Advertisement

Vijayapura; ಯತ್ನಾಳ ಹಠಾವೋ ಆರಂಭಿಸುತ್ತೇವೆ: ಬಿಜೆಪಿ ವಕ್ತಾರರಿಂದ ಎಚ್ಚರಿಕೆ

03:24 PM Dec 04, 2023 | keerthan |

ವಿಜಯಪುರ: ಬಿಜೆಪಿ ಶಾಸಕರಾಗಿ ಸ್ವಪಕ್ಷೀಯ ನಾಯಕರನ್ನೇ ನಿಂದನೆ ಮಾಡುತ್ತ ಪಕ್ಷಕ್ಕೆ ಮುಜುಗುರ ಉಂಟು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಕ್ಷಣ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹಿಸುವ ಹೋರಾಟ ಆರಂಭಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಡಾ.ಸುರೇಶ ಬಿರಾದಾರ ಎಚ್ಚರಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾಗೋಷ್ಠಿಯುದ್ದಕ್ಕೂ ಶಾಸಕ ಬಸನಗೌಡ ಪಾಟೀಲ ಅವರ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ನನ್ನ ವ್ಯಕ್ತಿಗತ ನಿಂದನೆ ಮಾಡುವ ಜೊತೆಗೆ ನಾನು ಪರಿಶ್ರಮದಿಂದ ಕಟ್ಟಿದ ಶಿಕ್ಷಣ ಸಂಸ್ಥೆಯ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಡೊನೇಶನ್ ಹೆಸರಿನಲ್ಲಿ ಲೂಟಿ ಮಾಡಿದ್ದಾಗಿ ನನ್ನ ಶಿಕ್ಷಣ ಸಂಸ್ಥೆಯ ವಿರುದ್ಧ ದೂರುವ ಯತ್ನಾಳ, ಸ್ವಯಂ ತಾವೂ ಕೂಡ ಹಲವು ಶಾಲಾ-ಕಾಲೇಜುಗಳನ್ನು ನಡೆಸುತ್ತಿದ್ದು, ಅವರು ಪಡೆಯುವ ಡೊನೇಶನ್ ಎಷ್ಟು ಎಂದು ಹೇಳಲಿ ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ ತಮಗೆ ಆ ಸ್ಥಾನಗಳು ಸಿಗದಿದ್ದಾಗ ಆ ಸ್ಥಾನ ಪಡೆದಿರುವ ನಾಯಕರ ವಿರುದ್ಧ ಅನಗತ್ಯ ಅಶ್ಲೀಲ, ಅಸಭ್ಯ ಪದಗಳನ್ನು ಬಳಸಿ ನಿಂದಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಹಂತದಿಂದ ಈ ಹಂತದವರೆಗೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನನ್ನ ಬಗ್ಗೆಯೂ ಈಚೆಗೆ ವೇದಿಕೆಯಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ನಾನೂ ಟಿಕೇಟ್ ಆಕಾಂಕ್ಷಿಯಾಗಿದ್ದೇ ಅವರ ವಕ್ರದೃಷ್ಟಿಗೆ ಕಾರಣವಾಗಿದೆ ಎಂದರು.

ಅಲ್ಲದೇ ಇದೀಗ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿರುವುದರಿಂದ ನನ್ನನ್ನು ಗುರಿಯಾಗಿಸಿ ಸಾರ್ವಜನಿಕ ವೇದಿಕೆಗಳಲ್ಲಿ ನಿಂದನೆ ಮಾಡುತ್ತಿದ್ದಾರೆ. ವೇದಿಕೆ ಹಾಗೂ ಮೈಕ್ ಸಿಕ್ಕರೆ ಇವರು ತಾವು ಪಾಲ್ಗೊಂಡ ಕಾರ್ಯಕ್ರಮದ ಕುರಿತು ಸಾಂದರ್ಭಿಕ ಮಾತನಾಡದೇ ಕೇವಲ ಬಿಜೆಪಿ ನಾಯಕರ ಬಹಿರಂಗ ನಿಂದನೆಗೆ ಸಮಯ ಮೀಸಲಿಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

