Advertisement

ನೇಕಾರರ ಸಾಲಮನ್ನಾ 4 ಜಿಲ್ಲೆಗೆ ಮಾತ್ರ ಅನ್ವಯ!

11:02 PM Feb 19, 2020 | Lakshmi GovindaRaj |

ಬೆಳಗಾವಿ: ಸಾಲಮನ್ನಾ ಘೋಷಣೆ ಅನ್ವಯದಲ್ಲಿ ತಾರ ತಮ್ಯ ನೀತಿಯಿಂದ ಸಾವಿರಾರು ನೇಕಾರ ಕುಟುಂಬಗಳು ಈಗಲೂ ಸೌಲಭ್ಯ ವಂಚಿತವಾಗಿವೆ. ಸಾಲಮನ್ನಾ ಅನುಷ್ಠಾನದಲ್ಲಿ ಗೊಂದಲ, ತಜ್ಞರ ಸಮಿತಿ ಹಾಗೂ ಲೆಕ್ಕ ಪರಿಶೋಧಕರ ನಡುವೆ ಸಮನ್ವಯತೆ ಕೊರತೆ, ಸಾಲಮನ್ನಾದಲ್ಲಿನ ನೀತಿಗಳು ಸೌಲಭ್ಯ ರಾಜ್ಯದ ಕೆಲವೇ ಜಿಲ್ಲೆಗಳ ನೇಕಾರರಿಗೆ ಸೀಮಿತವಾಗುವಂತೆ ಮಾಡಿದೆ.

Advertisement

ರಾಜ್ಯದಲ್ಲಿರುವ ಕೈಮಗ್ಗ, ವಿದ್ಯುತ್‌ ಮಗ್ಗ, ಉಣ್ಣೆ, ರೇಷ್ಮೆ ಹಾಗೂ ಕಂಬಳಿ ನೇಕಾರರು ಸರ್ಕಾರ ಘೋಷಣೆ ಮಾಡಿರುವ ಸಾಲಮನ್ನಾ ಯೋಜನೆ ಫಲಾನುಭವಿಗಳು. ಆದರೆ ಸರ್ಕಾರದ ಗೊಂದಲಮಯ ಆದೇಶ ಹಾಗೂ ತಾಂತ್ರಿಕ ಸಮಸ್ಯೆಯಿಂದ ಎಲ್ಲ ಜಿಲ್ಲೆಗಳ ನೇಕಾರರಿಗೆ ಸಾಲಮನ್ನಾ ಲಾಭ ದೊರೆಯುತ್ತಿಲ್ಲ. ಸಹಕಾರಿ ಸಂಘಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ ನೇಕಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂಬುದು ಗೊಂದಲ ಸೃಷ್ಟಿಸಿದೆ. ಆದರೆ ಈ ಎರಡೂ ಕಡೆಗಳಲ್ಲಿ ಬಹುತೇಕ ನೇಕಾರರು ಸಾಲ ಪಡೆದೇ ಇಲ್ಲ. ಹೀಗಾಗಿ ಲಾಭ ಪಡೆಯದಂತಾಗಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್‌. ಯಡಿಯೂರಪ್ಪ ಅವರು ನೇಕಾರರ 100 ಕೋಟಿ ರೂ.ವರೆಗೆ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಸರ್ಕಾರದ ಘೋಷಣೆಯಂತೆ 2019, ಮಾ.31ರವರೆಗೆ ಸಾಲ ಪಡೆದಿರುವ ನೇಕಾರರಿಗೆ ಇದು ಅನ್ವಯವಾಗಿತ್ತು. ಅಂಕಿ-ಅಂಶಗಳ ಪ್ರಕಾರ ಸುಮಾರು ಏಳು ಲಕ್ಷ ಜನ ವಿದ್ಯುತ್‌ ಹಾಗೂ ಕೈಮಗ್ಗ ನೇಕಾರರಿದ್ದಾರೆ. ಇವರಲ್ಲಿ ಒಂದು ಲಕ್ಷ ಜನರು ಸಾಲ ಪಡೆದಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಸುಮಾರು 60 ಲಕ್ಷ ರೂ. ವರೆಗೆ ಸಾಲಮನ್ನಾ ಆಗಿತ್ತು. ಈಗ ಬಿಜೆಪಿ ಸರ್ಕಾರ ಮಾಡಿರುವ ಘೋಷಣೆಯಿಂದ ಸುಮಾರು 40 ಸಾವಿರ ಕುಟುಂಬಗಳು ಇದರ ಲಾಭ ಪಡೆದುಕೊಳ್ಳಲಿವೆ ಎಂಬದು ನೇಕಾರ ಮುಖಂಡರ ಹೇಳಿಕೆ.

