ಮುಂಬಯಿ : ರೋಮ್ ಹೊತ್ತಿ ಉರಿಯುವಾಗ ದೊರೆ ನಿರೋ ಪಿಟೀಲು ಬಾರಿಸುತ್ತಿದ್ದ, ಮನೆಗೆ ಬೆಂಕಿ ಬಿದ್ದಾಗ ಯಾರೋ ಒಬ್ಬ ಬೀಡಿ ಹಚ್ಚಿದನಂತೆ ಇಂತಹ ಗಾದೆಗಳಿಗೆ ಹೊಸತೊಂದು ಸೇರಿಸಬಹುದು ಎನ್ನಬಹುದಾದ ವಿದ್ಯಮಾನ ಮುಂಬಯಿಯಲ್ಲಿ ನಡೆದಿದ್ದು, ವಿಡಿಯೋಗಳು ವೈರಲ್ ಆಗುತ್ತಿವೆ.
ಮದುವೆ ಮನೆಯಲ್ಲಿ ಭರ್ಜರಿ ಬಾಡೂಟ ಉಣ್ಣುವ ವೇಳೆ ಪಕ್ಕದಲ್ಲೇ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಿರಾತಂಕವಾಗಿ ಅತಿಥಿಗಳು ಊಟ ಮುಂದುವರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ಮದುವೆಯ ಅತಿಥಿಗಳು ಸ್ಥಳದಲ್ಲಿ ಬೆಂಕಿ ಸ್ಫೋಟಗೊಳ್ಳುತ್ತಿದ್ದರೂ ಭೋಜನವನ್ನು ಮುಂದುವರಿಸಿದ್ದಾರೆ.
ಅಗ್ನಿಶಾಮಕ ದಳವು ಘಟನೆಯ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, “ಮದುವೆಯ ಪೆಂಡಾಲ್ ಗೆ ಬೆಂಕಿ ಹಿಡಿದರೂ ಅತಿಥಿ ಅದನ್ನು ಪರಿಗಣಿಸದೇ ರುಚಿಕರವಾದ ಊಟವನ್ನು ಹೇಗೆ ತಿನ್ನುತ್ತಿದ್ದಾನೆ ನೋಡಿ ಎಂದು ಬರೆದಿದೆ.
ಅತಿಥಿಗಳಲ್ಲಿ ಒಬ್ಬ ಮಾತ್ರ ಒಂದೆರಡು ಬಾರಿ ತಿರುಗಿ ಬೆಂಕಿಯನ್ನು ನೋಡುತ್ತಿರುವುದನ್ನು ಕಾಣಬಹುದು, ಆದರೆ ಆತ ಬೆಂಕಿಯ ಬಗ್ಗೆ ಕನಿಷ್ಠ ಚಿಂತಿತನಾಗದೆ ಭೂರಿ ಭೂಜನ ಆನಂದಿಸುವುದನ್ನು ಮುಂದುವರೆಸಿದ್ದಾನೆ.
ಮಹಾರಾಷ್ಟ್ರದ ಥಾಣೆಯ ಭಿವಂಡಿಯಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮದುವೆ ವೇಳೆ ಪಟಾಕಿ ಸಿಡಿಸಿದ್ದರಿಂದ ಮದುವೆ ಮಂಟಪದ ಸ್ಟೋರ್ ರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.