ಪಣಜಿ: ಕಲಂಗುಟ್ ಪಂಚಾಯತ್ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಕುರಿತು ನಡೆದ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದ್ದು, ಆಡಳಿತಾರೂಢ ಬಿಜೆಪಿ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುತ್ತಿದೆ. ಗೋವಾವನ್ನು ಮತ್ತೊಂದು ಮಣಿಪುರ ಆಗಲು ನಮ್ಮ ಪಕ್ಷ ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ರಿಚಾ ಭಾರ್ಗವ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಣಿಪುರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದು, ಆಡಳಿತ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಜನರ ನಡುವೆ ಘರ್ಷಣೆ ಸೃಷ್ಟಿಸುವ ಮೂಲಕ ರಾಜ್ಯದ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂದರು.
ಅಭಿವೃದ್ಧಿ ಕಾರ್ಯಗಳನ್ನು ಸಾಧಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸಮಸ್ಯೆಯನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ಕಲಂಗುಟ್ ನಲ್ಲಿ ನಡೆದ ಘಟನೆಯೇ ಇದಕ್ಕೆ ಉದಾಹರಣೆ. ಬಿಜೆಪಿ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಈ ಧಾರ್ಮಿಕ ಸಮುದಾಯಗಳ ನಡುವೆ ಗಲಭೆ ಮತ್ತು ಹೊಡೆದಾಟದ ವಿಷಯಗಳನ್ನು ಪ್ರಸ್ತುತಪಡಿಸುವ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದರು.
ಬಿಜೆಪಿ ಚುನಾವಣ ಸಮಯದಲ್ಲಿ ಕಲಂಗುಟ್‍ನಂತಹ ಘಟನೆಗಳನ್ನು ನಡೆಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಿಕೆ ಹೇಳಿದರು. ಇಂತಹ ಸಮಯದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿಶ್ವಾಸ್ ನಾಗ್ವೇಕರ್, ದೇವಸೂರ್ಭಿ ಯದುವಂಶಿ, ರೊನಾಲ್ಡೊ ರೊಸಾರಿಯೊ, ರಿಯಾನ್ ಲೋಬೋ, ಪ್ರದೀಪ್ ಹರ್ಮಾಲ್ಕರ್ ಮತ್ತು ಪ್ರಮೇಶ್ ಮಾಯೆಕರ್ ಉಪಸ್ಥಿತರಿದ್ದರು.