ಹಾಸನ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧಿಸಿದ್ದೇವೆ. ಈ ರಾಷ್ಟ್ರದಲ್ಲಿ ಪ್ರಧಾನಿಯಾಗಿ ಅಧಿಕಾರ ನಡೆಸಿದ ಈ ದೇವೇಗೌಡ ಇಲ್ಲೇ ಇದ್ದೇನೆ.
ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲೆಂದೇ ನಾವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿರುವ 3 ಕ್ಷೇತ್ರಗಳಲ್ಲೂ ಗೆದ್ದು ಕಾಂಗ್ರೆಸ್ ಅನ್ನು ಮುಗಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಪಥ ಮಾಡಿದರು.
ಹೇಮಾವತಿ ಪ್ರತಿಮೆ ಬಳಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅನ್ನು ನಾಶ ಮಾಡಿದಾಗ ನಮಗೆ ನೆಮ್ಮದಿ ಎಂದು ಒಬ್ಬರು ಹೇಳುತ್ತಿದ್ದಾರೆ. ಮತ್ತೊಬ್ಬರು ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಕೇಳಿದ್ದಾರೆ. ಈ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಸಿಎಂ, ಡಿಸಿಎಂಗೆ ತಿರುಗೇಟು ನೀಡಿದರು.
ಮೈತ್ರಿ ಚುನಾವಣೆಗೆ ಸೀಮಿತವಲ್ಲ, ನಿರಂತರ ಇರಲಿದೆ: ಬಿಜೆಪಿ-ಜೆಡಿಎಸ್ ಮೈತ್ರಿ ಈ ಚುನಾವಣೆಗೆ ಮಾತ್ರ ಸೀಮಿತವಲ್ಲ. ಅದು ಮುಂದೆಯೂ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಹಾಸನದಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಅನ್ನು ಮುಗಿಸುತ್ತೇವೆ ಎಂದು ಹೇಳುವವರನ್ನು ರಾಜಕೀಯವಾಗಿ ಮುಗಿಸುವವರೆಗೂ ಈ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದರು. ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, ಈ ಮೈತ್ರಿ ಹೀಗೆ ಮುಂದುವರಿಯಲಿದ್ದು, ಕಾಂಗ್ರೆಸ್ ಅನ್ನು ಪ್ರತಿ ಚುನಾವಣೆಯಲ್ಲೂ ಸೋಲಿಸುವುದಾಗಿ ಹೇಳಿದರು.