ಬೆಂಗಳೂರು: ಬೊಮ್ಮಾಯಿ ಏನು ವೇದಾಂತಿಯಾ? ಬೊಮ್ಮಾಯಿ ಹೇಳುವುದನ್ನು ಕೇಳಬೇಕಾ, ನಾನು? ಬೊಮ್ಮಾಯಿಗಿಂತ ಹಿರಿಯವ ನಾನು, ಬಿಜೆಪಿಯವರ ಮನಸ್ಥಿತಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಪಕ್ಷವಾಗಿರಲು ನೈತಿಕತೆ ಇಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಆದರೂ ಸುಮ್ಮನೆ ಕೂರಬೇಕಾ? ಇದರ ಬಗ್ಗೆ ಕೇಳಿದರೆ ಜವಾಬ್ದಾರಿ ಇಲ್ಲ ಅಂತಾರೆ. ರಾಷ್ಟ್ರಧ್ವಜ ಕ್ಕೆ ಅಗೌರವ ಮಾಡೋದು ದೇಶ ಭಕ್ತಿನಾ? ಅಂಥವರು ಸಚಿವರಾಗಿ ಇರಬೇಕಾ? ಬಿಜೆಪಿ ಯಾವತ್ತೂ ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದವರಲ್ಲ. ಅವರಿಗೆ ತ್ರಿವರ್ಣ ಧ್ವಜದ ಮಹತ್ವ ಗೊತ್ತಿಲ್ಲ. ಅವರಿಂದ ನಾವು ದೇಶಭಕ್ತಿ ಬಗ್ಗೆ ಕಲಿಯುವ ಅಗತ್ಯವಿಲ್ಲಎಂದು ಕಿಡಿಕಾರಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದವರು ಅವರಿಂದ ಕಲಿಯಬೇಕಾ? ನಮ್ಮ ಹೋರಾಟ ಮುಂದುವರೆಯಲಿದೆ. ಇದಾದ ಮೇಲೆ ನಾವು ಜನರ ಬಳಿ ಹೋಗುತ್ತೇವೆ. ಅವರು ಸಂವಿಧಾನಕ್ಕೆ ವಿರುದ್ದ ಇರುವವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹೆಚ್ಚಿದ ಉದ್ವಿಗ್ನತೆ: ಪುತಿನ್ ಗೆ ಕರೆ ಮಾಡಿ ಮಾತುಕತೆಗೆ ಕರೆದ ಉಕ್ರೇನ್ ಅಧ್ಯಕ್ಷ ?
ಇದೇ 25 ರಂದು ದೆಹಲಿಯಲ್ಲಿ ಸಭೆ ಕರೆದಿದ್ದಾರೆ, ನಾನು, ಕೆಲವು ಹಿರಿಯ ನಾಯಕರನ್ನು ಕರೆದಿದ್ದಾರೆ, ಸಭೆಗೆ ನಾವೆಲ್ಲ ಹೋಗುತ್ತಿದ್ದೇವೆ, ಮುಂದಿನ ಚುನಾವಣೆ ಬಗ್ಗೆ ಚರ್ಚೆಗೆ ಕರೆದಿದ್ದಾರೆ ಎಂದರು.
ಮೊದಲಿಂದಲೂ ಇರುವ ಸಂಪ್ರದಾಯಕ್ಕೆ ಅವಕಾಶ ಕೊಡಲಿ
ಆಯಾಯಾ ಸಂಸ್ಕೃತಿ, ಸಂಪ್ರದಾಯ ಪಾಲಿಸುವವರಿಗೆ ತೊಂದರೆ ಮಾಡಬಾರದು. ಸಿಂಧೂರ, ಹಿಜಾಬ್ ಧರಿಸುವುದರಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ. ಮೊದಲಿಂದಲೂ ಇರುವ ಸಂಪ್ರದಾಯಕ್ಕೆ ಅವಕಾಶ ಕೊಡಲಿ. ಕೇಸರಿ ಶಾಲು ಮೊದಲಿಂದಲೂ ಇರಲಿಲ್ಲ, ಅವರ ಧರ್ಮ ಅವರದ್ದು, ನಮ್ಮ ಧರ್ಮ ನಮ್ಮದು. ಮೊದಲಿಂದಲೂ ಇದೆ, ಈಗಲೂ ಪಾಲಿಸಿಕೊಂಡು ಹೋಗಲಿ. ಹೊಸದಾಗಿ ವಿವಾದ ಹುಟ್ಟು ಹಾಕುವುದು ಬೇಡ. ಇದು ಬಿಜೆಪಿಯವರ ಹುನ್ನಾರ ಎಂದು ಕಿಡಿಕಾರಿದರು.