Advertisement

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ: ಸಿದ್ದರಾಮಯ್ಯ ವಿಶ್ವಾಸ

02:56 PM Dec 30, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜನರ ತೀರ್ಪು ಇಂದು ಹೊರಬಿದ್ದಿದೆ. ಚುನಾವಣೆಯಾದ 1187 ಸ್ಥಾನಗಳ ಪೈಕಿ 500 ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದೆ. ಫಲಿತಾಂಶದಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ ಎಂಬುದು ಕಂಡು ಬರುತ್ತದೆ. ಈ ಫಲಿತಾಂಶ ನಮಗೆ ಖುಷಿ ಕೊಟ್ಟಿದೆ ಎಂದರು.

ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಜಂಭದಿಂದ ವರ್ತಿಸುತ್ತಾರೆ, ಆದರೆ ಬರೀ ಹಣವೊಂದೇ ಚುನಾವಣೆಯಲ್ಲಿ ಗೆಲ್ಲಲು ಸಾಕಾಗಲ್ಲ. ಜನರ ಪರವಾಗಿ ಕೆಲಸ ಮಾಡಬೇಕು, ಪ್ರಾಮಾಣಿಕ ಆಡಳಿತ ಕೊಡಬೇಕು. ಆಗ ಜನ ಮತ ನೀಡುತ್ತಾರೆ. ಈ ಹಿಂದಿನ ಪರಿಷತ್ ಚುನಾವಣೆಯಲ್ಲಿ ನಾವು ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ ಹನ್ನೊಂದು ಸ್ಥಾನಗಳನ್ನು ಗೆದ್ದಿದ್ದರೂ ಕೂಡ ಶೇಕಡಾವಾರು ಮತಗಳ ಪ್ರಮಾಣ ನಮಗೆ ಹೆಚ್ಚು ಬಂದಿದೆ. ನಮಗೆ 48% ಮತ ಬಂದಿದ್ದರೆ, ಬಿಜೆಪಿ ಗೆ 41% ಬಂದಿತ್ತು. ಡಿಸೆಂಬರ್ 27 ರಂದು 1187 ಸ್ಥಾನಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ 500 ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 430, ಜೆಡಿಎಸ್ 45, ಇತರೆ 207 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಫಲಿತಾಂಶದಿಂದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತದೆ ಎಂದರು.

ಇದನ್ನೂ ಓದಿ:ನಾವೆಲ್ಲರೂ ದೇವೇಗೌಡರು ಆಗುವುದಕ್ಕೆ ಆಗುತ್ತದಾ?: ಶಿವಕುಮಾರ್‌ಗೆ ಎಚ್‌ಡಿಕೆ ತಿರುಗೇಟು

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ನಾನು ಯಾವಾಗಲೂ ಮುಂದಿನ ಚುನಾವಣೆಗಳ ದಿಕ್ಸೂಚಿ ಎಂದು ಹೇಳಲ್ಲ. ಆದರೆ ಇದರಿಂದ ಜನರ ಒಲವು ಯಾರ ಕಡೆಗಿದೆ ಎಂದು ತಿಳಿಯುತ್ತದೆ ಎಂಬುದು ನನ್ನ ಅಭಿಪ್ರಾಯ. ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಇದರಿಂದ ಜನರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಪಕ್ಷ ಇಂದು ಪ್ರಬಲ ಸಂಘಟನೆಯಾಗಿ ಬೆಳೆಯುತ್ತಿದೆ. ಇದನ್ನು ನಾವು ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತೇವೆ ಜೊತೆಗೆ ಕಾಂಗ್ರೆಸ್ ಪಕ್ಷ ನಮಗೆ ಬೇಕು ಎಂದು ಜನರೇ ಬಯಸುತ್ತಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ನೂರಕ್ಕೆ ನೂರು ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದರು.

ಹಿಂದೂ ದೇವಾಲಯಗಳನ್ನು ಸರ್ಕಾರ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ನಮ್ಮ ತಕರಾರು ಖಂಡಿತಾ ಇಲ್ಲ. ಸಾರಾಸಗಟಾಗಿ ಎಲ್ಲಾ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕು. ಕಾರಣ ರಾಜ್ಯದ ಸಾಕಷ್ಟು ದೇವಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ, ಅವುಗಳನ್ನು ಸ್ವತಂತ್ರಗೊಳಿಸಿದರೆ ದೇವಾಲಯ ನಡೆಸಿಕೊಂಡು ಹೋಗುವುದು ಕಷ್ಟವಾಗಿ ಉಪಕಾರಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next