ದೇವದುರ್ಗ: ತಾಲೂಕಿನ ಭೂಮಗುಂಡ ಗ್ರಾಮದಲ್ಲಿ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರ ಹಾಗೂ ಐಸಿಐಸಿಐ ಫೌಂಡೇಶನ್ ಸಹಯೋಗದಲ್ಲಿ ಕೃಷಿ ಕ್ಷೇತ್ರದಲ್ಲಿ ಹವಾಮಾನದ ಪಾತ್ರ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಡಾ| ಗುರುರಾಜ ಸುಂಕದ ಕಾರ್ಯಕ್ರಮ ಉದ್ಘಾಟಿಸಿ, ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ ಹಾಗೂ ಪ್ರಮುಖ ಬೆಳೆಗಳಲ್ಲಿ ಬರುವ ರೋಗಗಳ ಹತೋಟಿ ಕ್ರಮಗಳನ್ನು ವಿವರಿಸಿದರು.
ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಸ್ಥಿತಿಯಲ್ಲಿ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಮಾಡುವುದರಿಂದ ರೈತರು ಉತ್ತಮ ಬೆಳೆ ಬೆಳೆಯಬಹುದು. ಆದಾಯ ದ್ವಿಗುಣಗೊಳ್ಳಲು ಅನುಕೂಲವಾಗುತ್ತದೆ. ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಬೆಳೆಗಳು ಹಾಗೂ ತಳಿಗಳನ್ನು ಆಯ್ಕೆ ಮಾಡಿಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿ ಡಾ| ಉಮೇಶ, ಹವಾಮಾನ ಬದಲಾವಣೆಯ ಪ್ರಕಾರ ಯಾವ ರೀತಿ ಬೇಸಾಯ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು.
ಐಸಿಐಸಿಐನ ಫೌಂಡೇಶನ್‌ನ ಅಧಿಕಾರಿ ನರಸಿಂಹಪ್ಪ ಮಾತನಾಡಿದರು. ಜಿಕೆಎಂಎಸ್ ವಿಭಾಗದ ಡಾ| ಶಾಂತಪ್ಪ ದುತ್ತರಗಾಂವಿ, ಭಾರತೀಯ ಹವಾಮಾನದ ಇಲಾಖೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಭಾಗಿತ್ವದಲ್ಲಿ ಹವಾಮಾನದ ಮುನ್ಸೂಚನೆಗೆ ಆವಿಷ್ಕರಿಸಿರುವ ಮೆಘದೂತ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ ವಿವರಿಸಿದರು.
ರೈತರು ದಿನನಿತ್ಯದ ಕೃಷಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಎಲ್ಲ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ಇದರಲ್ಲಿ ಮುಂದಿನ ಐದು ದಿನದ ಮಳೆಯ, ಗರಿಷ್ಠ-ಕನಿಷ್ಠ ತಾಪಮಾನ, ಆದ್ರìತೆ, ಗಾಳಿಯ ವೇಗ, ಗಾಳಿಯ ದಿಕ್ಕು, ಬಿಸಿಲಿನ ಪ್ರಖರತೆ, ಹವಾಮಾನದ ಮುನ್ಸೂಚನೆಯ ಅನುಸಾರವಾಗಿ ರೈತರು ಕೈಗೊಳ್ಳಬೇಕಾದ ಕೃಷಿ ಸಲಹೆಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಈ ತರಬೇತಿಯಲ್ಲಿ 40 ಜನ ರೈತರು ಪಾಲ್ಗೊಂಡು ತಾಂತ್ರಿಕ ಮಾಹಿತಿ ಪಡೆದರು.