್ತಿತ್ವವೂ ಇರುತ್ತಿರಲಿಲ್ಲ.
ಸುರಭಿ ಗೌತಮ್
ಕಲಿಕೆಗಾಗಿ ಕೈ ಎತ್ತಿ
ಅದೊಂದು ಪ್ರೌಢಶಾಲೆ. ಸುಮಾರು ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಶಿಕ್ಷಕನೊಬ್ಬ ಪಾಠ ಮಾಡುತ್ತಿದ್ದಾನೆ. ಅದರಲ್ಲೇನು ವಿಶೇಷ? ಆತ ವಿದ್ಯಾರ್ಥಿಗಳು ಕೈಇಟ್ಟಿರುವ ಡೆಸ್ಕಿನ ಎತ್ತರಕ್ಕಿದ್ದಾನೆ. ಅದರಲ್ಲೂ ಏನೂ ವಿಶೇಷ ತೋರಲಿಲ್ಲವಾ? ಆ ಶಿಕ್ಷಕ ನಿಸ್ತೇಜಗೊಂಡಿರುವ ತನ್ನ ಮೊಂಡುಗಾಲುಗಳನ್ನು ನೆಲದ ಮೇಲೆ ಹರವಿ, ಅವನ್ನೇ ಸ್ಟೂಲ್‌ನಂತೆ ಬಳಸಿ ಅದರ ಮೇಲೆ ಕುಳಿತು ಎತ್ತರಕ್ಕಿರುವ ಬೋರ್ಡ್ ಮೇಲೆ ಬರೆಯಲು ಚಾಕ್‌ಪೀಸನ್ನು ಚಾಚಿದ್ದಾನೆ. ಇವರ ಹೆಸರು ಸಂಜಯ್ ಸೇನ್. ರಾಜಸ್ತಾನದ ಹಳ್ಳಿಯೊಂದರ ಸರ್ಕಾರಿ ಶಾಲೆಯ ಶಿಕ್ಷಕ. ರಾಜ್ಯ ಶಿಕ್ಷಣ ಅಭಿಯಾನದಡಿ, 2009ರಿಂದ ಅವರು ಈ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಸಂಜಯ್ ಪಾಠ ಮಾಡುತ್ತಿರುವ ಈ ಚಿತ್ರ ನೋಡುತ್ತಿದ್ದರೇ ನಮಗೆ ತಿಳಿಯಂತೆಯೇ ಅವರತ್ತ ಹೆಮ್ಮೆಯ ಭಾವನೆಯೊಂದು ಸುಳಿಯುತ್ತದೆ. ಶಿಕ್ಷಣವೆಂದರೆ ಬರೀ ಪಾಠ ಮಾಡುವುದಲ್ಲ ಅದಕ್ಕೂ ಮಿಗಿಲಾದುದು ಎಂಬ ಸತ್ಯ ಗೋಚರವಾಗುತ್ತದೆ.