Advertisement

ವೆಲ್ಲಿಂಗ್ಟನ್‌ ಟೆಸ್ಟ್‌: ನ್ಯೂಜಿಲ್ಯಾಂಡ್‌-ಶ್ರೀಲಂಕಾ, ಪಂದ್ಯ ಡ್ರಾ

06:15 AM Dec 20, 2018 | Team Udayavani |

ವೆಲ್ಲಿಂಗ್ಟನ್‌: ಕುಸಲ್‌ ಮೆಂಡಿಸ್‌ ಮತ್ತು ಏಂಜೆಲೊ ಮ್ಯಾಥ್ಯೂಸ್‌ ಅವರ ಅಜೇಯ ಜತೆಯಾಟದಿಂದ ಹೋರಾಟದ ಹಾದಿ ಹಿಡಿದಿದ್ದ ಶ್ರೀಲಂಕಾವನ್ನು ಅಂತಿಮ ದಿನ ಮಳೆ ಬಚಾಯಿಸಿದೆ. ಇದರೊಂದಿಗೆ ನ್ಯೂಜಿಲ್ಯಾಂಡ್‌ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ನಿರೀಕ್ಷೆಗೆ ವ್ಯತಿರಿಕ್ತವಾಗಿ ಡ್ರಾದಲ್ಲಿ ಅಂತ್ಯಗೊಂಡಿದೆ.

Advertisement

ಅಂತಿಮ ದಿನವಾದ ಬುಧವಾರ ಸಾಧ್ಯವಾದದ್ದು 13 ಓವರ್‌ಗಳ ಆಟ ಮಾತ್ರ. ಆಗ ಶ್ರೀಲಂಕಾ 3 ವಿಕೆಟಿಗೆ 287 ರನ್‌ ಮಾಡಿತ್ತು. ಅಂದರೆ ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 9 ರನ್‌ ಗಳಿಸಬೇಕಿತ್ತು. ಆಗ ಸುರಿದ ಭಾರೀ ಮಳೆಯಿಂದ ಆಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

296 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ 3ನೇ ದಿನದ ಆಟದಲ್ಲಿ 13 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಸಂಕಟಪಡುತ್ತಿತ್ತು. ಆದರೆ ಮೆಂಡಿಸ್‌-ಮ್ಯಾಥ್ಯೂಸ್‌ ದಿಟ್ಟ ಹೋರಾಟವೊಂದನ್ನು ನಡೆಸಿ 4ನೇ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡು ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದರು. 4ನೇ ದಿನದ ಅಂತ್ಯಕ್ಕೆ ಲಂಕಾ 259 ರನ್‌ ಪೇರಿಸಿತ್ತು. ಇಬ್ಬರೂ ಅಜೇಯ ಶತಕ ಬಾರಿಸಿ ಮೆರೆದಿದ್ದರು.

ಪಂದ್ಯ ಕೊನೆಗೊಂಡಾಗ ಮೆಂಡಿಸ್‌ ಅಜೇಯ 141 ರನ್‌ (335 ಎಸೆತ, 16 ಬೌಂಡರಿ) ಮತ್ತು ಮ್ಯಾಥ್ಯೂಸ್‌ ಅಜೇಯ 120 ರನ್‌ (2323 ಎಸೆತ, 11 ಬೌಂಡರಿ) ಮಾಡಿದ್ದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 274 ರನ್‌ ಹರಿದು ಬಂತು. ಆರಂಭಕಾರ ಟಾಮ್‌ ಲ್ಯಾಥಂ ಅವರ ಅಜೇಯ 264 ರನ್‌ ಸಾಹಸದಿಂದ ನ್ಯೂಜಿಲ್ಯಾಂಡ್‌ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲುವ ಹಂತಕ್ಕೆ ಬಂದಿತ್ತು.

ದಶಕದ ಬಳಿಕ ಕ್ರೀಸ್‌ ಆಕ್ರಮಣ
ಸರಿಯಾಗಿ ಒಂದು ದಶಕದ ಬಳಿಕ ಕ್ರಿಕೆಟ್‌ ಜೋಡಿಯೊಂದು ದಿನವಡೀ ಕ್ರೀಸ್‌ ಆಕ್ರಮಿಸಿಕೊಂಡ ಸಾಹಸಕ್ಕೆ ಮೆಂಡಿಸ್‌-ಮ್ಯಾಥ್ಯೂಸ್‌ ನಿದರ್ಶನ ಒದಗಿಸಿದರು. ಬಾಂಗ್ಲಾದೇಶ ವಿರುದ್ಧದ 2008ರ ಚಿತ್ತಗಾಂಗ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌-ನೀಲ್‌ ಮೆಕೆಂಜಿ ಈ ಸಾಧನೆಗೈದಿದ್ದರು. ಆದರೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ಇತಿಹಾಸದ ಪೂರ್ತಿ ದಿನದ ಆಟದಲ್ಲಿ ಯಾವುದೇ ವಿಕೆಟ್‌ ಉರುಳದೇ, ಇಬ್ಬರೇ ಕ್ರೀಸ್‌ ಆಕ್ರಮಿಸಿಕೊಂಡ ಮೊದಲ ದೃಷ್ಟಾಂತ ಇದಾಗಿದೆ.

Advertisement

ಲಂಕೆಯ ಈ ಜೋಡಿ ಮುರಿಯದ 4ನೇ ವಿಕೆಟ್‌ ಜತೆಯಾಟದ ವೇಳೆ 652 ಎಸೆತಗಳನ್ನು ನಿಭಾಯಿಸಿತು. ಇದು ಎಸೆತಗಳ ಲೆಕ್ಕಾಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಇತಿಹಾಸದ 3ನೇ ಸುದೀರ್ಘ‌ ಜತೆಯಾಟವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2006ರ ಕೊಲಂಬೊ ಟೆಸ್ಟ್‌ ಪಂದ್ಯದಲ್ಲಿ ಜಯವರ್ಧನ-ಸಂಗಕ್ಕರ ಜೋಡಿ 624 ರನ್‌ ಜತೆಯಾಟದ ವೇಳೆ 942 ಎಸೆತ ನಿಭಾಯಿಸಿದ್ದು ದಾಖಲೆ.

ಸರಣಿಯ 2ನೇ ಟೆಸ್ಟ್‌ ಡಿ. 26ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-282 ಮತ್ತು 3 ವಿಕೆಟಿಗೆ 287. ನ್ಯೂಜಿಲ್ಯಾಂಡ್‌-578. ಪಂದ್ಯಶ್ರೇಷ್ಠ: ಟಾಮ್‌ ಲ್ಯಾಥಂ.

Advertisement

Udayavani is now on Telegram. Click here to join our channel and stay updated with the latest news.

Next