ಲಾಭ ಪಡೆದಿಲ್ಲ: ಮೂಲಗಳ ಪ್ರಕಾರ ಬೆಳಗಾವಿ, ಬಾಗಲಕೋಟೆ, ದೊಡ್ಡಬಳ್ಳಾಪುರ, ಬೆಂಗಳೂರು ನಗರ ಪ್ರದೇಶಗಳಿಗೆ ಮಾತ್ರ ಈ ಸಾಲಮನ್ನಾ ಯೋಜನೆ ಸೀಮಿತವಾಗಿದೆ. ಸಾಕಷ್ಟು ನೇಕಾರರು ಇರುವ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ವಿಜಯ ಪುರ, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಉಡುಪಿ, ಮೈಸೂರು, ಧಾರವಾಡ ಜಿಲ್ಲೆಗಳ ನೇಕಾರರು ಇನ್ನೂ ಇದರ ಲಾಭ ಪಡೆಯಲು ಸಾಧ್ಯವಾಗಿಲ್ಲ.

ಎದುರಾಗಿರುವ ತೊಡಕು: ನೇಕಾರಿಕೆ ಸಹಕಾರಿ ಸಂಘಗಳಲ್ಲಿ ಹಾಗೂ ಡಿಸಿಸಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಯೋಜನೆ ಅನ್ವಯ. ಆದರೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ ನೇಕಾರರಿಗೆ ಸಾಲ ಕೊಟ್ಟೇ ಇಲ್ಲ. ಹೀಗಾಗಿ ಸಾಲಮನ್ನಾಪ್ರಮಾಣ 20 ಕೋಟಿಯನ್ನೂ ದಾಟುವುದಿಲ್ಲ ಎನ್ನುತ್ತಾರೆ ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ಹೊಸದುರ್ಗದ ಜಿ.ತಿಪ್ಪೇಶ.

Advertisement

ತಾಂತ್ರಿಕ ತೊಂದರೆ ಹೇಳುವ ಅಧಿಕಾರಿಗಳು: ನೇಕಾರರ ನೆರವಿಗಾಗಿ ಸಿಎಂ 100 ಕೋಟಿ ಸಾಲಮನ್ನಾ ಘೋಷಿಸಿದ್ದಾರೆ. ಆದರೆ ಇದುವರೆಗೆ ಅರ್ಧದಷ್ಟೂ ಹಣ ಖರ್ಚಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ಸಮಸ್ಯೆ ಮುಂದಿಡುತ್ತಾರೆ. ಇದರಿಂದ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಇದರ ಲಾಭ ಇದುವರೆಗೆ ಸಿಕ್ಕಿಲ್ಲ ಎಂಬುದು ನೇಕಾರರ ಅಸಮಾಧಾನ. ರೈತರಿಗೆ ನೀಡು ವಂತೆ ನೇಕಾರರಿಗೆ ಸಹ ಸಾಲ ನೀಡಬೇಕು ಎಂದು ಡಿಸಿಸಿ ಬ್ಯಾಂಕ್‌ಗಳಿಗೆ ಅನೇಕ ಸಲ ಮನವಿ ಮಾಡಿದ್ದೇವೆ. ಜಾಮೀನು ನೀಡುವವರಿಲ್ಲ ಎಂಬ ಕಾರಣಕ್ಕೆ ಸಾಲ ಸಿಗುತ್ತಿಲ್ಲ. ಆದ್ದರಿಂದ ನೇಕಾರರಿಗೆ ಕಡ್ಡಾಯವಾಗಿ ಸಾಲ ನೀಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಬೇಕು ಎನ್ನುತ್ತಾರೆ ನೇಕಾರ ಮುಖಂಡರು.

ಸರ್ಕಾರ ಸಾಲಮನ್ನಾ ಘೋಷಣೆ ಆದೇಶ ಮಾಡುವ ಮುನ್ನ ನೇಕಾರರ ತಜ್ಞರ ಸಮಿತಿ ಸದಸ್ಯರ ಸಭೆ ಕರೆಯಬೇಕು. ಆದರೆ, ಅದಾಗಿಲ್ಲ. ಲೆಕ್ಕ ಪರಿಶೋಧಕರು ಹಾಗೂ ಜವಳಿ ಇಲಾಖೆ ಮಧ್ಯೆ ಸಮನ್ವಯವಿಲ್ಲ. ಇದರಿಂದ ರಾಜ್ಯದ ನೇಕಾರ ಕುಟುಂಬಗಳಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ದೊರಕುತ್ತಿಲ್ಲ.
-ಪರಶುರಾಮ ಢಗೆ, ಉತ್ತರ ಕರ್ನಾಟಕ ನೇಕಾರ ವೇದಿಕೆ ಕಾರ್ಯದರ್ಶಿ

ನೇಕಾರರ ಸಾಲಮನ್ನಾ ಹಣ ಫ‌ಲಾನುಭ ವಿಗಳಿಗೆ ದೊರಕಿಲ್ಲ. ಡಿಸಿಸಿ ಬ್ಯಾಂಕ್‌ಗಳು ಹಾಗೂ ಸಹಕಾರ ಪತ್ತಿನ ಬ್ಯಾಂಕ್‌ಗಳು ನೇಕಾರ ರಿಗೆ ಸಾಲ ನೀಡದಿರುವುದೇ ಇದಕ್ಕೆ ಕಾರಣ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳು ತಮಗೆ ಸಾಲವನ್ನೇ ನೀಡಿಲ್ಲ.
-ಗಜಾನನ ಗುಂಜೇರಿ, ಬೆಳಗಾವಿ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next