ಸಂಸದ, ಕೇಂದ್ರ ಸಚಿವ ಸ್ಥಾನ, ಶಾಸಕ, ಎಂಎಲ್‍ಸಿ ಎಲ್ಲ ಅಧಿಕಾರ ಅನುಭವಿಸಿರುವ ಯತ್ನಾಳ ಇದೀಗ, ವಿಧಾನಸಭೆ ವಿಪಕ್ಷದ ನಾಯಕನ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಅವಕಾಶ ಸಿಕ್ಕಿಲ್ಲ ಎಂದು ಪಕ್ಷದ ನಾಯಕರ ಹರಿಹಾಯುತ್ತಿದ್ದಾರೆ. ಇವರಿಗೆ ನಿಜಕ್ಕೂ ಧೈರ್ಯ ಇದ್ದರೆ ವಿಜಯಪುರ ಕ್ಷೇತ್ರ ಬಿಟ್ಟು ಈ ಹಿಂದೆ ಪರಾಭವಗೊಂಡಿದ್ದ ದೇವರಹಿಪ್ಪರಗಿ ಅಥವಾ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಇಷ್ಟಕ್ಕೂ ಬಸನಗೌಡ ಪಾಟೀಲ ಯತ್ನಾಳ ಹಿಂದೂ ಹುಲಿಯೂ ಅಲ್ಲ, ನೇರ ಎದೆಗಾರಿಕೆಯ ಧೈರ್ಯವಂತನೂ ಆಲ್ಲ. ಜೆಡಿಎಸ್ ಪಕ್ಷದಲ್ಲಿದ್ದಾಗ ಸುರುಕುಂಬ ಹಂಚಿ ನಮಾಜ ಮಾಡಿದ್ದ ವ್ಯಕ್ತಿ ಇದೀಗ ತಮ್ಮನ್ನು ತಾವು ಹಿಂದು ಹುಲಿ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಹೊಂದಾಣಿಕೆ ರಾಜಕೀಯದಿಂದ ಶಾಸಕರಾಗಿ ಆಯ್ಕೆಯಾಗಿರುವ ಯತ್ನಾಳ ಪಕ್ಷನಿಷ್ಟ ನಾಯಕನಲ್ಲ ಎಂದರು ಕಿಡಿ ಕಾರಿದರು.

ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ನಡೆದ ಗಲಭೆಯಲ್ಲಿ ಪೊಲೀಸ್ ಲಾಠಿ ಪ್ರಹಾರವಾಗಿ, ಪ್ರಕರಣ ದಾಖಲಾಗುತ್ತಲೇ ಕೊಲ್ಹಾರಪುಕ್ಕೆ ಓಡಿಹೋಗಿ ಎದೆನೋವು ಎಂದು ಆಸ್ಪತ್ರೆ ಸೇರಿಕೊಂಡಿದ್ದರು. ಇವರನ್ನು ನಂಬಿದವರು ಜೈಲುಪಾಲಾಗಿದ್ದರು ಎಂದು ಟೀಕಿಸಿದರು.

ಆದರೆ ಸಿದ್ಧರಾಯಮ್ಮ ವಿರುದ್ಧ ಹೋರಾಟದಲ್ಲಿ ಕಾರ್ಯಕರ್ತರ ಬಂಧನವಾದಾಗ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದ ನಾನು, ಕಾರ್ಯಕರ್ತರು ಜೈಲುಪಾಲಾಗದಂತೆ ಕಾನೂನು ಸಂಘರ್ಷ ನಡೆಸಿದ್ದೆ. ಅಲ್ಲದೇ ಸದರಿ ಪ್ರಕರಣದಲ್ಲಿ ನನ್ನನ್ನೇ ಮೊದಲ ಆರೋಪಿ ಸ್ಥಾನಕ್ಕೆ ತಳ್ಳಿದರೂ ಸಮರ್ಥವಾಗಿ ಎದುರಿಸಿದ್ದೇನೆ. ಇದು ಪಕ್ಷದ ಕಾರ್ಯಕರ್ತರ ರಕ್ಷಿಸುವ ನಾಯಕನ ಗುಣ ಎಂದು ಟೀಕೆಗಳ ಮಳೆ ಸುರಿಸಿದರು.

ಯತ್ನಾಳ ಕೂಡಲೇ ನನ್ನ ವಿರುದ್ಧದ ಟೀಕೆ ಹಾಗೂ ಅನಗತ್ಯ ನಿಂದನೆಯನ್ನು ನಿಲ್ಲಸಬೇಕು. ಇಲ್ಲವಾದಲ್ಲಿ ಅವರ ಸಾರಥ್ಯದಲ್ಲಿರುವ ವಿವಿಧ ಸಂಸ್ಥೆಗಳಲ್ಲಿನ ಲೋಪಗಳನ್ನು ಬಹಿರಂಗವಾಗಿ ದಾಖಲೆ ಸಮೇತ ಜನರ ಮುಂದಿಡಬೇಕಾದೀತು ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next