Advertisement
ಚಾಗೋಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಸಣ್ಣ ದ್ವೀಪ ಸಮೂಹ. ಇಲ್ಲಿ ಸುಮಾರು 56 ದ್ವೀಪಗಳಿವೆ. ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣವೇ 56 ಚ.ಕಿ.ಮೀ. ಇದು ಭಾರತದಿಂದ ಸುಮಾರು 3000 ಕಿ.ಮೀ. ದೂರದಲ್ಲಿದೆ. ಮಾರಿಷಸ್‌ನಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ. ದೂರದಲ್ಲಿದ್ದು, ಬ್ರಿಟಿಷರ ವಸಾಹತಾಗಿತ್ತು. ಇದೀಗ ಬ್ರಿಟನ್ ಇದನ್ನು ಮಾರಿಷಸ್ ಒಡೆತನಕ್ಕೆ ಬಿಟ್ಟುಕೊಟ್ಟಿದೆ. ಇಲ್ಲಿ ವಾಸಿಸುತ್ತಿದ್ದ ಜನರನ್ನು ಚಾಗೋಸಿಯನ್ಸ್ ಎಂದು ಗುರುತಿಸಲಾಗುತ್ತಿತ್ತು. ಆದರೆ ಈಗ ಇಲ್ಲಿ ಕೇವಲ ಬ್ರಿಟನ್ ಹಾಗೂ ಅಮೆರಿಕದ ಜನ ವಾಸಿಸುತ್ತಿದ್ದಾರೆ.
ಭಾರತವನ್ನು ಹುಡುಕಿಕೊಂಡು ಹೊರಟ ಫ್ರೆಂಚ್ ಸಮುದ್ರಯಾನಿಗಳಲ್ಲಿ ಕೆಲವರು ಮೊದಲಿಗೆ ಈ ದ್ವೀಪ ಸಮೂಹ ತಲುಪಿದರು. ಜನರೇ ಇಲ್ಲದೇ ತೆಂಗಿನ ಮರಗಳಿಂದ ತುಂಬಿದ್ದ ದ್ವೀಪಕ್ಕೆ ಭಾರತ ಹಾಗೂ ಆಫ್ರಿಕಾದಿಂದ ಗುಲಾಮರನ್ನು ಹೊತ್ತಯ್ದು, ತೆಂಗಿನ ತೋಟದ ಪ್ರಮಾಣವನ್ನು ಹೆಚ್ಚಿಸಿದರು. ಇದಾದ ಬಳಿಕ 1814ರಲ್ಲಿ ಬ್ರಿಟನ್ ಜತೆ ನಡೆದ ಪ್ಯಾರಿಸ್ ಒಪ್ಪಂದದ ಬಳಿಕ ಫ್ರಾನ್ಸ್ ಈ ದ್ವೀಪ ಸಮೂಹವನ್ನು ಬ್ರಿಟನ್‌ಗೆ ಬಿಟ್ಟುಕೊಟ್ಟಿತು. 1966ರಲ್ಲಿ ಬ್ರಿಟಿಷ್ ಇಂಡಿಯನ್ ಸಮುದ್ರ ಯೋಜನೆ ಜಾರಿ ಮಾಡಿದ ಬ್ರಿಟನ್ ಇಲ್ಲಿ ಸೇನಾನೆಲೆ ಸ್ಥಾಪನೆ ಮಾಡಿತು. ಇದಕ್ಕಾಗಿ 1966ರಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತು. 1967ರಲ್ಲಿ ಭೂಮಿಯನ್ನು ವಶಪಡಿಸಿಕೊಂಡು, ಇಲ್ಲದ್ದ ಸ್ಥಳೀಯರನ್ನು ಓಡಿಸಿತು. ಇವರೆಲ್ಲರೂ ಮಾರಿಷಸ್ ಹಾಗೂ ಬ್ರಿಟನ್‌ನಲ್ಲಿ ನೆಲೆ ಕಂಡುಕೊಂಡರು. ಬ್ರಿಟನ್‌ನಿಂದ ಮಾರಿಷಸ್‌ಗೆ ಸ್ವಾತಂತ್ರ್ಯ ದೊರೆತ ಬಳಿಕ ಈ ದ್ವೀಪ ಸಮೂಹವನ್ನು ಬ್ರಿಟಿಷರು ತಮ್ಮಲ್ಲೇ ಉಳಿಸಿಕೊಂಡಿದ್ದರು. ಇದಕ್ಕಾಗಿ ಮಾರಿಷಸ್‌ಗೆ 3 ಮಿಲಿಯನ್ ಪೌಂಡ್ ಹಣ ನೀಡಿದ್ದರು.
