ವೆಲ್ಲಿಂಗ್ಟನ್: ಆರಂಭಕಾರ ಟಾಮ್ ಲ್ಯಾಥಂ ಅವರ ಅಜೇಯ 264 ರನ್ ಸಾಹಸದಿಂದ ಪ್ರವಾಸಿ ಶ್ರೀಲಂಕಾ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಜಯದತ್ತ ದಾಪುಗಾಲಿಕ್ಕಿದೆ.
296 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿರುವ ಶ್ರೀಲಂಕಾ 3ನೇ ದಿನದ ಆಟದ ಅಂತ್ಯಕ್ಕೆ 20 ರನ್ನಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಟದಲ್ಲಿದೆ. ಲಂಕೆಯ 282 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಿತ್ತ ನ್ಯೂಜಿಲ್ಯಾಂಡ್ 578 ರನ್ ಪೇರಿಸಿತು.
2ಕ್ಕೆ 311 ರನ್ ಮಾಡಿದಲ್ಲಿಂದ ಸೋಮವಾರದ ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್, ಪ್ರವಾಸಿ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಹೋಯಿತು. ಲ್ಯಾಥಂ ಅವರಂತೂ ಕೊನೆಯ ತನಕ ಒಗಟಾಗಿಯೇ ಕಾಡಿದರು. 121 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅವರು 264ರ ತನಕ ಸಾಗಿ ಔಟಾಗದೆ ಉಳಿದರು. ಇದು ಲ್ಯಾಥಂ ಅವರ 7ನೇ ಶತಕವಾಗಿದ್ದು, ಮೊದಲ ಡಬಲ್ ಸೆಂಚುರಿ ಸಂಭ್ರಮವಾಗಿದೆ. 489 ಎಸೆತ ನಿಭಾಯಿಸಿದ ಲ್ಯಾಥಂ 21 ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು.
50 ರನ್ ಮಾಡಿದ್ದ ರಾಸ್ ಟಯ್ಲರ್ ಅದೇ ಮೊತ್ತಕ್ಕೆ ಔಟಾದರು. ಹೆನ್ರಿ ನಿಕೋಲ್ಸ್ (50), ಗ್ರ್ಯಾಂಡ್‌ಹೋಮ್ (49) ಅವರಿಂದ ಲ್ಯಾಥಂಗೆ ಉತ್ತಮ ಬೆಂಬಲ ಲಭಿಸಿತು. ನಾಯಕ ಕೇನ್ ವಿಲಿಯಮ್ಸನ್ 91 ರನ್ ಮಾಡಿದ್ದರು. ಲಂಕಾ ಪರ ಲಹಿರು ಕುಮಾರ 4, ದಿಲುÅವಾನ್ ಪೆರೆರ ಮತ್ತು ಧನಂಜಯ ಡಿ’ಸಿಲ್ವ ತಲಾ 2 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-282 ಮತ್ತು 3 ವಿಕೆಟಿಗೆ 20. ನ್ಯೂಜಿಲ್ಯಾಂಡ್-578.