ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ಮೊದಲ ಬಾರಿಗೆ ಸೋಲು ಕಂಡಿದೆ. ಈ ಪಂದ್ಯದಲ್ಲಿ ಭಾರತದ ರಿಷಭ್ ಪಂತ್ ಆಟದ ವೈಖರಿಗೆ ಟೀಕೆಗಳು ವ್ಯಕ್ತವಾಗಿದೆ.
ಪಂತ್ ಆಟದ ಬಗ್ಗೆ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ನಾವು ಪಂತ್ ಜೊತೆಗೆ ಮಾತನಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ ಆಕ್ರಮಣಕಾರಿಯಾಗಿ ಆಡಲು ಹೋಗಿ ಶೂನ್ಯ ಮೊತ್ತಕ್ಕೆ ಔಟಾಗಿದ್ದರು. “ರಿಷಭ್ ಒಬ್ಬ ಉತ್ತಮ ಆಟಗಾರ ಎಂದು ನಮಗೆ ತಿಳಿದಿದೆ. ಅವರು ನಿರ್ದಿಷ್ಟ ರೀತಿಯಲ್ಲಿ ಆಡುತ್ತಾರೆ ಅದು ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಆದರೆ ಖಂಡಿತವಾಗಿಯೂ ನಾವು ಅವರೊಂದಿಗೆ ಒಂದು ಮಟ್ಟದ ಮಾತುಕತೆ ನಡೆಸುತ್ತೇವೆ. ರಿಷಭ್‌ಗೆ ಧನಾತ್ಮಕ ಅಥವಾ ಆಕ್ರಮಣಕಾರಿ ಆಟಗಾರರಾಗಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ ಯಾವ ಸಮಯದಲ್ಲಿ ಆಕ್ರಮಣಕಾರಿಯಾಗಿ ಆಡುತ್ತಾರೆ ಎನ್ನುವುದು ಕೂಡಾ ಮುಖ್ಯ ” ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ:ಅಡಿಲೇಡ್ ಟೆನಿಸ್’ ಕೂಟ : ಸೆಮಿಫೈನಲ್‌ಗೆ ನೆಗೆದ ಸಾನಿಯಾ ಮಿರ್ಜಾ ಜೋಡಿ
ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಡೀನ್ ಎಲ್ಗರ್ ಅಜೇಯ 96 ರನ್ ಗಳಿಸುವ ಮೂಲಕ ನಾಯಕನ ಆಟವಾಡಿದರು. ಈ ಮೂಲಕ ಆತಿಥೇಯರ7 ವಿಕೆಟ್‌ಗಳ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಈ ಬಗ್ಗೆ ಮಾತನಾಡಿದ ದ್ರಾವಿಡ್, “ಡೀನ್ ಎಲ್ಗರ್ ಚೆನ್ನಾಗಿ ಆಡಿದರು, ಅವರಿಗೆ ಕ್ರೆಡಿಟ್ ನೀಡಬೇಕಾಗಿದೆ. ಅವರು ಕ್ರೀಸ್ ಕಚ್ಚಿ ನಿಂತು ಕೆಲವು ಕಷ್ಟಕರ ಅವಧಿಗಳಲ್ಲಿ ಹೋರಾಟ ನಡೆಸಿ ಆಡಿದರು” ಎಂದು ಪ್ರಶಂಸೆ ವ್ಯಕ್ತಪಡಿಸಿದರು.