Related Articles
ಸುಮಾರು 3000 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಚಾಗೋಸ್ ದ್ವೀಪ ಸಮೂಹದ ಪ್ರಮುಖ ಆದಾಯದ ಮೂಲವೆಂದರೆ ತೆಂಗು ಹಾಗೂ ಮೀನುಗಾರಿಕೆ. ಆದರೆ ಇಲ್ಲಿ ಇರುವವರಲ್ಲಿ ಬಹುತೇಕರು ಬ್ರಿಟನ್ ಹಾಗೂ ಅಮೆರಿಕ ಸೇನೆಗೆ ಸೇರಿದವರಾಗಿದ್ದು, ಡಿಯಾಗೋ ಗ್ರಾಸಿಯಾ ದ್ವೀಪದಲ್ಲಿರುವ ಬ್ರಿಟನ್ ಹಾಗೂ ಅಮೆರಿಕ ಸೇನಾನೆಲೆಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇಲ್ಲಿ ವಾಸಿಸುತ್ತಿದ್ದ ಸ್ಥಳೀಯರನ್ನು 1971ರ ಒಪ್ಪಂದದ ಬಳಿಕ ಒಕ್ಕಲೆಬ್ಬಿಸಲಾಗಿತ್ತು. ಹೀಗಾಗಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈನಿಕರು ಹಾಗೂ ಅವರ ಕುಟುಂಬದವರೇ ಉಳಿದುಕೊಂಡಿದ್ದಾರೆ.
Advertisement
ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಕಣ್ಣಿಡಲು ಡಿಯಾಗೋದಲಿ ಸೇನಾನೆಲೆಚಾಗೋಸ್ ದ್ವೀಪ ಸಮೂಹ ಹಿಂದೂ ಮಹಾಸಾಗರ ಮಧ್ಯಭಾಗದಲ್ಲಿದ್ದು, ಬಹುತೇಕ ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳು ಈ ದ್ವೀಪ ಸಮೂಹದ ಸುತ್ತಲೇ ಇವೆ. ಹೀಗಾಗಿ ಸುಮಾರು 2 ಕಿ.ಮೀ. ವಿಸ್ತೀರ್ಣ ಹೊಂದಿರುವ ಡಿಯಾಗೋ ಗ್ರಾಸಿಯಾದಲ್ಲಿ ಬ್ರಿಟನ್ ಹಾಗೂ ಅಮೆರಿಕ ಒಟ್ಟಾಗಿ ಸೇನಾ ನೆಲೆಯನ್ನು ಸ್ಥಾಪನೆ ಮಾಡಿವೆ. ಅಲ್ಲದೆ ಹಿಂದೂ ಮಹಾಸಾಗರದ ಸಮೀಪದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಈ ಸೇನಾನೆಲೆ ಅವುಗಳಿಗೆ ಅವಶ್ಯಕವಾಗಿದೆ. ಅಫ್ಘಾನಿಸ್ಥಾನದಲ್ಲಿ ಅಮೆರಿಕ ಕೈಗೊಂಡಿದ್ದ ಕಾರ್ಯಾಚರಣೆ ಮೇಲೆ ಕಣ್ಣಿಡಲು ಅಮೆರಿಕ ಈ ಸೇನಾ ನೆಲೆಯನ್ನು ಬಳಸಿಕೊಳ್ಳಲಾಗಿತ್ತು.
