ದಾವಣಗೆರೆ: ಮುಂದಿನ 2018ರ ಜ. 18 ರಂದು ಶ್ರೀಕೃಷ್ಣಪೂಜಾ ಪರ್ಯಾಯಕ್ಕಾಗಿ ಎರಡನೇ ಬಾರಿ ಉಡುಪಿಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳು ಕೈಗೊಂಡಿರುವ ಪರ್ಯಾಯ ಸಂಚಾರ ಅಂಗವಾಗಿ ಭಾನುವಾರ ದಾವಣಗೆರೆ ಆಗಮಿಸಿದರು.
ದಾವಣಗೆರೆಯಲ್ಲಿ ಮಾ. 13 ರಿಂದ 15ರ ವರೆಗೆ ನಡೆಯುವ ಸಂಸ್ಥಾನ ಪೂಜೆ, ಭಕ್ತರ ಮನೆಯಲ್ಲಿ ಪಾದಪೂಜೆ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳು ರಾಂ ಅಂಡ್ ಕೋ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಭಕ್ತಾದಿಗಳು ಹರ್ಷೋದ್ಘಾರದ ಸ್ವಾಗತ ಕೋರಿದರು.
ಜಯಕಾರ ಮೊಳಗಿಸಿದರು. ಶಾಸಕ ಶಾಮನೂರು ಶಿವಶಂಕರಪ್ಪ, ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಪರ್ಯಾಯ ಸಂಚಾರ ಸ್ವಾಗತ ಸಮಿತಿಯ ಕಂಪ್ಲಿ ಗುರುರಾಜಾಚಾರ್, ಕರುಣಾಕರಶೆಟ್ಟಿ, ಉಮೇಶ್ ಶೆಟ್ಟಿ, ಅನಿಲ್ ಬಾರೆಂಗಳ್, ಶೇಷಾಚಲ್ ಸ್ವಾಗತಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಶ್ರೀಗಳಿಗೆ ರೇಷ್ಮೆ ಶಾಲು ಹಾಕುವ ಮೂಲಕ ಆತೀಯ ಸ್ವಾಗತ ಕೋರಿದರು. ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳನ್ನು ಭವ್ಯ ರಥದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ಕೃಷ್ಣ ಕಲಾ ಮಂದಿರದವರೆಗೆ ಕರೆದೊಯ್ಯಲಾಯಿತು.
ರಾತ್ರಿ 8ಕ್ಕೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳು ತೊಟ್ಟಿಲಪೂಜೆಯಲ್ಲಿ ಪಾಲ್ಗೊಂಡರು. ಸೋಮವಾರ ಬೆಳಗ್ಗೆ 8 ರಿಂದ 11ರ ವರೆಗೆ ಭಕ್ತರ ಮನೆಗಳಲ್ಲಿ ಪಾದಪೂಜೆ, 11.30ಕ್ಕೆ ಸಂಸ್ಥಾನಪೂಜೆಯಲ್ಲಿ ಭಾಗವಹಿಸಿ, ಆಶೀರ್ವಚನ ನೀಡುವರು. ಭಿಕ್ಷಾ, ಫಲಮಂತ್ರಾಕ್ಷತೆ ನಂತರ ಸಂಜೆ 6.3ರಿಂದ ವಿವಿಧ ಭಕ್ತರ ಮನೆಯಲ್ಲಿ ತೊಟ್ಟಿಲಪೂಜೆಯಲ್ಲಿ ಪಾಲ್ಗೊಳ್ಳುವರು.