1980ರ ದಶಕದ ಆರಂಭದಲ್ಲಿ ಮಾರಿಷಸ್ ಮತ್ತೂಮ್ಮೆ ಚಾಗೋಸ್ ದ್ವೀಪದ ಮೇಲೆ ತನ್ನ ಹಕ್ಕು ಇರುವುದನ್ನು ಪ್ರತಿಪಾದಿಸಿತು. 1968ರಲ್ಲಿ ಬಲಾತ್ಕಾರದಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ವಾದಿಸಿತು. ಪ್ರತಿ ಬಾರಿಯೂ ಮಾರಿಷಸ್‌ಗೆ ಬೆಂಬಲವಾಗಿ ನಿಂತ ಭಾರತ ಚಾಗೋಸ್ ದ್ವೀಪಗಳ ಮೇಲೆ ಮಾರಿಷಸ್ ಸಂಪೂರ್ಣ ಹಕ್ಕುದಾರ ಎಂದು ವಾದಿಸಿತು. ಎಂತಹದ್ದೇ ಪರಿಸ್ಥಿತಿಯಲ್ಲಿ ಮಾರಿಷಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವರು ಒತ್ತಿ ಹೇಳಿದ್ದರು. ಚಾಗೋಸ್ ದ್ವೀಪದ ಒಡೆತನಕ್ಕೆ ಸಂಬಂಧಿಸಿದಂತೆ ಮಾರಿಷಸ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಾಗ ಭಾರತ ಸಹಾಯ ಮಾಡಿತು. 2017ರಲ್ಲಿ ಭಾರತದ ಮಾತುಕತೆ ಬಳಿಕ ಚಾಗೋಸ್ ದ್ವೀಪದ ಒಡೆತನ ನಿರ್ಧಾರ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮನವಿ ಮಾಡಿತು. 2019ರಲ್ಲಿ ತೀರ್ಪು ಪ್ರಕಟಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ಅಲ್ಲಿನ ಸ್ಥಳೀಯ ಜನರ ಒಪ್ಪಿಗೆಯೊಂದಿಗೆ ಚಾಗೋಸ್ ದ್ವೀಪವನ್ನು ಬ್ರಿಟನ್ ವಶಪಡಿಸಿಕೊಂಡಿಲ್ಲ. ಹೀಗಾಗಿ ಇದು ಅಕ್ರಮ ಎಂದು ಹೇಳಿತು. 2022ರಿಂದ ಭಾರತ ಹಾಗೂ ಮಾರಿಷಸ್ ಬ್ರಿಟನ್ ಜತೆ ನಿರಂತರ ಸಭೆ ನಡೆಸುವ ಮೂಲಕ ಒಡೆತನ ಬಿಟ್ಟುಕೊಡಲು ಬ್ರಿಟನ್ ಒಪ್ಪಿಕೊಳ್ಳುವಂತೆ ಮಾಡಿದವು. ಅಕ್ಟೋಬರ್ ಆರಂಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟನ್, ಚಾಗೋಸ್ ಒಡೆತನವನ್ನು ಮಾರಿಷಸ್‌ಗೆ ಬಿಟ್ಟುಕೊಟ್ಟಿತು. ಆದರೆ, 99 ವರ್ಷಗಳ ಅವಧಿಗೆ ಇಲ್ಲಿರುವ ಸೇನಾನೆಲೆಯಲ್ಲಿ ಬ್ರಿಟನ್ ಕಾರ್ಯನಿರ್ವಹಿಸಲಿದೆ. ಚಾಗೋಸ್ ದ್ವೀಪ ಭಾರತಕ್ಕೇಕೆ ಮುಖ್ಯ?
ಚಾಗೋಸ್ ದ್ವೀಪಕ್ಕೆ ಸ್ವಾತಂತ್ರ್ಯ ಕೊಡಿಸಲು ಭಾರತ ಸಾಕಷ್ಟು ಶ್ರಮ ಹಾಕಿದೆ. ಭಾರತದಿಂದ 3,000 ಕಿ.ಮೀ. ದೂರದಲ್ಲಿರುವ ಅದು ಕೇವಲ 56 ಕಿ.ಮೀ. ವಿಸ್ತೀರ್ಣದ ಪುಟ್ಟ ಜಾಗಕ್ಕೆ ಭಾರತ ಏಕಿಷ್ಟು ಆಸಕ್ತಿ ವಹಿಸಿದೆ ಎಂಬುದು ಅಚ್ಚರಿಕ ಮೂಡಿಸಬಹುದು. ಮಾಲ್ದೀವ್ಸ್ ನಲ್ಲಿ ಸೇನಾ ನೆಲೆ ಕಳೆದುಕೊಂಡ ಬಳಿಕ ಹಿಂದೂ ಮಹಾಸಾಗರ ಭಾರತಕ್ಕೆ ದೂರ ಎನಿಸಿಕೊಂಡಿದೆ. ಅಲ್ಲದೇ ಚಾಗೋಸ್ ದ್ವೀಪ ಹಿಂದೂ ಮಹಾಸಾಗರದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಸೇನಾನೆಲೆ ಸ್ಥಾಪಿಸಲು ಭಾರತಕ್ಕೆ ಅವಕಾಶ ದೊರೆತರೆ, ಹಿಂದೂ ಮಹಾಸಾಗರದ ಮೇಲಿನ ಒಡೆತನ ಹೆಚ್ಚಾಗಲಿದೆ. ಹೀಗಾಗಿಯೇ ಭಾರತ ಈ ಒಪ್ಪಂದಕ್ಕೆ ಬೆಂಬಲ ಸೂಚಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಅಲ್ಲದೆ ಚೀನ ಹಿಂದೂ ಮಹಾಸಾಗರದಲ್ಲಿ ತನ್ನ ನೆಲೆ ಸ್ಥಾಪಿಸಿಕೊಳ್ಳಲು ಹೆಚ್ಚಿನ ಗಮನ ವಹಿಸುತ್ತಿರುವುದು ಭಾರತಕ್ಕೆ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆ ಇದ್ದು, ಭಾರತ ಹೆಚ್ಚಿನ ಸುರಕ್ಷೆಯನ್ನು ನೋಡಿಕೊಳ್ಳುತ್ತಿದೆ ಎನ್ನಲಾಗಿದೆ. ಭಾರತ ಮತ್ತು ಮಾರಿಷಸ್ ನಡುವೆ ಉತ್ತಮ ಸಂಬಂಧ
ಭಾರತ ಮತ್ತು ಮಾರಿಷಸ್ ನಡುವೆ ಉತ್ತಮ ಬಾಂಧವ್ಯವಿದ್ದು, ಉಭಯ ದೇಶಗಳ ಅತ್ಯುನ್ನತ ನಾಯಕರು ನಿಯಮಿತವಾಗಿ ಪರಸ್ಪರ ಭೇಟಿ ಮಾಡುತ್ತಲೇ ಇರುತ್ತಾರೆ. 2015 ಮತ್ತು 2019ರಲ್ಲಿ ಪ್ರಧಾನಿ ಮೋದಿ ಮಾರಿಷಸ್‌ಗೆ ಭೇಟಿ ನೀಡಿದ್ದರು. ಅಲ್ಲದೆ ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿರುವ ದೇಶ ಮಾರಿಷಸ್ ಆಗಿದ್ದು, ಉಭಯ ದೇಶಗಳು ಹಲವು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಮಾರಿಷಸ್‌ಗೆ ಭಾರತ ಪೆಟ್ರೋಲಿಯಂ, ಹತ್ತಿ, ಔಷಧ ಮತ್ತು ಮತ್ಸ್ಯಾಹಾರಗಳನ್ನು ರಫ್ತು ಮಾಡಿದರೆ, ವೆನಿಲಾ, ಉಕ್ಕು, ಅಲ್ಯುಮಿನಿಯಂ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ.
-ಗಣೇಶ್ ಪ್ರಸಾದ್